ಬೈಕ್ ರ್‍ಯಾಲಿ ಮೂಲಕ ಲಾರಿ ಮುಷ್ಕರಕ್ಕೆ ಬೆಂಬಲ

| Published : Jan 19 2024, 01:46 AM IST

ಸಾರಾಂಶ

ಕಾಯ್ದೆ ತಿದ್ದುಪಡಿಯಿಂದಾಗಿ ಸರಕು ಸಾಗಾಟದ ವಾಹನಗಳಿಗೆ ಚಾಲಕರು ಬರಲು ಹಿಂಜರಿಯುವಂತಾಗಿದೆ. ಯಾರೂ ಅಪಘಾತವನ್ನು ಬೇಕಂತಲೇ ಮಾಡುವುದಿಲ್ಲ. ಸಣ್ಣ ವಾಹನಗಳು ಬಂದು ಲಾರಿಗೆ ಡಿಕ್ಕಿ ಹೊಡೆದರೂ ಲಾರಿ ಚಾಲಕನ ಮೇಲೆಯೇ ಪ್ರಕರಣ ದಾಖಲಾಗುತ್ತದೆ

ಚಿಂತಾಮಣಿ: ಅಪಘಾತ ನಡೆಸಿ ಪರಾರಿ (ಹಿಟ್ ಆಂಡ್ ರನ್) ಆಗುವ ಪ್ರಕರಣಗಳಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರವು ಚಾಲಕರಿಗೆ ಮಾರಕವಾಗುವ ರೀತಿಯಲ್ಲಿ ತಂದಿರುವ ತಿದ್ದುಪಡಿ ಕಾಯ್ದೆಯನ್ನು ಹಿಂಪಡೆಯಬೇಕೆಂದು ಒತ್ತಾಯಿಸಿ ಬುಧವಾರ ಮಧ್ಯರಾತ್ರಿ ೧೨ ರಿಂದ ಅನಿರ್ದಿಷ್ಟಾವಧಿ ಲಾರಿ ಮುಷ್ಕರ ಆರಂಭಗೊಂಡಿದ್ದು ಇಲ್ಲಿನ ಲಾರಿ ಮಾಲೀಕರ ಹಾಗೂ ಚಾಲಕರ ಅಸೋಸಿಯೆಷನ್ ಬೆಂಬಲ ವ್ಯಕ್ತಪಡಿಸಿದೆ.

ಕರ್ನಾಟಕ ಲಾರಿ ಮಾಲೀಕರ ಸಂಘವು ನೀಡಿರುವ ಕರೆಗೆ ಸ್ಪಂದಿಸಿರುವ ಚಿಂತಾಮಣಿ ಲಘು ಸರಕು ವಾಹನ ಮಾಲೀಕರು ಮತ್ತು ಚಾಲಕರ ಸಂಘ, ಟೆಂಪೋ ಗೂಡ್ಸ್ ವಾಹನಗಳ ಮಾಲೀಕರು, ಚಾಲಕರು, ಒಟ್ಟುಗೂಡಿ ನಗರದ ರಾಮಕುಂಟೆ ಸಮೀಪದಿಂದ ಬೈಕ್ ರ್‍ಯಾಲಿಯನ್ನು ನಡೆಸಿ ನಗರದ ಪ್ರಮುಖ ರಸ್ತೆಗಳಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದರು.

ಕಾಯ್ದೆ ವಾಪಸ್‌ ಪಡೆಯಲು ಆಗ್ರಹ

ಕಾಯ್ದೆ ತಿದ್ದುಪಡಿಯಿಂದಾಗಿ ಸರಕು ಸಾಗಾಟದ ವಾಹನಗಳಿಗೆ ಚಾಲಕರು ಬರಲು ಹಿಂಜರಿಯುವಂತಾಗಿದೆ. ಯಾರೂ ಅಪಘಾತವನ್ನು ಬೇಕಂತಲೇ ಮಾಡುವುದಿಲ್ಲ. ಸಣ್ಣ ವಾಹನಗಳು ಬಂದು ಲಾರಿಗೆ ಡಿಕ್ಕಿ ಹೊಡೆದರೂ ಲಾರಿ ಚಾಲಕನ ಮೇಲೆಯೇ ಪ್ರಕರಣ ದಾಖಲಾಗುತ್ತದೆ. ಈ ತಿದ್ದುಪಡಿ ಕಾಯ್ದೆ ವಾಪಸ್ ಪಡೆಯುವವರೆಗೆ ಮುಷ್ಕರ ಹಿಂಪಡೆಯುವುದಿಲ್ಲವೆಂದು ಚಿಂತಾಮಣಿ ಲಾರಿ ಮಾಲೀಕರ ಅಸೋಸಿಯೇಷನ್ ನ ಅಧ್ಯಕ್ಷ ಕೆ.ಜಿ.ಎನ್.ಬಾಬು ತಿಳಿಸಿದರು.

ಮುಷ್ಕರದಲ್ಲಿ ಭಾಗವಹಿಸಿದ್ದ ಹಲವರು ಮಾತನಾಡಿ ಜನವಿರೋಧಿ ಕಾಯ್ದೆಯನ್ನು ಕೂಡಲೇ ಹಿಂಪಡೆಯುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದರು. ಈ ಸಂದರ್ಭದಲ್ಲಿ ಲಾರಿ ಮಾಲೀಕರ ಮತ್ತು ಚಾಲಕರ ಅಸೋಸಿಯೇಷನ್ ಉಪಾಧ್ಯಕ್ಷ ಪೋತಲಪ್ಪ, ಕಾರ್ಯದರ್ಶಿ ಎಸ್.ಎನ್.ನಾಗರಾಜ್, ಜಂಟಿಕಾರ್ಯದರ್ಶಿ ಟಿ.ಎಸ್.ಎಂ.ತಜಮುಲ್, ಖಜಾಂಚಿ ಎಂ.ಶಫೀಕ್ ಅಹಮ್ಮದ್, ಬೆಂಗಳೂರು ಬಸ್ ಚಾಲಕರ ಸಂಘ ಅಧ್ಯಕ್ಷ ಸಂತೋಷ್, ಉಪಾಧ್ಯಕ್ಷ ಮುನಿಯಪ್ಪ ಭಾಗವಹಿಸಿದ್ದರು.