ಸಾರಾಂಶ
ಸಮಾಜದಲ್ಲಿ ಜಾತಿ, ಧರ್ಮಗಳ ನಡುವೆ ವಿಷಬೀಜ ಬಿತ್ತಿ ದ್ವೇಷ ರಾಜಕಾರಣ ಮಾಡುವ ಬಿಜೆಪಿಗೆ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಪಾಠ ಕಲಿಸಿದಂತೆ, ಲೋಕಸಭಾ ಚುನಾವಣೆಯಲ್ಲಿಯೂ ಬಿಜೆಪಿಗೆ ತಕ್ಕ ಪಾಠ ಕಲಿಸಬೇಕು. ಕೇಂದ್ರದಲ್ಲಿ ಪರ್ಯಾಯ ಜಾತ್ಯಾತೀತ ಸರಕಾರ ರಚನೆಗೆ ಬೆಂಬಲಿಸುವಂತೆ ಸಿಪಿಐಎಂನ ರಾಜ್ಯ ಕಾರ್ಯದರ್ಶಿ ಕೆ. ಪ್ರಕಾಶ್ ತಿಳಿಸಿದರು.
ನಗರದ ಬಾಪುಗೌಡ ದರ್ಶನಾಪುರ ಕಾಲೇಜಿನಲ್ಲಿ ಸಿಪಿಐಎಂ ಜಿಲ್ಲಾ ಸಮಿತಿ ವತಿಯಿಂದ ನಡೆದ ರಾಜಕೀಯ ಸಮಾವೇಶ ಉದ್ದೇಶಿಸಿ ಮಾತನಾಡಿದ ಅವರು, ಬಿಜೆಪಿ ಆಡಳಿತದಲ್ಲಿ ಪ್ರಜಾಪ್ರಭುತ್ವಕ್ಕೆ ಧಕ್ಕೆಯಾಗುವಂತಹ ಹಲವು ಘಟನೆಗಳು ನಡೆದಿದ್ದು, ಬಿಜೆಪಿ ಸೋಲಿಸುವುದೇ ನಮ್ಮ ಗುರಿಯಾಗಬೇಕು ಎಂದರು.ಕಳೆದ 10 ವರ್ಷಗಳ ಮೋದಿ ನೇತೃತ್ವದ ಬಿಜೆಪಿ ಸರ್ಕಾರವು ಭಾರತದ ಜಾತ್ಯತೀತ, ಪ್ರಜಾಸತ್ತಾತ್ಮಕ ಗಣರಾಜ್ಯ ನಿರ್ನಾಮ ಮಾಡಲು ತೀರ್ಮಾನಿಸಿರುವ ಹೊತ್ತಿನಲ್ಲಿ ಲೋಕಸಭೆ ಚುನಾವಣೆಗಳು ನಡೆಯುತ್ತಿವೆ. ಜಾತ್ಯತೀತ ಪ್ರಜಾಪ್ರಭುತ್ವ ಆರ್ಥಿಕ ಸಾರ್ವಭೌಮತೆ ಒಕ್ಕೂಟ ಮತ್ತು ಸಾಮಾಜಿಕ ನ್ಯಾಯವನ್ನು ವ್ಯವಸ್ಥಿತವಾಗಿ ನಾಶಮಾಡಲಾಗುತ್ತಿದೆ. ಜನರ ಹಕ್ಕುಗಳನ್ನು ಧಮನ ಮಾಡಲು ಮತ್ತು ಭಾರತವನ್ನು ಜಗತ್ತಿನಲ್ಲಿ ಅತ್ಯಂತ ಅಸಮಾನ ಸಮಾಜವನ್ನಾಗಿ ಮಾಡಲು ಮೋದಿ ಆಡಳಿತ ಫ್ಯಾಸಿಸ್ಟ್ ವಿಧಾನ ಬಳಸುತ್ತಿದೆ ಹಾಗೂ ಸಮಾಜದಲ್ಲಿ ಜನರನ್ನು ವಿಭಜಿಸಲು ಕೋಮುವಾದಿ ವಿಷಬೀಜ ಹರಡುತ್ತಿದೆ ಎಂದರು.
ಅಯೋಧ್ಯೆ ಶ್ರೀರಾಮ ದೇವಸ್ಥಾನದ ಉದ್ಘಾಟನೆ ಧಾರ್ಮಿಕ ಭಕ್ತಿಗಿಂತ ಹೆಚ್ಚಾಗಿ ರಾಜಕೀಯ ಲಾಭಕ್ಕೆ ಬಿಜೆಪಿ ಬಳಸಿದೆ. ಇಡೀ ಕಾರ್ಯಕ್ರಮವನ್ನು ಸರಕಾರವೇ ಮುಂದೆ ನಿಂತು ನಡೆಸಿತು. ಸಂವಿಧಾನದ ಜಾತ್ಯತೀತ ಮೌಲ್ಯಗಳನ್ನು ಬಿಜೆಪಿ ಗಾಳಿಗೆ ತೂರಿತು. ಅಯೋಧ್ಯೆ ಅಭಿವೃದ್ಧಿಯ ಹೆಸರಲ್ಲಿ ಭಾರತದ ದೊಡ್ಡ ಬಂಡವಾಳ ಶಾಹಿಗೆ ಲಾಭ ತರುವ ಯೋಜನೆಗಳನ್ನು ಜಾರಿಗೊಳಿಸಿತು. ದೊಡ್ಡ ದೊಡ್ಡ ಕಾರ್ಪೊರೇಟ್ ಕಂಪನಿಗಳ ಹಾಗೂ ಬಂಡವಾಳಶಾಹಿಗಳ ತಾಳಕ್ಕೆ ತಕ್ಕಂತೆ ಮೋದಿ ಸರ್ಕಾರ ನಡೆಸುತ್ತಿದೆ ಎಂದು ಸರ್ಕಾರದ ವಿರುದ್ಧ ಹರಿಹಾಯ್ದರು.ಈ ವೇಳೆ ಸಿಪಿಐಎಂ ಪಕ್ಷದ ಜಿಲ್ಲಾ ಕಾರ್ಯದರ್ಶಿ ಚೆನ್ನಪ್ಪ ಆನೆಗುಂದಿ, ಎಸ್.ಎಂ.ಸಾಗರ್, ದಾವಲ್ ಸಾಬ್ ನದಾಫ್, ರಂಗಮ್ಮ ಕಟ್ಟಿಮನಿ ಸೇರಿದಂತೆ ಕೃಷಿ ಕೂಲಿ ಕಾರ್ಮಿಕ ಮಹಿಳೆಯರು ಭಾಗವಹಿಸಿದ್ದರು.