ಸಾರಾಂಶ
ದಾವಣಗೆರೆಯಲ್ಲಿ ವೈದ್ಯರ ಮುಷ್ಕರ ಬೆಂಬಲಿಸಿ ಕರ್ನಾಟಕ ರಾಜ್ಯ ವೈದ್ಯಕೀಯ ಮತ್ತು ಮಾರಾಟ ಪ್ರತಿನಿಧಿಗಳ ಸಂಘದಿಂದ ಪತ್ರ ನೀಡಿ, ಹೋರಾಟಕ್ಕೆ ಕೈಜೋಡಿಸಲಾಯಿತು.
ದಾವಣಗೆರೆ: ಕೋಲ್ಕತ್ತಾದಲ್ಲಿ ವೈದ್ಯಕೀಯ ವಿದ್ಯಾರ್ಥಿನಿ ಮೇಲಿನ ಅತ್ಯಾಚಾರ, ಹತ್ಯೆ ಖಂಡಿಸಿ ಭಾರತೀಯ ವೈದ್ಯಕೀಯ ಸಂಘ ಶನಿವಾರ ಕರೆ ನೀಡಿರುವ 24 ಗಂಟೆಗಳ ವೈದ್ಯಕೀಯ ಸೇವೆ ಬಂದ್‌ಗೆ ಕರ್ನಾಟಕ ರಾಜ್ಯ ವೈದ್ಯಕೀಯ ಮತ್ತು ಮಾರಾಟ ಪ್ರತಿನಿಧಿಗಳ ಸಂಘ-ಎಫ್‌ಎಂಆರ್‌ಎಐ ಬೆಂಬಲ ಸೂಚಿಸಿದೆ.
ಪಶ್ಚಿಮ ಬಂಗಾಳದ ಕೋಲ್ಕತ್ತಾದ ಆರ್.ಜಿ.ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ವೈದ್ಯಕೀಯ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಎಸಗಿ, ಹತ್ಯೆ ಮಾಡಿದ್ದನ್ನು ತೀವ್ರವಾಗಿ ಖಂಡಿಸುತ್ತೇವೆ. ಘಟನೆ ಖಂಡಿಸಿ ಐಎಂಎ ಕರೆ ನೀಡಿರುವ ವೈದ್ಯಕೀಯ ಮುಷ್ಕರಕ್ಕೆ ತಮ್ಮ ಸಂಪೂರ್ಣ ಬೆಂಬಲವಿದೆ ಎಂದು ಕರ್ನಾಟಕ ರಾಜ್ಯ ವೈದ್ಯಕೀಯ ಮತ್ತು ಮಾರಾಟ ಪ್ರತಿನಿಧಿಗಳ ಸಂಘದ ರಾಜ್ಯಾಧ್ಯಕ್ಷ ಕೆ.ಎಚ್.ಆನಂದರಾಜ ಇತರರು ತಿಳಿಸಿದ್ದಾರೆ.ಪ್ರತಿಷ್ಠಿತ ವೈದ್ಯಕೀಯ ಕಾಲೇಜಿನಲ್ಲಿ ತರಬೇತಿಯಲ್ಲಿದ್ದ ವೈದ್ಯೆ ಹತ್ಯೆ ನಡೆದಿರುವುದು ಇಡೀ ದೇಶದ ಶಾಂತಿಪ್ರಿಯ ಪ್ರಜೆಯ ಆತ್ಮಸಾಕ್ಷಿಯನ್ನು ಆಳವಾಗಿ ಅಲ್ಲಾಡಿಸಿದೆ. ರಾಷ್ಟ್ರವ್ಯಾಪಿ ಈ ಘಟನೆ ಬಗ್ಗೆ ಆಕ್ರೋಶ ವ್ಯಕ್ತವಾಗುತ್ತಿದೆ. ಕೋಲ್ಕತ್ತಾದಲ್ಲಿ ಪ್ರತಿಭಟಿಸುತ್ತಿದ್ದ ಕಿರಿಯ ವೈದ್ಯರ ಮೇಲೆ ನಡೆದ ದೌರ್ಜನ್ಯ ಖಂಡಿಸುತ್ತೇವೆ. ಹತ್ಯೆ ಮಾಡಿದ ದುಷ್ಕರ್ಮಿಗಳನ್ನು ಕಠಿಣ ಶಿಕ್ಷೆಗೆ ಗುರಿಪಡಿಸಬೇಕು. ಎಲ್ಲಾ ವೈದ್ಯಕೀಯ ವೃತ್ತಿಪರರು, ವಿಶೇಷವಾಗಿ ಮಹಿಳೆಯರ ಸುರಕ್ಷತೆ ಹಾಗೂ ಘನತೆ ಖಾತರಿಪಡಿಸುವವರೆಗೂ ಸಂಘ ಹೋರಾಟಕ್ಕೆ ಬೆಂಬಲ ಸೂಚಿಸುತ್ತದೆ ಎಂದು ಹೇಳಿದ್ದಾರೆ.