ಕುಷ್ಟಗಿ ಪಟ್ಟಣದ ಶ್ರೀ ಮಲ್ಲಿಕಾರ್ಜುನ ಮಂಗಲ ಭವನದಲ್ಲಿ ಸರ್ಕಾರಿ ಕೋಟಾದಡಿ ವೈದ್ಯಕೀಯ ಸೀಟು ಪಡೆದ ವಿದ್ಯಾರ್ಥಿಗಳು ಹಾಗೂ ಸಮಾಜದ ವಿವಿಧ ಕ್ಷೇತ್ರದ ಸಾಧಕರಿಗೆ ಸನ್ಮಾನ ಸಮಾರಂಭ ನಡೆಯಿತು.

ಕುಷ್ಟಗಿ: ಬಡತನದ ನಡುವೆಯೂ ಕಷ್ಟಪಟ್ಟು ವಿದ್ಯಾಭ್ಯಾಸ ಮಾಡಿ ಸರ್ಕಾರಿ ಕೋಟಾದಡಿ ವೈದ್ಯಕೀಯ ಸೀಟು ಪಡೆದಿರುವ ಬಣಜಿಗ ಸಮಾಜದ ವಿದ್ಯಾರ್ಥಿಗಳ ಸಾಧನೆ ಸಮಾಜಕ್ಕೆ ಹೆಮ್ಮೆಯ ಸಂಗತಿ. ಪ್ರತಿಭಾವಂತ ಹಾಗೂ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಸಮಾಜ ಸದಾ ಬೆನ್ನೆಲುಬಾಗಿ ನಿಲ್ಲಲಿದೆ ಎಂದು ಬಣಜಿಗ ಸಮಾಜದ ತಾಲೂಕಾಧ್ಯಕ್ಷ ಶಶಿಧರ ಕವಲಿ ಹೇಳಿದರು.

ಪಟ್ಟಣದ ಶ್ರೀ ಮಲ್ಲಿಕಾರ್ಜುನ ಮಂಗಲ ಭವನದಲ್ಲಿ ಬಣಜಿಗ ಕ್ಷೇಮಾಭಿವೃದ್ಧಿ ಸಂಘ, ತಾಲೂಕು ಬಣಜಿಗ ಸಮಾಜ, ನಗರ ಘಟಕ, ಯುವ ಘಟಕ ಹಾಗೂ ಮಹಿಳಾ ಘಟಕದ ವತಿಯಿಂದ ಸರ್ಕಾರಿ ಕೋಟಾದಡಿ ವೈದ್ಯಕೀಯ ಸೀಟು ಪಡೆದ ವಿದ್ಯಾರ್ಥಿಗಳು ಹಾಗೂ ಸಮಾಜದ ವಿವಿಧ ಕ್ಷೇತ್ರದ ಸಾಧಕರಿಗೆ ಹಮ್ಮಿಕೊಂಡಿದ್ದ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು. ಬಡತನದಲ್ಲಿ ಹುಟ್ಟಿ, ಕೂಲಿ-ನಾಲಿ ಮಾಡಿ ಮಕ್ಕಳ ಭವಿಷ್ಯ ರೂಪಿಸಲು ಪಾಲಕರು ಪಟ್ಟ ಶ್ರಮದ ಫಲವಾಗಿ ವಿದ್ಯಾರ್ಥಿಗಳು ವೈದ್ಯಕೀಯ ಶಿಕ್ಷಣ ಪಡೆಯುವ ಅವಕಾಶ ಗಳಿಸಿದ್ದಾರೆ. ವಿದ್ಯಾರ್ಥಿಗಳ ಸಾಧನೆಯ ಹಿಂದೆ ಪಾಲಕರ ತ್ಯಾಗ, ಶಿಕ್ಷಕರ ಮಾರ್ಗದರ್ಶನ ಹಾಗೂ ವಿದ್ಯಾರ್ಥಿಗಳ ನಿರಂತರ ಪರಿಶ್ರಮವಿದೆ. ವೈದ್ಯರಾದ ಬಳಿಕ ಬಡವರು ಹಾಗೂ ಸಾಮಾನ್ಯ ಜನರಿಗೆ ಮಾನವೀಯತೆಯಿಂದ ಸೇವೆ ಸಲ್ಲಿಸುವ ಮೂಲಕ ಪಾಲಕರು ಹಾಗೂ ಸಮಾಜಕ್ಕೆ ಕೀರ್ತಿ ತರಬೇಕು ಎಂದು ಹೇಳಿದರು.

