ಜನಪರ ಕಾಳಜಿಯುಳ್ಳ ಕೆಆರ್‌ಎಸ್‌ಗೆ ಬೆಂಬಲಿಸಿ: ರವಿ ಕೃಷ್ಣಾರೆಡ್ಡಿ

| Published : Feb 28 2024, 02:34 AM IST

ಜನಪರ ಕಾಳಜಿಯುಳ್ಳ ಕೆಆರ್‌ಎಸ್‌ಗೆ ಬೆಂಬಲಿಸಿ: ರವಿ ಕೃಷ್ಣಾರೆಡ್ಡಿ
Share this Article
  • FB
  • TW
  • Linkdin
  • Email

ಸಾರಾಂಶ

ಕರ್ನಾಟಕಕ್ಕಾಗಿ ನಾವು ಎನ್ನುವ ಹೆಸರಿನಲ್ಲಿ ರಾಜ್ಯವ್ಯಾಪಿ 13 ದಿನಗಳ ಬೈಕ್ ಜಾಥಾ ಯಾದಗಿರಿಗೆ ಆಗಮಿಸಿದ ಹಿನ್ನೆಲೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪಕ್ಷದ ರಾಜ್ಯಾಧ್ಯಕ್ಷ ರವಿ ಕೃಷ್ಣಾರೆಡ್ಡಿ ಮನವಿ ಮಾಡಿದರು.

ಕನ್ನಡಪ್ರಭ ವಾರ್ತೆ ಯಾದಗಿರಿ

ಜನಪರ ಕಾಳಜಿಯ, ಸ್ವಚ್ಛ ಮತ್ತು ಪ್ರಾಮಾಣಿಕ ರಾಜಕೀಯ ವ್ಯವಸ್ಥೆಗಾಗಿ ನಿರಂತರವಾಗಿ ಶ್ರಮಿಸುತ್ತಿರುವ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ನಾಡ ಪ್ರೇಮಿ ಸೈನಿಕರನ್ನು ಹಾಗೂ ಕೆಆರ್ ಎಸ್ ಪಕ್ಷಕ್ಕೆ ಬೆಂಬಲಿಸಬೇಕೆಂದು ಪಕ್ಷದ ರಾಜ್ಯಾಧ್ಯಕ್ಷ ರವಿ ಕೃಷ್ಣಾರೆಡ್ಡಿ ಮನವಿ ಮಾಡಿದರು.

ಫೆ.19 ರಂದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿಯಲ್ಲಿ ಪ್ರಾರಂಭವಾದ ‘ಕರ್ನಾಟಕಕ್ಕಾಗಿ ನಾವು’ ಎನ್ನುವ ಹೆಸರಿನಲ್ಲಿ ರಾಜ್ಯವ್ಯಾಪಿ ನಡೆಯುತ್ತಿರುವ ಕೆಆರ್‌ಎಸ್‌ ಪಕ್ಷದ ಬೈಕ್ ಜಾಥಾ ಯಾದಗಿರಿ ಜಿಲ್ಲೆಗೆ ಆಗಮಿಸಿದ ಹಿನ್ನೆಲೆ ಸ್ವಾಗತಿಸಲಾಯಿತು.

ಈ ವೇಳೆ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಭ್ರಷ್ಟರನ್ನು, ಅಪ್ರಾಮಾಣಿಕರನ್ನು, ಸ್ವಜನ ಪಕ್ಷಪಾತಿಗಳನ್ನು, ಅನೈತಿಕ ನಡವಳಿಕೆ ಉಳ್ಳವರನ್ನು, ಸುಳ್ಳರನ್ನು, ಸಮಾಜಘಾತುಕ ಶಕ್ತಿಗಳನ್ನು, ಕುಟುಂಬ ರಾಜಕಾರಣದ ಮೂಲಕ ಪ್ರಜಾಪ್ರಭುತ್ವದ ಆಶಯಗಳನ್ನು ಮಣ್ಣುಪಾಲು ಮಾಡುತ್ತಿರುವ ಜೆಸಿಬಿ ಪಕ್ಷಗಳ ಪರಮಸ್ವಾರ್ಥಿ ರಾಜಕಾರಣಿಗಳನ್ನು ತಮ್ಮ ಮತ್ತು ತಮ್ಮ ಮಕ್ಕಳ ರಾಜಕೀಯ ನಾಯಕರೆಂದು ಒಪ್ಪಿಕೊಳ್ಳದೆ ಜನಪರ ಕಾಳಜಿಯ, ಸ್ವಚ್ಛ ಮತ್ತು ಪ್ರಾಮಾಣಿಕ ರಾಜಕೀಯ ವ್ಯವಸ್ಥೆಗಾಗಿ ನಿರಂತರವಾಗಿ ಶ್ರಮಿಸುತ್ತಿರುವ ಪಕ್ಷ ಕೆಆರ್‌ಎಸ್ ಪಕ್ಷವಾಗಿದೆ ಎಂದರು.

ರಾಜ್ಯ ಪ್ರಧಾನ ಕಾರ್ಯದರ್ಶಿ ದೀಪಕ್ ಸಿ. ಎನ್. ಮಾತನಾಡಿ, ತಮ್ಮ ಭ್ರಷ್ಟಾಚಾರ, ಸ್ವಜನ ಪಕ್ಷಪಾತ, ದುರಾಡಳಿತದ ಮೂಲಕ ರಾಜ್ಯದ ಜನರಿಗೆ ನಿರಂತರವಾಗಿ ದ್ರೋಹ ಮಾಡುತ್ತಿರುವ ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್‌ನ್ನು ತಿರಸ್ಕರಿಸಿ ಮತ್ತು ರಾಜ್ಯದ ಏಕೈಕ ಪ್ರಾಮಾಣಿಕ ಮತ್ತು ಪ್ರಾದೇಶಿಕ ಪಕ್ಷವಾದ ಕೆಆರ್‌ಎಸ್‌ಗೆ ಬೆಂಬಲಿಸಿ ರಾಜ್ಯದ ಜನರನ್ನು ಕೋರಲು ಹಾಗೂ ಸ್ವಚ್ಛ, ಪ್ರಾಮಾಣಿಕ, ಜನಪರ, ಪ್ರಾದೇಶಿಕ ರಾಜಕಾರಣದ ಕುರಿತು ಜನಜಾಗೃತಿ ಮೂಡಿಸಲು ರಾಜ್ಯವ್ಯಾಪಿ ಬೈಕ್ ಜಾಥಾ ಹಮ್ಮಿಕೊಂಡಿದೆ ಎಂದು ತಿಳಿಸಿದರು.

ಪಕ್ಷದ ರಾಜ್ಯ ಕಾರ್ಯದರ್ಶಿ ರಘು ಜಾಣಗೆರೆ, ನರಸಿಂಹ ಮೂರ್ತಿ, ಜಂಟಿ ಕಾರ್ಯದರ್ಶಿ ರಘುಪತಿ ಭಟ್, ಸಂಘಟನಾ ಕಾರ್ಯದರ್ಶಿ ಚಂದ್ರಶೇಖರ್ ಮಠದ, ತುಕಾರಾಮ ಗೌರೆ, ಜಿಲ್ಲಾಧ್ಯಕ್ಷರಾದ ಜಗನಾಥ ಎಸ್. ಚಿಂತನಹಳ್ಳಿ ಇತರರಿದ್ದರು.