ಸಾರಾಂಶ
ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ಕೃಷ್ಣರಾಜ ಸಾಗರ ಜಲಾಶಯ ಸುರಕ್ಷಿತ ಪ್ರದೇಶ. ಇಲ್ಲಿನ ಮೂಲ ಪಾರಂಪರಿಕತೆ ಉಳಿಸಿಕೊಂಡು ಪರಿಸರ ಸ್ನೇಹಿ ಉದ್ಯಾನವನ ಮಾಡಿದರೆ ನಮ್ಮ ಬೆಂಬಲವಿದೆ ಎಂದು ಮೈಸೂರು ರಾಜವಂಶಸ್ಥ ಹಾಗೂ ಮೈಸೂರು-ಕೊಡಗು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಹೇಳಿದರು.ಗುರುವಾರ ಕೆಆರ್‌ಎಸ್ ಅಣೆಕಟ್ಟೆಗೆ ಆಗಮಿಸಿದ ಒಡೆಯರ್ ಅವರು, ಕಾವೇರಿ ಮಾತೆಗೆ ಪೂಜೆ ಸಲ್ಲಿಸಿದ ನಂತರ ಜಲಾಶಯಕ್ಕೆ ಬಾಗಿನ ಸಮರ್ಪಣೆ ಮಾಡಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.
ರಾಜ್ಯ ಸರ್ಕಾರ ಕೆಆರ್‌ಎಸ್ ಬಳಿ ಬೃಂದಾವನ ಉದ್ಯಾನವನ ಅಭಿವೃದ್ಧಿ ಕುರಿತಂತೆ ಪ್ರತಿಕ್ರಿಯಿಸಿದ ಒಡೆಯರ್, ಕೆಆರ್‌ಎಸ್ ಬಳಿ ಪರಿಸರ ಸ್ನೇಹಿ ಉದ್ಯಾನವನ ಅಭಿವೃದ್ಧಿ ಮಾಡುವುದಾದರೆ ನನ್ನ ಅಭ್ಯಂತವಿಲ್ಲ. ಆದರೆ, ಕೇವಲ ಮನೋರಂಜನಾ ಪಾರ್ಕ್ ಮಾಡುವುದಾದರೆ ನನ್ನ ವಿರೋಧವಿದೆ ಎಂದರು.ಕೆಆರ್‌ಎಸ್‌ನಲ್ಲಿರುವು ಪಾರಂಪರಿಕ ಉದ್ಯಾನವನ. ಅದನ್ನು ಉಳಿಸಿ ಅಭಿವೃದ್ಧಿ ಮಾಡಬೇಕು. ಅಣೆಕಟ್ಟೆ ನಿರ್ಮಾಣ ಸಂದರ್ಭದಲ್ಲಿ ಇಲ್ಲಿನ ಬೃಂದಾವನವನ್ನು ಪರಿಸರ ಸ್ನೇಹವಾಗಿ ನೀರಿನ ಕಾರಂಜಿಗಳನ್ನು ನಿರ್ಮಿಸಿ ನೀರು ಕಲುಷಿತವಾಗದಂತೆ ನಿರ್ಮಿಸಿದ್ದಾರೆ ಎಂದರು.
