ಯಲ್ಲಾಪುರದಲ್ಲಿ ಗ್ರಾಮ ಆಡಳಿತಾಧಿಕಾರಿಗಳ ಮುಷ್ಕರಕ್ಕೆ ಬೆಂಬಲ

| Published : Feb 14 2025, 12:31 AM IST

ಸಾರಾಂಶ

ಪ್ರಮುಖ ಬೇಡಿಕೆಗಳಾದ ಮೂಲ ಸೌಕರ್ಯಗಳಾದ ಸುಸಜ್ಜಿತ ಕಟ್ಟಡ, ಲ್ಯಾಪ್‌ಟಾಪ್‌, ಪ್ರಿಂಟರ್ ಮತ್ತು ಅಲ್ಮೇರಾ ಸೇವಾ ವಿಷಯಕ್ಕೆ ಸಂಬಂಧಿಸಿದಂತೆ ಬಡ್ತಿ ನೀಡುವುದು ಸೇರಿದಂತೆ ನಾನಾ ಬೇಡಿಕೆಗಳ ಈಡೇರಿಕೆಗಾಗಿ ಗ್ರಾಮ ಆಡಳಿತ ಅಧಿಕಾರಿಗಳು ಪ್ರತಿಭಟನೆ ನಡೆಸಿದರು.

ಯಲ್ಲಾಪುರ: ಕರ್ನಾಟಕ ರಾಜ್ಯ ಗ್ರಾಮ ಆಡಳಿತಾಧಿಕಾರಿಗಳ ಕೇಂದ್ರ ಸಂಘ ಬೆಂಗಳೂರು ನಿರ್ದೇಶನದಂತೆ ತಾಲೂಕು ಘಟಕ ಯಲ್ಲಾಪುರ ನೇತೃತ್ವದಲ್ಲಿ ತಾಲೂಕು ಆಡಳಿತ ಸೌಧದ ಎದುರುಗಡೆ ನಡೆಯುತ್ತಿರುವ ಗ್ರಾಮ ಆಡಳಿತ ಅಧಿಕಾರಿಗಳ ೪ನೇ ದಿನದ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ನಾಗರಿಕ ವೇದಿಕೆ ಅಧ್ಯಕ್ಷ ರಾಮು ನಾಯ್ಕ ಪ್ರತಿಭಟನಾ ಸ್ಥಳಕ್ಕೆ ಬಂದು ಮುಷ್ಕರಕ್ಕೆ ಬೆಂಬಲ ನೀಡಿ ಮನವಿ ಸ್ವೀಕರಿಸಿದರು.

