ಸಾರಾಂಶ
ಕನ್ನಡಪ್ರಭ ವಾರ್ತೆ ಬೆಳಗಾವಿ
ಹುಬ್ಬಳ್ಳಿಯಲ್ಲಿ ಸೆ.19 ರಂದು ನಡೆಯುವ ವೀರಶೈವ ಲಿಂಗಾಯತ ಏಕತಾ ಸಮಾವೇಶಕ್ಕೆ ಧಾರವಾಡ, ಬೆಳಗಾವಿ, ಉತ್ತರ ಕನ್ನಡ ಮತ್ತು ಮಹಾರಾಷ್ಟ್ರದ ಕೊಲ್ಲಾಪುರ ಜಿಲ್ಲೆಯ ವಿವಿಧ ಮಠಾಧೀಶರು ಬೆಂಬಲಿಸಲು ಅಖಿಲ ಭಾರತ ವೀರಶೈವ ಶಿವಾಚಾರ್ಯ ಸಂಸ್ಥೆಯ ರಾಷ್ಟ್ರೀಯ ಉಪಾಧ್ಯಕ್ಷ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಅಧ್ಯಕ್ಷತೆಯಲ್ಲಿ ನಿರ್ಣಯಿಸಲಾಗಿದೆ.ಭೂತರಾಮನಹಟ್ಟಿಯಲ್ಲಿರುವ ಶ್ರೀಕ್ಷೇತ್ರ ಪಂಚಗ್ರಾಮ ಮುಕ್ತಿಮಠದಲ್ಲಿ ಸೋಮವಾರ ನಡೆದ ಅಖಿಲ ಭಾರತ ವೀರಶೈವ ಶಿವಾಚಾರ್ಯ ಸಂಸ್ಥೆಯ ನೇತೃತ್ವದ ವೀರಶೈವ-ಲಿಂಗಾಯತ ಧರ್ಮದ ಅಖಂಡತೆಯ ಭಕ್ತಗಣದ ಸಭೆಯಲ್ಲಿ ನಿರಂತರ ಜಾಗೃತಿ ಮೂಡಿಸಲು ಪಂಚಪೀಠಗಳ ಶಾಖಾಮಠಗಳ ಅನೇಕ ಶಿವಾಚಾರ್ಯ ಶ್ರೀಗಳು ಸಂಕಲ್ಪ ಮಾಡಿ ಸರ್ವಾನುಮತದ ನಿರ್ಣಯ ಅಂಗೀಕರಿಸಿದರು.
ಸೆ.19ರಂದು ಹುಬ್ಬಳ್ಳಿಯಲ್ಲಿ ನಡೆಯುವ ವೀರಶೈವ ಲಿಂಗಾಯತ ಏಕತಾ ಸಮಾವೇಶಕ್ಕೆ ನಾಲ್ಕು ಜಿಲ್ಲೆಯ ಶಿವಾಚಾರ್ಯರು ಬೆಂಬಲ ನೀಡಿದರು. ಅಲ್ಲದೆ, ಸೆ.22 ರಿಂದ ನಡೆಯಲಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾ ನಿರ್ಣಯ ಅಂಗೀಕರಿಸಿದಂತೆ ಎಲ್ಲಾ ವೀರಶೈವ-ಲಿಂಗಾಯತರು ಸಮೀಕ್ಷೆ ನಮೂನೆಯ ಅನುಸೂಚಿಯಲ್ಲಿಯ ಧರ್ಮದ ಕಾಲಂ ಅಡಿಯಲ್ಲಿ ಇತರೇ ಎಂದು ಹೇಳಿರುವ ಕಾಲಂನಲ್ಲಿ ತಪ್ಪದೇ ವೀರಶೈವ-ಲಿಂಗಾಯತ ಎಂದೇ ನಮೂದಿಸಬೇಕು. ಜಾತಿಯ ಕಾಲಂನಲ್ಲಿಯೂ ವೀರಶೈವ-ಲಿಂಗಾಯತ ಎಂದೇ ಬರೆಸುವಂತೆ ಅಖಿಲ ಭಾರತ ವೀರಶೈವ ಮಹಾಸಭಾ ಕೈಗೊಂಡ ನಿರ್ಣಯಕ್ಕೆ ಸಹಮತ ಸೂಚಿಸಲಾಯಿತು.