ಸಾರಾಂಶ
ಕನ್ನಡಪ್ರಭ ವಾರ್ತೆ ಮಧುಗಿರಿ
ಸಹಕಾರ ಸಚಿವ ಕೆ.ಎನ್ ರಾಜಣ್ಣ ಅವರನ್ನು ಸಚಿವ ಸ್ಥಾನದಿಂದ ವಜಾಗೊಳಿಸಿರುವುದನ್ನು ವಿರೋಧಿಸಿ ಸ್ವಕ್ಷೇತ್ರ ಮಧುಗಿರಿಯಲ್ಲಿ ಮಂಗಳವಾರ ಕೆ.ಎನ್.ರಾಜಣ್ಣ, ಆರ್.ಆರ್.ಅಭಿಮಾನಿಗಳು ಮತ್ತು ಕಾಂಗ್ರೆಸ್ ಪಕ್ಷದ ಬೆಂಬಲಿಗರು ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿಸಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಬೃಹತ್ ಪ್ರತಿಭಟಿಸಿದರು.ಹೈ ಕಮಾಂಡ್ ಸೂಚನೆಯಂತೆ ಈ ಕೂಡಲೇ ವಜಾ ಮಾಡಿರುವ ಆದೇಶವನ್ನು ಸಿಎಂ ಹಿಂಪಡೆದು ಮತ್ತೆ ರಾಜಣ್ಣರನ್ನು ಸಚಿವ ಸಂಪುಟಕ್ಕೆ ಸೇರಿಸಿಕೊಳ್ಳಬೇಕೆಂದು ಅಭಿಮಾನಿಗಳು ಕೆ.ಎನ್.ರಾಜಣ್ಣರ ಪೋಟೋ ಕೈಯಲ್ಲಿ ಹಿಡಿದು ಜೈಕಾರ ಹಾಕುತ್ತಾ ನ್ಯಾಯ ದೊರಕಿಸಿಕೊಡಬೇಕು ಎಂದು ಬೆಂಬಲಿಗರು ಒತ್ತಾಯಿಸಿದರು.
ಕೆಪಿಸಿಸಿ ಸದಸ್ಯರು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು, ಬಹುತೇಕ ಗ್ರಾಪಂ ಅಧ್ಯಕ್ಷರು, ಸದಸ್ಯರು ಕಾಂಗ್ರೆಸ್ ಪಕ್ಷದ ವಿವಿಧ ಹಂತದ ಪದಾಧಿಕಾರಿಗಳು, ಅಪಾರ ಅಭಿಮಾನಿಗಳು ದೊಡ್ಡ ಸಂಖ್ಯೆಯಲ್ಲಿ ಪಟ್ಟಣದ ಎಂಎನ್ಕೆ ಸಮುದಾಯ ಭವನದಲ್ಲಿ ಸಮಾವೇಶಗೊಂಡು ಅಲ್ಲಿಂದ ಅಹಿಂದ ನಾಯಕ ಕೆ.ಎನ್.ರಾಜಣ್ಣ ಅವರಿಗೆ ಒಂದು ನೋಟಿಸ್ ಸಹ ನೀಡದೆ ಏಕಾಏಕಿ ಸಂಪುಟದಿಂದ ಕೈ ಬಿಟ್ಟಿರುವುದು ಅಹಿಂದ ವರ್ಗದ ಮಾಸ್ ಲೀಡರ್‌ಗೆ ಹಾಗೂ ಆಹಿಂದ ವರ್ಗಕ್ಕೆ ಮಾಡಿದ ಅನ್ಯಾಯವಾಗಿದೆ ಎಂದು ಹೈಕಮಾಂಡ್ ಕಾರ್ಯವೈಖರಿಗೆ ಬೇಸರ ವ್ಯಕ್ತಪಡಿಸಿದರು.ಕೆಪಿಸಿಸಿ ಸದಸ್ಯ ಎಂ.ಎಸ್.ಮಲ್ಲಿಕಾರ್ಜುನಯ್ಯ ಮಾತನಾಡಿ, ಕೆ.ಎನ್.ರಾಜಣ್ಣನವರಿಗಾಗಿ ಸರ್ವ ತ್ಯಾಗ ಮಾಡಲು ಸಿದ್ದರಿದ್ದೇವೆ. ನಮ್ಮ ನಾಯಕರಿಗೆ ಇಲ್ಲದ ಸ್ಥಾನ ಮಾನ ನಮಗೂ ಬೇಡ. ಜೆಡಿಎಸ್ ಭದ್ರಕೋಟೆಯಾಗಿದ್ದ ಮಧುಗಿರಿ ಕ್ಷೇತ್ರವನ್ನು ಭೇದಿಸಿ ಕಾಂಗ್ರೆಸ್ ಕೋಟೆ ಕಟ್ಟಿದ್ದೇವೆ. ನಾವು ಪಕ್ಷದ ಮನೆಯ ಮಕ್ಕಳು, ಆದ್ದರಿಂದ ಕೆ.ಎನ್.ರಾಜಣ್ಣನವರಿಗೆ ಮತ್ತೆ ಮರಳಿ ಸಂಪುಟದಲ್ಲಿ ಸ್ಥಾನ ಕೊಡಬೇಕು. ಇದರಿಂದ ಅಹಿಂದ ವರ್ಗದ ಜನರ ಹಿತ ಕಾಪಾಡಿದಂತಾಗುತ್ತದೆ ಎಂದು ವರಿಷ್ಠರಿಗೆ ಮನವಿ ಮಾಡಿದರು.
