ಸಾರಾಂಶ
ಕನ್ನಡಪ್ರಭ ವಾರ್ತೆ ಶನಿವಾರಸಂತೆ
ಸಿ ಅಂಡ್ ಡಿ ಲ್ಯಾಂಡ್ ಹಾಗೂ ಸೆಕ್ಷನ್ 4 ಮತ್ತು 5 ರ ದುರಸ್ಥಿ ವಿಳಂಬದ ಕುರಿತು ಸೋಮವಾರಪೇಟೆ ತಾಲೂಕು ರೈತ ಹೋರಾಟ ಸಮಿತಿ ಮಂಗಳವಾರ ಸೋಮವಾರಪೇಟೆ ತಾಲೂಕು ಬಂದ್‍ಗೆ ಕರೆ ನೀಡಿದ ಹಿನ್ನಲೆ ಮಂಗಳವಾರ ಶನಿವಾರಸಂತೆ ವ್ಯಾಪ್ತಿಯಲ್ಲಿ ವ್ಯಾಪಕ ಬೆಂಬಲ ವ್ಯಕ್ತವಾಯಿತು. ವರ್ತಕರ ಸಂಘ, ರೈತ ಹೋರಾಟ ಸಮಿತಿ ಸೇರಿದಂತೆ ರೈತರು, ಗ್ರಾಮಸ್ಥರು, ಸಾರ್ವಜನಿಕರು ಬಂದ್‍ಗೆ ಬೆಂಬಲ ನೀಡಿರುವ ಮೂಲಕ ತಾಲೂಕು ಬಂದ್ ಯಶಸ್ವಿಯಾಗಿದೆ.ಶನಿವಾರಸಂತೆ ವರ್ತಕರ ಸಂಘ, ರೈತ ಹೋರಾಟ ಸಮಿತಿ ಮಂಗಳವಾರ ಬಂದ್ ನಡೆಸುವಂತೆ ಕರೆ ನೀಡಿದ್ದರು. ಅದರಂತೆ ಪಟ್ಟಣದಲ್ಲಿ ಬೆಳಗ್ಗೆ 6 ರಿಂದ ಸಂಜೆ 6 ಗಂಟೆ ವರೆಗೆ ಹೊಟೇಲ್. ಕ್ಯಾಂಟೀನು, ಅಂಗಡಿ ಮುಂಗಟ್ಟುಗಳನ್ನು ಮುಚ್ಚಿದ ವರ್ತಕರು ಸ್ವಯಂ ಪ್ರೇರಿತರಾಗಿ ಬಂದ್‍ಗೆ ಸಹಕಾರ ನೀಡಿದರು. ಸರ್ಕಾರಿ ಶಾಲೆ, ಸರ್ಕಾರಿ ಕಚೇರಿ, ಆಸ್ಪತ್ರೆ ಹೊರತು ಪಡಿಸಿದಂತೆ ಖಾಸಗಿ ಶಾಲಾ ಕಾಲೇಜು, ಖಾಸಗಿ ಸಂಸ್ಥೆ ಕಾರ್ಯನಿರ್ವಹಿಸದೆ ಬಂದ್‍ಗೆ ಸಹಕಾರ ನೀಡಿದರು. ಖಾಸಗಿ ಬಸ್ಸು ಸಂಚಾರ ಸ್ಥಗಿತಗೊಂಡಿತ್ತು ಶನಿವಾರಸಂತೆ ಯಿಂದ ಅರಕಲಗೂಡು, ಹಾಸನ ಕಡೆಗೆ ಹೋಗುವ ರಸ್ತೆ ಸಾರಿಗೆ ಬಸ್ಸು ಸಂಚಾರ ಎಂದಿನಂತೆ ಇತ್ತು. ಆದರೆ ಸೋಮವಾರಪೇಟೆ, ಕುಶಾಲನಗರ ಕಡೆಗೆ ಹೋಗುವ ರಸ್ತೆ ಸಾರಿಗೆ ಬಸ್ಸು ಸಂಚಾರ ಸ್ಥಗಿತಗೊಂಡಿತು. ಗೋಪಾಲಪುರ ಮತ್ತು ಗುಡುಗಳಲೆ ಜಂಕ್ಷನ್‍ಗಳಲ್ಲಿ ಪೊಲೀಸ್ ಸಿಬ್ಬಂದಿ ಕರ್ತವ್ಯ ನಿರ್ವಹಿಸುತ್ತಿದ್ದನ್ನು ಹೊರತು ಪಡಿಸಿದಂತೆ ಜನರಿಲ್ಲದೆ ಬಿಕೋ ಎನ್ನಿಸುತಿತ್ತು.