ಕುಷ್ಟಗಿ ತಾಲೂಕಿನಲ್ಲಿ ಸುಮಾರು 18 ಸಾವಿರ ಬಣಜಿಗ ಸಮಾಜದ ಜನಸಂಖ್ಯೆಯಿದ್ದು, ಸಂಘಟನೆ ಬಲಪಡಿಸಲು ಹೋಬಳಿವಾರು ಅಧ್ಯಕ್ಷರು ಹಾಗೂ ಪದಾಧಿಕಾರಿಗಳನ್ನು ನೇಮಿಸಲಾಗಿದೆ. ಪ್ರತಿ ಹೋಬಳಿಯಲ್ಲಿ ಸಮಾಜದ ಜನಗಣತಿ ನಡೆಸುವ ಕಾರ್ಯ ಕೈಗೊಳ್ಳಬೇಕು. ಸಮಾಜದ ಸ್ಮಶಾನ ಅಭಿವೃದ್ಧಿ ಕಾರ್ಯ ನಡೆಯುತ್ತಿದ್ದು, ಮುಂದಿನ ದಿನಗಳಲ್ಲಿ ಅಕ್ಕಮಹಾದೇವಿ ಸಭಾಭವನ ನಿರ್ಮಿಸುವ ಚಿಂತನೆಯೂ ಇದೆ ಎಂದು ಹೇಳಿದರು.

ಮಹಿಳಾ ಘಟಕದ ಅಧ್ಯಕ್ಷೆ ಅಕ್ಕಮಹಾದೇವಿ ಪಟ್ಟಣಶೆಟ್ಟಿ ಹಾಗೂ ಜಯದೇವಿ ಉಪ್ಪೀನ್ ಮಾತನಾಡಿ, ಪ್ರತಿಭಾವಂತ ಹಾಗೂ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳನ್ನು ಸಮಾಜ ಪ್ರೋತ್ಸಾಹಿಸಿ ಬೆಂಬಲಿಸಬೇಕು ಎಂದರು.

ಕೊರಡಕೇರಾ ಗ್ರಾಮದ ವೈದ್ಯಕೀಯ ಸೀಟು ಪಡೆದ ವಿದ್ಯಾರ್ಥಿನಿ ಶಿವಲಿಂಗಮ್ಮ ಸೂಡಿ ಮಾತನಾಡಿ, ಸನ್ಮಾನವು ಮುಂದಿನ ವಿದ್ಯಾಭ್ಯಾಸಕ್ಕೆ ಮತ್ತಷ್ಟು ಆತ್ಮವಿಶ್ವಾಸ ನೀಡಿದೆ ಎಂದರು.

ಸನ್ಮಾನ: 2026-27ನೇ ಸಾಲಿನಲ್ಲಿ ಸರ್ಕಾರ ಕೋಟಾದಡಿ ವೈದ್ಯಕೀಯ ಸೀಟು ಪಡೆದ ಕೊರಡಕೇರಾ ಗ್ರಾಮದ ಶಿವಲಿಂಗಮ್ಮ ಸೂಡಿ, ಸಂಗನಾಳ ಗ್ರಾಮದ ಗುರುರಾಜ ಮೇರನಾಳ ಹಾಗೂ ಕೇಸೂರಿನ ಅಮರೇಶ ಜವಳಿ ಅವರನ್ನು ಸನ್ಮಾನಿಸಲಾಯಿತು.

ಸರ್ಕಾರ ಪ್ರಾಥಮಿಕ ಶಾಲಾ ನೌಕರರ ಸಂಘದ ನಿರ್ದೇಶಕರಾಗಿ ಆಯ್ಕೆಯಾದ ಮಹೇಶ ಪಾಡಿ ಹಾಗೂ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕದ ‘ಉತ್ತಮ ವರದಿಗಾರ’ ಪ್ರಶಸ್ತಿ ಪಡೆದ ಕನ್ನಡಪ್ರಭ ತಾಲೂಕು ವರದಿಗಾರ ಪರಶಿವಮೂರ್ತಿ ಮಾಟಲದಿನ್ನಿ ಅವರನ್ನೂ ಗೌರವಿಸಲಾಯಿತು.

ರಾಜ್ಯ ಸಮಿತಿಯ ಕಾರ್ಯಕಾರಿಣಿ ಸದಸ್ಯ ಬಸವರಾಜ ಪಡಿ, ತಾಲೂಕು ಉಪಾಧ್ಯಕ್ಷ ರಾಜಶೇಖರ ಹೊಕ್ರಾಣಿ, ಫಕೀರಪ್ಪ ಹೊಸವಕ್ಕಲ್, ಡಾ. ಗಣೇಶ ಸಂಗನಾಳ, ಸಿದ್ದನಗೌಡ ಪಾಟೀಲ, ಉಮೇಶ ಅಕ್ಕಿ, ಮಹೇಶ, ಮಲ್ಲಪ್ಪ ಕುದರಿ, ಚಂದ್ರಶೇಖರ ಕುಡತಿನಿ, ಶರಣಪ್ಪ ಲಿಂಗಶೆಟ್ಟರ, ಉಮೇಶ ಸೂಡಿ, ಬಸವರಾಜ ಅಂಗಡಿ ಪಾಲ್ಗೊಂಡಿದ್ದರು.ರವೀಂದ್ರ ಪಾಟೀಲ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ವೈದ್ಯಕೀಯ ಸೀಟು ಪಡೆದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ನೀಡಲಾಯಿತು.