ಕೆಲವೇ ಕೆಲವು ಮಠಾಧೀಶರು ಸಮಾಜದಲ್ಲಿ ದ್ವಂದ್ವಗಳನ್ನು ಹುಟ್ಟುಹಾಕಿ ವೀರಶೈವವೇ ಬೇರೆ, ಲಿಂಗಾಯತವೇ ಬೇರೆ ಎಂದು ಭಕ್ತ ಸಮುದಾಯದ ಮನಸ್ಥಿತಿ ಸಂಕೀರ್ಣವಾಗುವಂತೆ ನೋಡಿಕೊಳ್ಳುತ್ತಿದ್ದಾರೆ. ಜೊತೆಗೆ ಧರ್ಮದ ಮೂಲವಾಹಿನಿಯ ಶ್ರೀಜಗದ್ಗುರು ಪಂಚಪೀಠಗಳ ಪ್ರಾಚೀನ ಗುರುಪರಂಪರೆಗೆ ಧಕ್ಕೆ ಉಂಟು ಮಾಡುವಲ್ಲಿ ನಿರತರಾಗಿದ್ದಾರೆ. ಅದಕ್ಕಾಗಿ ಸೆ.19ರಂದು ಹುಬ್ಬಳ್ಳಿ ಮಹಾನಗರದಲ್ಲಿ ಹಮ್ಮಿಕೊಂಡಿರುವ ವೀರಶೈವ-ಲಿಂಗಾಯತ ಏಕತಾ ಸಮಾವೇಶವನ್ನು ಬೆಂಬಲಿಸಿ ಶ್ರೀಜಗದ್ಗುರು ಪಂಚಪೀಠಗಳ ಶಾಖಾಮಠಗಳ ಎಲ್ಲಾ ಶಿವಾಚಾರ್ಯ ಶ್ರೀಗಳವರು ಹುಬ್ಬಳ್ಳಿ ಸಮಾವೇಶದಲ್ಲಿ ಪಾಲ್ಗೊಳ್ಳುವ ಒಕ್ಕೊರಲಿನ ಮತ್ತೊಂದು ನಿರ್ಣಯವನ್ನು ಸಮಾವೇಶ ಕೈಗೊಂಡಿದೆ.
ಈ ವೇಳೆ ಮುಕ್ತಿಮಠದ ಶಿವಸಿದ್ಧ ಸೋಮೇಶ್ವರ ಶಿವಾಚಾರ್ಯ ಸ್ವಾಮೀಜಿ ಹಾಗೂ ಕಟಕೋಳ ಎಂ.ಚಂದರಗಿ ಹಿರೇಮಠದ ವೀರಭದ್ರ ಶಿವಯೋಗಿ ಶಿವಾಚಾರ್ಯ ಸ್ವಾಮೀಜಿ, ಅಖಿಲ ಭಾರತ ಶಿವಾಚಾರ್ಯ ಸಂಸ್ಥೆಯ ಧಾರವಾಡ ಜಿಲ್ಲಾಧ್ಯಕ್ಷ, ಶಿರಕೋಳದ ಗುರುಸಿದ್ಧ ಶಿವಾಚಾರ್ಯ ಸ್ವಾಮೀಜಿ, ಬೆಳಗಾವಿ ಜಿಲ್ಲಾಧ್ಯಕ್ಷ ಸವದತ್ತಿ ಮೂಲಿಮಠದ ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ, ಕೊಲ್ಲಾಪುರದ ಜಿಲ್ಲಾಧ್ಯಕ್ಷ, ನೂಲಸುರಗೀಶ್ವರಮಠದ ಗುರುಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ, ಉತ್ತರ ಕನ್ನಡ ಜಿಲ್ಲಾಧ್ಯಕ್ಷ ಅಂಬಿಕಾ ನಗರದ ವಿಶ್ವಾರಾದ್ಯ ಸ್ವಾಮೀಜಿ ಮೊದಲಾದವರು ಪಾಲ್ಗೊಂಡಿದ್ದರು.