ಗ್ರಾಮ ಆಡಳಿತ ಅಧಿಕಾರಿಗಳ ಪ್ರಮುಖ ಬೇಡಿಕೆಗಳಾದ ಮೂಲಭೂತ ಸೌಕರ್ಯಗಳಾದ ಸುಸಜ್ಜಿತ ಕಟ್ಟಡ, ಲ್ಯಾಪ್‌ಟಾಪ್‌, ಪ್ರಿಂಟರ್ ಮತ್ತು ಅಲ್ಮೇರಾ ಸೇವಾ ವಿಷಯಕ್ಕೆ ಸಂಬಂಧಿಸಿದಂತೆ ಬಡ್ತಿ ನೀಡುವುದು, ವರ್ಗಾವಣೆಗೆ ಸಂಬಂಧಪಟ್ಟಂತೆ ೧೬ಎ ಮರು ಸ್ಥಾಪನೆ, ನಿಗದಿತ ಪ್ರಯಾಣ ಭತ್ಯೆ ಹೆಚ್ಚಳ, ಪೌತಿ ಖಾತೆ ಆಂದೋಲನ ಕೈಬಿಡುವುದು ಇತರ ಬೇಡಿಕೆಯನ್ನು ಸರ್ಕಾರದ ಗಮನಕ್ಕೆ ತರುವ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ನಿವೃತ್ತ ತಹಸೀಲ್ದಾರ್‌ಗಳಾದ ಡಿ.ಜಿ. ಹೆಗಡೆ, ತುಳಸಿ ಪಾಲೇಕರ್, ನ್ಯಾಯವಾದಿ ಬೇಬಿ ಅಮೀನಾ, ನಿವೃತ್ತ ಪ್ರಾಂಶುಪಾಲರಾದ ಬೀರಣ್ಣ ಮೊಗಟಾ, ಶ್ರೀರಂಗ ಕಟ್ಟಿ, ನಿವೃತ್ತ ಯೋಧ ಮಹಾದೇವಚಂದ್ರ ಪಂಡ್ರಪುರ, ನಿವೃತ್ತ ಅಂಚೆ ಉದ್ಯೋಗಿ ನಾಗೇಶ ಯಲ್ಲಾಪುರಕರ, ಅಂಬೇಡ್ಕರ್ ಸೇವಾ ಸಂಘದ ಅಧ್ಯಕ್ಷ ಜಗನ್ನಾಥ ಪಾಟಣಕರ, ತ್ರಿಶೂಲ ಬಳಗದ ಅಧ್ಯಕ್ಷ ಮಹೇಶ ನಾಯ್ಕ ಹಾಗೂ ತಾಲೂಕಿನ ಎಲ್ಲ ಗ್ರಾಮ ಆಡಳಿತಾಧಿಕಾರಿಗಳು ಉಪಸ್ಥಿತರಿದ್ದರು.ಭಕ್ತಸಾಗರದ ಮಧ್ಯೆ ಉಳವಿ ಚೆನ್ನಬಸವೇಶ್ವರ ರಥೋತ್ಸವ

ಜೋಯಿಡಾ: ಲಕ್ಷಾಂತರ ಭಕ್ತರ ಜಯಘೋಷದೊಂದಿಗೆ ಉಳವಿ ಚೆನ್ನಬಸವೇಶ್ವರ ಮಹಾರಥೋತ್ಸವ ಗುರುವಾರ ಸಂಜೆ ಸಂಭ್ರಮದಿಂದ ನೆರವೇರಿತು.ಅಡಕೇಶ್ವರ, ಮಡಕೇಶ್ವರ ಉಳವಿ ಚೆನ್ನಬಸವೇಶ್ವರ ಹರ ಹರ ಎನ್ನುತ್ತ ಅಲಂಕೃತ ರಥ ಎಳೆದು ಭಕ್ತಗಣ ಪುನೀತರಾದರು.

ಜಾತ್ರೆಗೆ ಪ್ರತಿವರ್ಷದಂತೆ ರಥಸಪ್ತಮಿಯಿಂದ ಚಾಲನೆ ದೊರೆಯಿತು. ಭಾರತ ಹುಣ್ಣಿಮೆಯ ಮಾಘ ನಕ್ಷತ್ರದ ವೇಳೆಗೆ ಗುರುವಾರ ಸಂಜೆ 4 ಗಂಟೆಗೆ ನೆರೆದಿದ್ದ ಲಕ್ಷಾಂತರ ಭಕ್ತಗಣದ ಜಯಘೋಷ, ಹರ್ಷೋದ್ಗಾರದೊಂದಿಗೆ ರಥೋತ್ಸವ ಚಾಲನೆ ನೀಡಲಾಯಿತು. ಶಾಸಕ, ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಆರ್.ವಿ. ದೇಶಪಾಂಡೆ ಅವರು ಚೆನ್ನಬಸವಣ್ಣನ ದರ್ಶನ ಪಡೆದು ಬಳಿಕ ಮಹಾರಥೋತ್ಸವಕ್ಕೆ ಚಾಲನೆ ನೀಡಿದರು.ಚೆನ್ನಬಸವೇಶ್ವರ ದೇವಸ್ಥಾನದಿಂದ ಆರಂಭವಾದ ರಥೋತ್ಸವವು ವಿವಿಧ ವಾದ್ಯಮೇಳ ವೈಭವದೊಂದಿಗೆ ಸುಮಾರು 700 ಮೀ. ದೂರದಲ್ಲಿರುವ ವೀರಭದ್ರೇಶ್ವರ ದೇಗುಲದ ವರೆಗೆ ತೆರಳಿ ಅಲ್ಲಿಂದ ಸ್ವಸ್ಥಾನಕ್ಕೆ ಮರಳಿತು.