ಶನಿವಾರಸಂತೆ ಪಟ್ಟಣದ ಕೆಆರ್‍ಸಿ ವೃತ್ತದಲ್ಲಿ ರೈತ ಹೋರಾಟ ಸಮಿತಿ ಪ್ರಮುಖರು, ರೈತರು, ವರ್ತಕರ ಸಂಘದ ಪ್ರಮುಖರು, ಸಾರ್ವಜನಿಕರು ಮಾನವ ಸರಪಳಿ ನಿರ್ಮಿಸಿ ಪ್ರತಿಭಟಿಸಿದರು. ಇದಕ್ಕಿಂತ ಮೊದಲು ರೈತ ಹೋರಾಟಗಾರರು ಶನಿವಾರಸಂತೆ ಅರಣ್ಯ ಇಲಾಖೆ ಕಚೇರಿಗೆ ತೆರಳಿ ಇಲಾಖೆ ಸಿಬ್ಬಂದಿಗಳಿಂದಲೆ ಕಚೇರಿಗೆ ಬೀಗ ಹಾಕಿಸುವ ಮೂಲಕ ಪ್ರತಿಭಟನೆ ನಡೆಸಿದರು. ನಂತರ ನಡೆದ ರೈತ ಹೋರಾಟ ಸಭೆಯಲ್ಲಿ ಮಾತನಾಡಿದ ತಾ.ಪಂ.ಮಾಜಿ ಸದಸ್ಯ ಬಿ.ಎಸ್.ಅನಂತ್‍ಕುಮಾರ್-ಇಂದು ನಡೆಯುತ್ತಿರುವ ಬಂದ್ ಕೇವಲ ಸಿ ಮತ್ತು ಡಿ ಭೂಮಿಗೆ ಸಂಬಂಧ ಪಟ್ಟ ವಿಚಾರದಲ್ಲಿ ಪ್ರತಿಯೊಬ್ಬ ರೈತರಿಗೂ ಅನ್ಯಾಯವಾಗುತ್ತಿರುವ ಹಿನ್ನಲೆಯಲ್ಲಿ ನಡೆಸುತ್ತಿರುವ ಹೋರಾಟ ಆಗಿರುತ್ತದೆ. ರೈತ ಅನ್ನದಾತರು ಹೀಗಿರುವಾಗ ರೈತರಿಗೆ ತೊಂದರೆಯಾಗಬಾರದು. ಈ ನಿಟ್ಟಿನಲ್ಲಿ ರೈತರು ನಡೆಸುತ್ತಿರುವ ಹೋರಾಟಕ್ಕೆ ಪ್ರತಿಯೊಬ್ಬರು ಸಹಕಾರ ನೀಡಬೇಕಾಗುತ್ತದೆ ಎಂದು ಹೇಳಿದರು.ಶನಿವಾರಸಂತೆ ಗ್ರಾ.ಪಂ.ಸದಸ್ಯ ಎಸ್.ಎನ್.ರಘು ಮಾತನಾಡಿ, ರೈತರು ಅನೇಕ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಈ ಮಧ್ಯೆ ಅರಣ್ಯ ಇಲಾಖೆ ಸುಖ ಸುಮ್ಮನೆ ಹಲವಾರು ವರ್ಷಗಳಿಂದ ವ್ಯವಸಾಯ ಮಾಡುತ್ತಿರುವ ರೈತರ ಜಮೀನನ್ನು ವಶ ಪಡಿಸಿಕೊಳ್ಳಲು ಹುನ್ನಾರ ನಡೆಸುತ್ತಿದೆ. ಈ ನಿಟ್ಟಿನಲ್ಲಿ ಸರಕಾರದಿಂದ ರೈತರ ನ್ಯಾಯಸಿಗುವ ತನಕ ರೈತ ಹೋರಾಟ ಮುಂದುವರೆಯುತ್ತದೆ ಎಂದರು.
ವರ್ತಕರ ಸಂಘದ ನಿರ್ದೇಶಕ ಸಿ.ಎಸ್.ಗಿರೀಶ್ ಮಾತನಾಡಿ, ರೈತ ಹೋರಾಟ ಕೆಲವು ರೈತರ ಸಮಸ್ಯೆ ಅಲ್ಲ ರೈತ ಸಮುದಾಯದ ಸಮಸ್ಯೆಯಾಗಿದೆ. ಈ ನಿಟ್ಟಿನಲ್ಲಿ ಮುಂದಿನ ದಿನದಲ್ಲಿ ಪ್ರತಿಯೊಬ್ಬ ರೈತರು ದೊಡ್ಡ ಮಟ್ಟದಲ್ಲಿ ಹೋರಾಟ ಮಾಡಬೇಕಿದೆ ಎಂದರುರೈತ ಹೋರಾಟ ಸಭೆಯಲ್ಲಿ ಪ್ರಮುಖರಾದ ರಕ್ಷಿತ್, ಭರತ್, ವಿನೋದ್, ಪುನಿತ್ ತಾಳೂರು, ದಿವಾಕರ್, ಸುರೇಶ್, ಕೇಶವಮೂರ್ತಿ, ಸರ್ದಾರ್ ಆಹಮ್ಮದ್, ವೀರೇಂದ್ರಕುಮಾರ್, ಪ್ರಶಾಂತ್ ಸೇರಿದಂತೆ ರೈತರು, ಗ್ರಾಮಸ್ಥರು, ಸಾರ್ವಜನಿಕರು ಪಾಲ್ಗೊಂಡಿದ್ದರು.