ಪುರಸಭೆ ಮಾಜಿ ಅಧ್ಯಕ್ಷ ಎನ್.ಗಂಗಣ್ಣ ಮಾತನಾಡಿ, ವರಿಷ್ಠರು ಮತ್ತೆ ಸಚಿವ ಸಂಪುಟಕ್ಕೆ ಸೇರಿಸಿಕೊಳ್ಳಬೇಕು. ಇಲ್ಲದಿದ್ದರೆ ರಾಜಣ್ಣರ ಹಿತ ಬಯಸುವ ಕೆಪಿಸಿಸಿ ಸದಸ್ಯರು, ಬ್ಲಾಕ್ ಅಧ್ಯಕ್ಷರು ,ಪುರಸಭೆ, ಗ್ರಾಪಂ ಸದಸ್ಯರು ಹಾಗೂ ವಿವಿಧ ಹಂತದ ಪದಾಧಿಕಾರಿಗಳು ರಾಜೀನಾಮೆ ಕೊಡಲು ಸಿದ್ಧರಿದ್ದೇವೆ. ಅಹಿಂದ ನಾಯಕ ಕೆ.ಎನ್.ರಾಜಣ್ಣರನ್ನು ಕಾಣದ ಕೈಗಳ ಪಿತೂರಿಯಿಂದ ಕೈ ಬಿಟ್ಟಿರುವುದು ದುರಾದೃಷ್ಟಕರ. ಒಂದು ಸಣ್ಣ ಮಾತಿಗೆ ದೊಡ್ಡ ಶಿಕ್ಷೆಯಾಗಿದೆ. ಪಕ್ಷದ ಹಿತ ದೃಷ್ಠಿಯಿಂದ ಇದು ಒಳ್ಳೆಯ ಬೆಳವಣಿಗೆಯಲ್ಲ. ಆದ್ದರಿಂದ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಡಾ. ಜಿ.ಪರಮೇಶ್ವರ್ ವರಿಷ್ಠರ ಗಮನಕ್ಕೆ ತಂದು ಮತ್ತೆ ಸಂಪುಟಕ್ಕೆ ರಾಜಣ್ಣರನ್ನು ಸೇರಿಸಿಕೊಳ್ಳಬೇಕು. ಸಹಕಾರಿ ಕ್ಷೇತ್ರದಲ್ಲಿ ರೈತರ, ಬಡವರ, ದೀನ ದಲಿತರ ಮತ್ತು ಸಮಾಜದಲ್ಲಿ ತುಳಿತಕ್ಕೆ ಒಳಗಾದ ಜನರ ಕಲ್ಯಾಣಕ್ಕಾಗಿ ಸಾಕಷ್ಟು ಕೆಲಸ ಮಾಡಿದ್ದು, ಸಣ್ಣ ವಿಚಾರಕ್ಕೆ ದೊಡ್ಡ ಶಿಕ್ಷೆ ಬೇಡ , ಇದರಿಂದ ಇಡೀ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ದೊಡ್ಡ ಹೊಡೆತ ಬೀಳಲಿದೆ. ಆದ ಕಾರಣ ವರಿಷ್ಠರು ಇದನ್ನು ಪರಿಶೀಲಿಸಿ ಮತ್ತೆ ಸಂಪುಟಕ್ಕೆ ತೆಗೆದುಕೊಳ್ಳಬೇಕೆಂದು ಒತ್ತಾಯಿಸಿದರು.ಜಿಪಂ.ಮಾಜಿ ಅಧ್ಯಕ್ಷ ಜಿ.ಜೆ.ರಾಜಣ್ಣ ಮಾತನಾಡಿ, ಕೆ.ಎನ್.ರಾಜಣ್ಣರನ್ನು ಏಕಾಏಕಿ ವಜಾ ಮಾಡಿರುವುದು ಮಧುಗಿರಿ ಕ್ಷೇತ್ರದ ಜನತೆಗೆ ನೋವು ತಂದಿದೆ. ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಹೊಡೆತ ಬೀಳಲಿದೆ. 2004ರಲ್ಲಿ ಕಾಂಗ್ರೆಸ್ ಪಕ್ಷದಿಂದ ಕೆ.ಎನ್.ರಾಜಣ್ಣ ಅವರನ್ನು ಉಚ್ಛಾಟಿಸಿದಾಗ ಅವರು ಜೆಡಿಎಸ್ ಸೇರಿದ್ದರು. ಅಂದು ಜಿಲ್ಲೆಯಲ್ಲಿ ಕಾಂಗ್ರೆಸ್ ಧೂಳಿಪಟವಾಗಿ 13 ಕ್ಷೇತ್ರಗಳ ಪೈಕಿ 9 ಕ್ಷೇತ್ರಗಳಲ್ಲಿ ಜೆಡಿಎಸ್ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಟ್ಟಿದ್ದರು. ಹಾಗಾಗಿ ಕಾಂಗ್ರೆಸ್ ಬೆಂಬಲಿಸುವ ಅಹಿಂದ ಮತದಾರರಿದ್ದಾರೆ. ಇದನ್ನು ಮನಗಂಡು ವರಿಷ್ಠರು ಪರಿಶೀಲಿಸಿ ಮತ್ತೆ ರಾಜಣ್ಣರನ್ನು ಸಚಿವ ಸಂಪುಟಕ್ಕೆ ತೆಗೆದುಕೊಳ್ಳುವಂತೆ ಒತ್ತಾಯಿಸಿದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಆದಿ ನಾರಾಯಣರೆಡ್ಡಿ, ಗೋಪಾಲಯ್ಯ, ಕೆಪಿಸಿಸಿ ಮೆಂಬರ್ ಸಿದ್ದಾಪುರ ರಂಗಶ್ಯಾಮಯ್ಯ, ಪುರಸಭೆ ಅಧ್ಯಕ್ಷ ಲಾಲಪೇಟೆ ಮಂಜುನಾಥ್, ಉಪಾಧ್ಯಕ್ಷೆ ಸುಜಾತ ಶಂಕರ ನಾರಾಯಣ್, ಸದಸ್ಯರಾದ ಎಂ.ವಿ.ಗೋವಿಂದರಾಜು, ಮಂಜುನಾಥ ಆಚಾರ್, ಎಸ್‌ಬಿಟಿ ರಾಮು, ಆಲೀಮ್,ನಾಸೀಮಾ ಭಾನು,ಮುಖಂಡರಾದ ಎಂ.ಕೆ.ನಂಜುಂಡರಾಜು, ಆಯೂಬ್, ಬಾಬಾ ಫಕೃದ್ಧೀನ್, ಸುವರ್ಣಮ್ಮ, ಇಂದಿರಾ, ಎಂ.ಎಸ್.ಶಂಕರನಾರಾಯಣ, ಲಕ್ಷ್ಮೀನಾರಾಯಣ, ವಕೀಲ ನಾರಾಯಣಗೌಡ. ಕೆಎಂಎಫ್ ನಿರ್ದೇಶಕ ಮೈದನಹಳ್ಳಿ ಕಾಂತರಾಜು, ಜಗದೀಶ್ ಕುಮಾರ್. ಕೆಜಿಹಳ್ಳಿ ವೆಂಕಟೇಶ್ ಹಾಗೂ ಅಪಾರ ಬೆಂಬಲಿಗರು ,ಅಭಿಮಾನಿಗಳು ಹಾಗೂ ಹಿತೈಷಿಗಳು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.