ವಿಧಾನಪರಿಷತ್‌ ಸದಸ್ಯ ಗಣಪತಿ ಉಳ್ವೇಕರ್, ಟ್ರಸ್ಟ್ ಕಮಿಟಿ ಅಧ್ಯಕ್ಷ ಸಂಜಯ ಕಿತ್ತೂರ, ಗ್ರಾಪಂ ಅಧ್ಯಕ್ಷ ಮಂಜುನಾಥ ಮೊಕಾಶಿ, ಟ್ರಸ್ಟ್ ಉಪಾಧ್ಯಕ್ಷ ಪ್ರಕಾಶ ಕಿತ್ತೂರ, ಆಡಳಿತ ಕಮಿಟಿ ಸದಸ್ಯರು, ಉಸ್ತುವಾರಿ ಶಂಕರಯ್ಯ ಶಾಸ್ತ್ರಿ ನಂದಿಗದ್ದೆ, ಗ್ರಾಪಂ ಅಧ್ಯಕ್ಷ ಅರುಣ ದೇಸಾಯಿ ಇದ್ದರು.ಅನ್ನದಾಸೋಹ: ಸೇರಿದ್ದ ಲಕ್ಷಾಂತರ ಜನರಿಗೆ ದೇವಸ್ಥಾನದ ಆಡಳಿತ ಮಂಡಳಿಯು ನಿತ್ಯ ಅನ್ನದಾಸೋಹ ವ್ಯವಸ್ಥೆ ಮಾಡಿತ್ತು. ಅಲ್ಲದೇ ಹಲವಾರು ಸಂಘ- ಸಂಸ್ಥೆಗಳು ಅಲ್ಲಲ್ಲಿ ಭಕ್ತರಿಗಾಗಿ ದಾಸೋಹ ವ್ಯವಸ್ಥೆ ಮಾಡಿದ್ದವು. ಜಾತ್ರೆಗೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಸಾವಿರಾರು ಎತ್ತಿನ ಚಕ್ಕಡಿ ಗಾಡಿಗಳ ಮೂಲಕ ಭಕ್ತರು ಆಗಮಿಸಿದ್ದರು.

ಸೂಕ್ತ ಭದ್ರತೆ: ಡಿವೈಎಸ್ಪಿ ಶಿವಾನಂದ ಎಂ. ನೇತೃತ್ವದಲ್ಲಿ ಸಿಪಿಐ ಚಂದ್ರಶೇಖರ ಹರಿಹರ, ಪಿಎಸ್ಐ ಮಹೇಶ್ ಮಾಳಿ, ಬಸವರಾಜ್ ಎಂ. ಮತ್ತು 500ಕ್ಕೂ ಪೊಲೀಸರು ಸೂಕ್ತ ಭದ್ರತೆ ಒದಗಿಸಿದ್ದರು.

