2026-27ನೇ ಸಾಲಿನ ಕೇಂದ್ರ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿಯಲ್ಲಿ ಎಫ್.ಎ.ಕ್ಯೂ ಗುಣಮಟ್ಟದ ಹೆಸರುಕಾಳು ಹುಟ್ಟುವಳಿ ಖರೀದಿಸಲು ಬೆಂಬಲ ಬೆಲೆ ನಿಗದಿಪಡಿಸಲಾಗಿದೆ.
ಜಿಲ್ಲಾ ಟಾಸ್ಕ್ ಫೋರ್ಸ ಸಮಿತಿ ಸಭೆಯಲ್ಲಿ ಸಿ.ಎನ್. ಶ್ರೀಧರ್
ಜಿಲ್ಲೆಯ 59 ಕಡೆಗಳಲ್ಲಿ ಖರೀದಿ ಕೇಂದ್ರ ತೆರೆಯಲು ತೀರ್ಮಾನಕನ್ನಡಪ್ರಭ ವಾರ್ತೆ ಗದಗ
2026-27ನೇ ಸಾಲಿನ ಕೇಂದ್ರ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿಯಲ್ಲಿ ಎಫ್.ಎ.ಕ್ಯೂ ಗುಣಮಟ್ಟದ ಹೆಸರುಕಾಳು ಹುಟ್ಟುವಳಿ ಖರೀದಿಸಲು ಬೆಂಬಲ ಬೆಲೆ ನಿಗದಿಪಡಿಸಲಾಗಿದೆ. ನೋಂದಣಿ ಪ್ರಕ್ರಿಯೆಯಲ್ಲಿ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ತಿಳಿಸಿದರು.ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಇತ್ತೀಚೆಗೆ 2026-27ನೇ ಸಾಲಿನ ಕನಿಷ್ಟ ಬೆಂಬಲ ಬೆಲೆ ಯೋಜನೆಯಡಿಯಲ್ಲಿ ಹೆಸರುಕಾಳು ಖರೀದಿಸುವ ಕುರಿತು ಜರುಗಿದ ಜಿಲ್ಲಾ ಟಾಸ್ಕ್ ಫೋರ್ಸ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ತೆರೆಯಲಾಗುವ ಹೆಸರುಕಾಳು ಹುಟ್ಟುವಳಿ ಖರೀದಿ ಕೇಂದ್ರಗಳಲ್ಲಿ ಖರೀದಿಸಲಾಗುವ ಎಫ್.ಎ.ಕ್ಯೂ ಗುಣಮಟ್ಟ ಪರಿಶೀಲನೆಗೆ ಗ್ರೇಡರ್‌ಗಳನ್ನು ನೇಮಕ ಮಾಡಬೇಕು ಮತ್ತು ಅವರಿಗೆ ಎಫ್‌ಎಕ್ಯೂ ಗ್ರೇಡಿಂಗ್ ತರಬೇತಿ ನೀಡಬೇಕು. ಜಿಲ್ಲೆಯ ಪ್ರತಿ ರೈತರಿಂದ ಪ್ರತಿ ಎಕರೆಗೆ 4 ಕ್ವಿಂಟಾಲ್ ಗರಿಷ್ಟ ಪ್ರಮಾಣ ಹಾಗೂ ಪ್ರತಿ ರೈತರಿಂದ ಗರಿಷ್ಟ 20 ಕ್ವಿಂಟಾಲ್ ಹೆಸರು ಕಾಳು ಖರೀದಿಸಬೇಕು. ಬೆಂಬಲ ಬೆಲೆಯಲ್ಲಿ ಹೆಸರು ಕಾಳು ಹುಟ್ಟುವಳಿ ಖರೀದಿಯ ಕುರಿತು ರೈತರಿಗೆ ತಿಳುವಳಿಕೆ ನೀಡಲು ವ್ಯಾಪಕ ಪ್ರಚಾರ ಕೈಗೊಳ್ಳಬೇಕು ಎಂದು ಸೂಚಿಸಿದರು.ಕೃಷಿ ಮಾರಾಟ ಇಲಾಖೆಯ ಸಹಾಯಕ ನಿರ್ದೇಶಕಿ ಸುಧಾ ಆರ್.ಬಂಡಿ ಮಾತನಾಡಿ, ಎಫ್.ಎ.ಕ್ಯೂ ಗುಣಮಟ್ಟದ ಹೆಸರುಕಾಳು ಹುಟ್ಟುವಳಿಗೆ ಪ್ರತಿ ಕ್ವಿಂಟಲ್‌ಗೆ ₹8780 ಗಳಂತೆ ನಿಗದಿಪಡಿಸಲಾಗಿದೆ. ಸರ್ಕಾರದ ಆದೇಶದನುಸಾರ ಕೇಂದ್ರ ಸರ್ಕಾರದ ಬೆಂಬಲ ಬೆಲೆ ಮಾರ್ಗಸೂಚಿಗಳನ್ವಯ ಈ ಆದೇಶ ಹೊರಡಿಸಿದ ದಿನಾಂಕದಿಂದ ರೈತರ ನೋಂದಣಿ ಕಾಲಾವಧಿಯನ್ನು 80 ದಿನಗಳವರೆಗೆ ಹಾಗೂ ಖರೀದಿ ಅವಧಿಯನ್ನು 90 ದಿನಗಳವರೆಗೆ ನಿಗದಿಪಡಿಸಿದ್ದು, ನೋಂದಣಿ ಕಾರ್ಯದ ಜೊತೆಗೆ ಖರೀದಿ ಪ್ರಕ್ರಿಯೆಯನ್ನು ಸಹ ಪ್ರಾರಂಭಿಸಿ, ರಾಜ್ಯದಲ್ಲಿ ಮಾರ್ಕಫೆಡ್ ಸಂಸ್ಥೆಯ ಮೂಲಕ ಖರೀದಿಸಲು ಆದೇಶಿಸಲಾಗಿದೆ ಎಂದು ತಿಳಿಸಿದರು.
ಜಿಲ್ಲೆಯ 59 ಕಡೆಗಳಲ್ಲಿ ಖರೀದಿ ಕೇಂದ್ರಗಳನ್ನು ತೆರೆಯಲು ತೀರ್ಮಾನಿಸಲಾಯಿತು.ಸಭೆಯಲ್ಲಿ ಕೃಷಿ ಇಲಾಖೆ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ, ತೋಟಗಾರಿಕೆ ಇಲಾಖೆ, ಸಹಕಾರಿ ಸಂಘಗಳ ಇಲಾಖೆ ಸೇರಿ ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.