ಸಾರಾಂಶ
ಕೆ.ಆರ್.ಪೇಟೆ ತಾಲೂಕು ಕಚೇರಿ, ಸರ್ವೇ ಮತ್ತು ನೋಂದಣಿ ಇಲಾಖೆಗಳ ಎಲ್ಲಾ ಭೂ ದಾಖಲೆಗಳ ಡಿಜಿಟಲೀಕರಣಕ್ಕೆ ಸಚಿವ ಕೃಷ್ಣ ಭೈರೇಗೌಡರು ಮಾಡುತ್ತಿರುವ ಸುಧಾರಣಾ ಕ್ರಮಗಳು ಶ್ಲಾಘನೀಯವಾಗಿದೆ. ಇಲಾಖೆಯಲ್ಲಿ ಕೈಗೊಂಡಿರುವ ಸುಧಾರಣಾ ಕ್ರಮಗಳು ಬಹುದೊಡ್ಡ ಸುಧಾರಣಾ ಕ್ರಾಂತಿಗೆ ಮುನ್ನುಡಿ ಬರೆದಿದೆ.
ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ಕಂದಾಯ ಸಚಿವ ಕೃಷ್ಣ ಭೈರೇಗೌಡರು ತಮ್ಮ ಇಲಾಖೆಯಲ್ಲಿ ತಂದಿರುವ ಸುಧಾರಣಾ ಕ್ರಮಗಳಿಗೆ ನನ್ನ ಬೆಂಬಲವಿದೆ ಎಂದು ಶಾಸಕ ಎಚ್.ಟಿ.ಮಂಜು ಹೇಳಿದರು.ಪಟ್ಟಣದ ತಾಲೂಕು ಆಡಳಿತ ಸೌಧ ಆವರಣದ ಭೂ ದಾಖಲೆಗಳ ಸಂಗ್ರಹ ಕಚೇಯಲ್ಲಿ ಭೂ ದಾಖಲೆಗಳ ಇ-ಖಜಾನೆಯನ್ನು ಉದ್ಘಾಟಿಸಿ ಮಾತನಾಡಿ, ನೂರಾರು ವರ್ಷಗಳ ರೈತರ ಭೂ ದಾಖಲೆಗಳು ಇದುವರೆಗೂ ಕಾಗದದ ಮೇಲಿದ್ದು ಅವುಗಳ ಸಂರಕ್ಷಣೆ ಕಷ್ಟಕರವಾಗಿತ್ತು ಎಂದರು.
ತಾಲೂಕು ಕಚೇರಿ, ಸರ್ವೇ ಮತ್ತು ನೋಂದಣಿ ಇಲಾಖೆಗಳ ಎಲ್ಲಾ ಭೂ ದಾಖಲೆಗಳ ಡಿಜಿಟಲೀಕರಣಕ್ಕೆ ಸಚಿವ ಕೃಷ್ಣ ಭೈರೇಗೌಡರು ಮಾಡುತ್ತಿರುವ ಸುಧಾರಣಾ ಕ್ರಮಗಳು ಶ್ಲಾಘನೀಯವಾಗಿದೆ. ಇಲಾಖೆಯಲ್ಲಿ ಕೈಗೊಂಡಿರುವ ಸುಧಾರಣಾ ಕ್ರಮಗಳು ಬಹುದೊಡ್ಡ ಸುಧಾರಣಾ ಕ್ರಾಂತಿಗೆ ಮುನ್ನುಡಿ ಬರೆದಿದೆ ಎಂದು ಸಚಿವರ ಕಾರ್ಯವೈಖರಿಯನ್ನು ಮುಕ್ತಕಂಠದಿಂದ ಶ್ಲಾಘಿಸಿದರು.ಭೂ ದಾಖಲೆಗಳ ಡಿಜಿಟಲೀಕರಣದಿಂದ ಆಡಳಿತದಲ್ಲಿ ಸುಧಾರಣೆಯಾಗಲಿದೆ. ರೈತರಿಗೆ ತ್ವರಿತವಾಗಿ ಬೇಕಾದ ದಾಖಲೆಗಳು ಸಿಗುತ್ತವೆ. ಹಳೆಯ ದುಸ್ಥಿತಿಯಲ್ಲಿರುವ ಭೂ ದಾಖಲೆಗಳನ್ನು ಶಾಶ್ವತ ಡಿಜಿ ದಾಖಲೆಗಳಾಗಿ ಪರಿವರ್ತಿಸುತ್ತಿರುವುದರಿಂದ ಅವುಗಳ ಸಂರಕ್ಷಣೆಯಾಗುತ್ತದೆ ಎಂದರು.
ರೈತರು ತಮಗೆ ಬೇಕಾದಾಗ ಖಾಸಗಿ ಕಂಪ್ಯೂಟರ್ ಸೆಂಟರ್‌ಗಳ ಮೂಲಕವೂ ತಮ್ಮ ದಾಖಲಾತಿ ಪಡೆದುಕೊಳ್ಳಬಹುದು. ಇದರಿಂದ ರೈತರು ಭೂ ದಾಖಲೆಗಳಿಗೆ ತಾಲೂಕು ಕಚೇರಿಗೆ ಸುತ್ತುವುದು ತಪ್ಪುತ್ತದೆ. ಸಿಬ್ಬಂದಿ ಸುಲಿಗೆಯೂ ನಿಲ್ಲುತ್ತದೆ ಎಂದರು.ಭೂ ದಾಖಲೆಗಳು ಇ-ತಂತ್ರಾಂಶದಲ್ಲಿ ಸಂಗ್ರಹವಾಗುವುದರಿಂದ ಹಳೆಯ ದಾಖಲೆಗಳನ್ನು ತಿದ್ದುವುದು ಅಥವಾ ಕಳುಹು ಮಾಡುವುದು ಅಸಾಧ್ಯ ಇ-ತಂತ್ರಜ್ಞಾನದ ಶಕ್ತಿ ನೇರವಾಗಿ ರೈತರಿಗೆ ತಲುಪಲಿದೆ. ಡಿಜಿಟಲಿಕರಣದ ಸ್ಪರ್ಶದಿಂದ ಉತ್ತಮ ಜನಪರ ಆಡಳಿತ ಮತ್ತು ರೈತರ ಭೂ ಒಡೆತನಕ್ಕೊಂದು ಗ್ಯಾರಂಟಿ ನೀಡಲಿದೆ ಎಂದರು.
ಈ ವೇಳೆ ತಹಸೀಲ್ದಾರ್ ಡಾ.ಎಸ್.ಯು.ಅಶೋಕ್, ಸರ್ವೇ ಇಲಾಖೆ ಸಹಾಯಕ ನಿರ್ದೇಶಕ ಸಿದ್ದಯ್ಯ, ಗ್ರೇಡ್-2 ತಹಸೀಲ್ದಾರ್ ಲೋಕೇಶ್, ಉಪ ತಹಸೀಲ್ದಾರ್ ರವಿ, ಕಸಬಾ ಶಿರಸ್ತೇದಾರ್ ಜ್ಞಾನೇಶ್, ಗ್ರಾಮ ಆಡಳಿತಾಧಿಕಾರಿಗಳ ಸಂಘದ ಜಿಲ್ಲಾಧ್ಯಕ್ಷ ಹರೀಶ್ ಉಪಸ್ಥಿತರಿದ್ದರು.