ಬೃಂದಾವನದದಲ್ಲಿ ಹಣ್ಣಿನ ತೋಟ, ತೆಂಗಿನ ತೋಟಗಳು ಇದ್ದು, ಇದನ್ನು ರೈತರಿಗೆ ಉಪಯೋಗವಾಗುವಂತೆ ಅಭಿವೃದ್ಧಿ ಪಡಿಸಬೇಕು. ಅಣೆಕಟ್ಟೆಗೆ ತೊಂದರೆಯಾಗದಂತೆ ಪರಿಸರ ಮಯವಾಗಿ ಉದ್ಯಾನವ ಮಾಡಲಿ. ಆದರೆ, ಯಾವ ರೀತಿ ಮೇಲ್ದದರ್ಜೆಗೆ ಉದ್ಯಾನವನ ಮಾಡುತ್ತಾರೆ ಎಂಬುದು ಮಾಹಿತಿ ನೀಡಿಲ್ಲ ಎಂದರು.ಮನೋರಂಜನಾ ಉದ್ಯಾನಮಾಡಲು ಬೇಕಾದಷ್ಟು ಜಾಗಗಳಿವೆ. ಪರಿಸರಕ್ಕೆ ವಿರೊಧ ಹಾಗೂ ಅಣೆಕಟ್ಟೆ ಪ್ರಸ್ತುತ ಉದ್ಯಾನವನ ಮೂಲಸ್ಥಿತಿ ಬದಲಿಸಿ ಕಲುಷಿತಗೊಳಿಸುವುದನ್ನು ನಾವು ನಿರಂತರವಾಗಿ ವಿರೋಧವಾಗಿರುತ್ತೇವೆ ಎಂದು ತಿಳಿಸಿದರು.
ಕಾವೇರಿ ಮಾತೆ ಈ ಬಾರಿ ಸಮೃದ್ಧವಾಗಿ ಅಣೆಕಟ್ಟೆ ತುಂಬಿದ್ದಾಳೆ. ಇದರಿಂದ ಮಂಡ್ಯ ಹಾಗೂ ಮೈಸೂರು, ಬೆಂಗಳೂರು ಭಾಗದ ಜನರು ಉತ್ತಮವಾಗಿ ಫಸಲು ಬೆಳೆದು ನೆಮ್ಮದಿಯಾಗಿರಿಲಿ ಎಂಬುದು ನಮ್ಮ ಆಶಯ. ನಮ್ಮ ಮನೆತನಕ್ಕೆ ಮಂಡ್ಯ ಜಿಲ್ಲೆಯ ಬಾಂದ್ಯವ್ಯ ಮನದಲ್ಲಿದೆ. ಇಲ್ಲಿನ ಜನರು ಪ್ರೀತಿ, ಗೌರವಪೂರ್ವಕವಾಗಿ ನೋಡಿಕೊಳ್ಳುತ್ತಾರೆ. ಇದೇ ರೀತಿ ಪ್ರತಿಭಾರಿ ಅಣೆಕಟ್ಟೆ ತುಂಬಿ ರೈತರ ಬದುಕು ಹಸನಾಗಲಿ ಎಂದು ಹಾರೈಸಿದರು.ಅಣೆಕಟ್ಟೆಗೆ ಅಪಾಯವಿಲ್ಲ:
ಕೃಷ್ಣರಾಜಸಾಗರ ಅಣೆಕಟ್ಟೆ ಉತ್ತಮ ಸ್ಥಿತಿಯಲ್ಲಿದೆ. ಇಲ್ಲಿನ ಗೇಟುಗಳನ್ನು ನುರಿತ ತಂತ್ರಜ್ಞಾನಿಗಳು ಕಾಲ-ಕಾಲಕ್ಕೆ ಪರಿಶೀಲನೆ ನಡೆಸಿದ್ದಾರೆ. ಅವರ ಸಲಹೆಯಂತೆ ಸರ್ಕಾರ ಗೇಟುಗಳನ್ನು ಬದಲಾವಣೆ ಮಾಡಿಕೊಂಡು ಬಂದಿದೆ. ಹಾಗಾಗಿ ಯಾವುದೇ ಅಪಾಯವಿಲ್ಲ ಎಂದರು.ಈ ಅಣೆಕಟ್ಟೆಯಲ್ಲಿ ತಂತ್ರಜ್ಞಾನ ಉತ್ತಮವಾಗಿ ಬಳಕೆಯಾಗಿದೆ. ಜೊತೆಗೆ ಗೇಟುಗಳು ಚಿಕ್ಕದಾಗಿದ್ದು, ತೊಂದರೆಯಾದರೆ ತಕ್ಷಣ ಸರಿಪಡಿಸಬಹುದು. ಇಲ್ಲಿ ಕಾವೇರಿ ಮಾತೆ ಕೃಪೆಯಿದ್ದು ಯಾವುದೇ ತೊಂದರೆಯಿಲ್ಲ ಎಂದರು.
