ಸಾರಾಂಶ
ಸಂಡೂರು: ನರೇಂದ್ರ ಮೋದಿ ದೇಶದ ಸಮಸ್ತ ಜನತೆ ತನ್ನ ಕುಟುಂಬ ಎಂದು ಬಗೆದು ದೇಶದ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ. ದೇಶದ ಹಿತದೃಷ್ಟಿಯಿಂದ ಜನತೆ ನರೇಂದ್ರ ಮೋದಿ ಅವರನ್ನು ಬೆಂಬಲಿಸಬೇಕು ಎಂದು ಬಳ್ಳಾರಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ.ಶ್ರೀರಾಮುಲು ಮನವಿ ಮಾಡಿದರು.
ಪಟ್ಟಣದ ವಾಲ್ಮೀಕಿ ವೃತ್ತದಲ್ಲಿ ಭಾನುವಾರ ನಡೆದ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.ಕೋವಿಡ್ ಸಂದರ್ಭದಲ್ಲಿ ಜಾತಿ, ಧರ್ಮವನ್ನು ನೋಡದೇ ದೇಶದ ಸಮಸ್ತ ಜನತೆಗೆ ಉಚಿತವಾಗಿ ಲಸಿಕೆಯನ್ನು ಕೊಡಿಸುವ ಮೂಲಕ ಜನರ ಪ್ರಾಣ ಉಳಿಸುವ ಕೆಲಸವನ್ನು ಮೋದಿ ಮಾಡಿದರು. ನಾನು ೩೫ ವರ್ಷದ ರಾಜಕೀಯ ಜೀವನದಲ್ಲಿ ಬಡವರ ಸೇವೆಗೈದಿದ್ದೇನೆ. ಆರೋಗ್ಯ ಸಚಿವನಾಗಿದ್ದಾಗ, ಇಲ್ಲಿನ ಆಸ್ಪತ್ರೆಯನ್ನು ಮೇಲ್ದರ್ಜೆಗೆ ಏರಿಸಲು ಪ್ರಯತ್ನಿಸಿದೆ. ಜನತೆಯ ಮೇಲೆ ವಿಶ್ವಾಸವಿದೆ. ಜನತೆ ಈ ಬಾರಿಯ ಚುನಾವಣೆಯಲ್ಲಿ ತಮ್ಮನ್ನು ಗೆಲ್ಲಿಸುವ ಮೂಲಕ ನರೇಂದ್ರ ಮೋದಿ ಕೈಬಲಪಡಿಸಬೇಕು ಎಂದರು.
ಬಿ.ಶ್ರೀರಾಮುಲು ಪರ ಪ್ರಚಾರ ನಡೆಸಿದ ಜೆಡಿಎಸ್ ಮುಖಂಡ ಅನಿಲ್ ಲಾಡ್, ನರೇಂದ್ರ ಮೋದಿ ನೇತೃತ್ವದ ಸರ್ಕಾರ ದೇಶದ ಆರ್ಥಿಕ ಪರಿಸ್ಥಿತಿಯನ್ನು ಉತ್ತಮ ಪಡಿಸಲು ಶ್ರಮಿಸುತ್ತಿದೆ. ಶ್ರೀರಾಮುಲು ಬಡವರ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸ ಮಾಡುತ್ತಿದ್ದಾರೆ. ಅವರು ಗೆದ್ದರೆ ಕೇಂದ್ರದಲ್ಲಿ ಮಂತ್ರಿಯಾಗಲಿದ್ದಾರೆ. ಕ್ಷೇತ್ರದಲ್ಲಿ ಶ್ರೀರಾಮುಲುಗೆ ೧೦-೨೦ ಸಾವಿರ ಲೀಡ್ ಕೊಡಿಸಲು ಶ್ರಮಿಸೋಣ ಎಂದರು.ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಅನಿಲ್‌ಕುಮಾರ್ ಮೋಕಾ, ಉಪಾಧ್ಯಕ್ಷ ಜಿ.ಟಿ. ಪಂಪಾಪತಿ, ಸಂಡೂರು ಮಂಡಲ ಅಧ್ಯಕ್ಷ ನಾನಾ ಸಾಹೇಬ್ ನಿಕ್ಕಂ, ಮುಖಂಡರಾದ ಕುಮಾರ್ ನಾಯ್ಕ್, ಸುರೇಶ್, ದರೋಜಿ ರಮೇಶ್, ಡಿ.ಕೃಷ್ಣಪ್ಪ, ಡಿ.ಪ್ರಹ್ಲಾದ್, ಆರ್.ಟಿ. ರಘು ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.