ಮಂಗಳವಾಡ ಗ್ರಾಮದೇವಿ ಜಾತ್ರೆ ಮಹಾರಥೋತ್ಸವ

ಹಳಿಯಾಳ: ತಾಲೂಕಿನ ಮಂಗಳವಾಡ ಗ್ರಾಮದಲ್ಲಿ ಸಹಸ್ರಾರು ಭಕ್ತರ ಮುಗಿಲು ಮುಟ್ಟುವ ಹರ ಹರ ಮಹಾದೇವ, ಜೈ ಶಿವಾಜಿ ಜೈ ಭವಾನಿ, ಗ್ರಾಮದೇವಿಗೆ ಜೈ ಎಂಬ ಘೋಷಣೆಗಳೊಂದಿಗೆ ಗ್ರಾಮದೇವಿಯ ಮಹಾರಥೋತ್ಸವವು ಗುರುವಾರ ಸಂಜೆ ಸಂಭ್ರಮದಿಂದ ನೆರವೇರಿತು.ಹನ್ನೆರಡು ವರ್ಷಗಳ ನಂತರ ನಡೆದ ಜಾತ್ರೆಯ ಭವ್ಯ ಮಹಾರಥೋತ್ಸವವು ಸಾಮರಸ್ಯಕ್ಕೆ ಸಾಕ್ಷಿಯಾಯಿತು. ಗ್ರಾಮದಲ್ಲಿನ ಸರ್ವ ಧರ್ಮಿಯರು ರಥೋತ್ಸವದಲ್ಲಿ ಶ್ರದ್ಧೆಯಿಂದ ಪಾಲ್ಗೊಂಡಿದ್ದು ವಿಶೇಷವಾಗಿತ್ತು. ರಥೋತ್ಸವವನ್ನು ನೋಡಿ ಕಣ್ತುಂಬಿಸಿಕೊಳ್ಳಲು ತಾಲೂಕು ಸೇರಿದಂತೆ ಅಕ್ಕಪಕ್ಕದ ತಾಲೂಕು ಜಿಲ್ಲೆಗಳು ಜನ ಆಗಮಿಸಿ ರಥೋತ್ಸವದಲ್ಲಿ ಪಾಲ್ಗೊಂಡು ಸಂಭ್ರಮಿಸಿದರು.ಫೆ. 2ರಿಂದ ಆರಂಭಗೊಂಡ ಗ್ರಾಮದೇವಿ ಜಾತ್ರಾ ಮಹೋತ್ಸವವು ಫೆ. 21ರ ವರೆಗೆ ನಡೆಯಲಿದೆ. ಫೆ. 8ರಿಂದ ಫೆ 11ರ ವರೆಗೆ ಗ್ರಾಮದೇವಿಯರ ಹೊನ್ನಾಟ ವಿಜೃಂಭಣೆಯಿಂದ ನೆರವೇರಿತು. ಗ್ರಾಮದೇವಿಯರ ಹೊನ್ನಾಟದಲ್ಲಿ ಸಂಭ್ರಮಿಸಿದ ಮಂಗಳವಾಡ ಗ್ರಾಮಸ್ಥರು ಮಹಾರಥೋತ್ಸವ ದಿನದಂದು ಲಕ್ಷ್ಮಿದೇವಿ(ದ್ಯಾಮವ್ವ)ಯನ್ನು ಭವ್ಯ ತೇರಿನಲ್ಲಿ ಪ್ರತಿಷ್ಠಾಪಿಸಿ ತೇರು ಎಳೆದು ಭಕ್ತಿ ಸಮರ್ಪಿಸಿದರು.ಮಂಜುನಾಥ ಭಾರತಿ ಸ್ವಾಮೀಜಿ, ಪೀರಯೋಗಿಜಿಯವರು ಧಾರ್ಮಿಕ ಪೂಜಾವಿಧಿಯನ್ನು ನೆರವೇರಿಸಿ ಮಹಾರಥೋತ್ಸವಕ್ಕೆ ಚಾಲನೆ ನೀಡಿದರು. ರಥೋತ್ಸವಕ್ಕೆ ಚಾಲನೆ ಸಿಗುತ್ತಿದ್ದಂತೆ ಭಕ್ತರು ತೇರಿಗೆ ಉತ್ತುತ್ತಿ, ಬಾಳೆಹಣ್ಣು ತೂರಿ ಸಂಭ್ರಮಿಸಿದರು.

ಸಿಪಿಐ ಜಯಪಾಲ ಪಾಟೀಲ ಅವರ ನೇತೃತ್ವದಲ್ಲಿ ಬಿಗಿ ಬಂದೋಬಸ್ತ್ ಮಾಡಲಾಗಿತ್ತು. ತಹಸೀಲ್ದಾರ್ ಪ್ರವೀಣ ಹುಚ್ಚಣ್ಣನವರ, ಸೇರಿದಂತೆ ತಾಲೂಕಿನ ವಿವಿಧ ಇಲಾಖೆಗಳ ಅಧಿಕಾರಿಗಳು ರಥೋತ್ಸವ ಕಾರ್ಯಕ್ರಮದ ನಿಗಾ ವಹಿಸಿದ್ದರು.