ಮೊದಲಿನಿಂದಲ್ಲೂ ರಾಜ್ಯದ ಮುಖ್ಯಮಂತ್ರಿ ಬಾಗಿನ ಅರ್ಪಿಸಿದ ನಂತರ ಇತರರು ಬಾಗಿನ ಅರ್ಪಿಸುವುದು ಸಂಪ್ರದಾಯವಾಗಿದೆ. ಅದನ್ನು ನಾವು ಕೂಡ ಪಾಲನೆ ಮಾಡುತ್ತೇವೆ. ನನಗೆ ಹಲವು ವರ್ಷಗಳಿಂದ ಬಾಗಿನ ಅರ್ಪಿಸಬೇಕೆಂಬು ಇಚ್ಚೇಯಾಗಿತ್ತು, ಇಂದು ನಾವೆಲ್ಲೂರು ಕೂಡಿ ಕಾವೇರಿಮಾತೆಗೆ ಬಾಗಿನ ಅರ್ಪಿಸಿದ್ದೇವೆ ಎಂದು ಸಂತಸ ವ್ಯಕ್ತಪಡಿಸಿದರು.ಪ್ರವಾಸಿಗರ ನಿಷೇಧ ತಪ್ಪು:
ನಾವು ಬಾಗಿನ ಸಮರ್ಪಣೆಗೆ ಬರುತ್ತೇವೆಂದು ಬೃಂದಾವನಕ್ಕೆ ಸಾರ್ವಜನಿಕರಿಗೆ ಪ್ರವೇಶವನ್ನು ಮಧ್ಯಾಹ್ನದ ತನಕ ನಿಷೇಧ ಮಾಡಿದ್ದು ತಪ್ಪು ಎನಿಸುತ್ತದೆ. ಅಧಿಕಾರಿಗಳು ಶಿಷ್ಟಾಚಾರ ಪಾಲನೆ ಮಾಡಿದ್ದು, ಅಧಿಕಾರಿಗಳು ಸೂಚನೆ ಪಾಲಿಸಿದ್ದಾರೆ. ಅವರನ್ನು ನಾವು ದೂಷಣೆ ಮಾಡುವುದು ಸರಿಯಲ್ಲ. ಮುಂದಿನ ಸಲ ನಾವು ಬಾಗಿನ ಅರ್ಪಿಸಲು ಬರುವಾಗ ಮತ್ತೆ ಈ ರೀತಿಯಾಗದಂತೆ ಮಾಡುತ್ತೇವೆ, ಸಾರ್ವಜನಿಕರ ಜೊತೆ ಪೂಜೆ ಸಲ್ಲಿಸುತ್ತೇವೆ ಎಂದರು.ಈ ವೇಳೆ ಬಿಜೆಪಿ ಮುಖಂಡ ಸಚ್ಚಿದನಾಂದ, ಜಿಲ್ಲಾಧ್ಯಕ್ಷ ಡಾ.ಇಂದ್ರೇಶ್, ತಾಲೂಕು ಅಧ್ಯಕ್ಷ ಪೀಹಳ್ಳಿ ರಮೇಶ್, ಮುಖಂಡರಾದ ಪಿ.ಸ್ವಾಮಿ, ಅಶೋಕ ಜಯರಾಂ, ಕೆ.ಎಸ್ ನಂಜುಂಡೇಗೌಡ, ಮೈಸೂರು ಬಿಜೆಪಿ ಗ್ರಾಮಾಂತರ ಅಧ್ಯಕ್ಷ ಎಲ್.ಆರ್ ಮಹದೇವಸ್ವಾಮಿ, ನಿರಂಜನ ಬಾಬು, ಪುರಸಭಾ ಸದಸ್ಯರಾದ ಎಸ್.ಟಿ ರಾಜು, ಎಸ್.ಪ್ರಕಾಶ್, ಗಂಜಾಂ ಶಿವು, ಕೃಷ್ಣಪ್ಪ, ಶ್ರೀನಿವಾಸ್ ಸೇರಿದಂತೆ ಬಿಜೆಪಿ ಕಾರ್ಯಕರ್ತರು, ಅಪಾರ ಬೆಂಬಲಿಗರು ಇದ್ದರು.
ಒಡೆಯರ್‌ಗೆ ಪೂರ್ಣಕುಂಭ ಸ್ವಾಗತಅಣೆಕಟ್ಟೆಗೆ ಬಾಗಿನ ಅರ್ಪಿಸಲು ಆಗಮಿಸಿದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರನ್ನು ನಾದಸ್ವರ, ವೀರಗಾಸೆ ಹಾಗೂ ಪೂರ್ಣ ಕುಂಭ ಹೊತ್ತ ಮಹಿಳೆಯರು ಸ್ವಾಗತ ಕೋರಿದರು.
ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ಪುಷ್ಪಗುಚ್ಛ ನೀಡಿ ಸ್ವಾಗತಿಸಿ ಅಣೆಕಟ್ಟೆಯ ಪ್ರಸ್ತತ ಸ್ಥಿತಿಗತಿಗಳ ಬಗ್ಗೆ ಮಾಹಿತಿ ನೀಡಿದರು. ನಂತರ ಎಲೆಕ್ಟಿಕ್ರಲ್ ವಾಹನದಲ್ಲಿ ಕುಳಿತು ಅಣೆಕಟ್ಟೆ ಹಿನ್ನೀರು ಮತ್ತು ಹೊರಹೋಗುತ್ತಿರುವುದನ್ನು ನೋಡಿದ ಯದುವೀರ್ ದತ್ತರು, ಕಾವೇರಿ ಮಾತೆಗೆ ಕೈಮುಗಿದರು.ವೇದಬ್ರಹ್ಮ ಡಾ ಬಾನುಪ್ರಕಾಶ್ ನೇತೃತ್ವದಲ್ಲಿ ವೈದಿಕರ ತಂಡ ಕಾವೇರಿ ಮಾತೆಗೆ ಬಾಗಿನ ಅರ್ಪಿಸುವ ಸ್ಥಳದಲ್ಲಿ ಒಡೆಯರ್ ಗಣಪತಿ ಪೂಜೆ, ಪೂಣ್ಯ ಅಹಾವಚನ, ಕಾವೇರಿ ಕಳಸ ಪೂಜೆ, ಕಾವೇರಿ ವಸ್ತ್ರ, ಫಲ, ಮಂಗಳದೃವ್ಯ, ಕ್ಷೀರ ಹಾಗೂ ಬಾಗಿನ ಸಮರ್ಪಣೆ ಮಾಡಿದರು. ಬಳಿಕ ಬೃಂದಾವನದಲ್ಲಿನ ಕಾವೇರಿ ಮಾತೆ ಪ್ರತಿಮೆ ಹಾಗೂ ಪಾದುಕೆಗೆ ಪೂಜೆ ಸಲ್ಲಿಸಿ ಪುಷ್ಪಾರ್ಚನೆ ಮಾಡಿ ಮಂಗಳಾರತಿ ಮಾಡಿದರು.ನಿಗಮದ ವತಿಯಿಂದ ಒಡೆಯರ್ ಅವರನ್ನು ಸನ್ಮಾನಿಸಿ ನೆನಪಿನ ಕಾಣಿಕೆ ನೀಡಲಾಯಿತು.