ಸಾರಾಂಶ
ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಜಿಲ್ಲೆಯ ರೈತರಿಂದ ರಾಗಿ, ಬಿಳಿಜೋಳವನ್ನು ಖರೀದಿಸಲು ಖರೀದಿ ಕೇಂದ್ರಗಳನ್ನು ಎಲ್ಲ ತಾಲೂಕುಗಳಲ್ಲಿ ತೆರೆಯಲಾಗುವುದು. ಡಿಸೆಂಬರ್ 1ರಿಂದ ಡಿ.30ರವರಗೆ ರೈತರ ನೋಂದಣಿ ಮಾಡಲಾಗುವುದು. ಬರುವ ಜನವರಿ ಒಂದರಿಂದ ರಾಗಿ, ಬಿಳಿ ಜೋಳ ಖರೀದಿ ಆರಂಭಿಸಲಾಗುವುದು.
ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ಕನಿಷ್ಠ ಬೆಂಬಲ ಯೋಜನೆಯಡಿ ರಾಗಿ ಮತ್ತು ಬಿಳಿ ಜೋಳವನ್ನು 2025ರ ಜನವರಿಯಿಂದ ಮಾರ್ಚ್‌ವರೆಗೆ ಸರ್ಕಾರ ಖರೀದಿಸುತ್ತಿದ್ದು ಜಿಲ್ಲೆಯ ರೈತರು ಮುಂದಿನ ಡಿಸೆಂಬರ್ 1ರಿಂದ ನೋಂದಣಿ ಮಾಡಿಸಿಕೊಳ್ಳುವಂತೆ ರೈತರಲ್ಲಿ ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಮನವಿ ಮಾಡಿದರು.ನಗರದ ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿಗಳ ನ್ಯಾಯಾಲಯ ಸಭಾಂಗಣದಲ್ಲಿ ಶುಕ್ರವಾರ ನಡೆದ ಜಿಲ್ಲೆಯಲ್ಲಿ ರಾಗಿ ಖರೀದಿ ಕೇಂದ್ರಗಳ ತೆರೆಯುವ ಸಂಬಂಧದ ಜಿಲ್ಲಾ ಟಾಸ್ಕ್ ಪೊರ್ಸ್ ಸಮಿತಿ ಸಭೆಯಲ್ಲಿ ಮಾತನಾಡಿದರು. 2024-25ನೇ ಸಾಲಿನ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಜಿಲ್ಲೆಯ ರೈತರಿಂದ ರಾಗಿ, ಬಿಳಿಜೋಳವನ್ನು ಖರೀದಿಸಲು ಖರೀದಿ ಕೇಂದ್ರಗಳನ್ನು ಎಲ್ಲ ತಾಲೂಕುಗಳಲ್ಲಿ ತೆರೆಯಲು ಕ್ರಮವಹಿಸುವಂತೆ ಸೂಚಿಸಿದರು.
ಡಿಸೆಂಬರ್ 1ರಿಂದ ನೋಂದಣಿರೈತರ ನೋಂದಣಿಯನ್ನು ಡಿಸೆಂಬರ್ 1ರಿಂದ ಆರಂಭವಾಗಿ ಡಿಸೆಂಬರ್ 30ರವರಗೆ ಮಾಡಲಾಗುತ್ತದೆ. ಖರೀದಿಯು 2025 ಜನವರಿ 1ರಿಂದ ಆರಂಭಿಸಿ ಮಾರ್ಚ್ 31ವರಗೆ ಖರೀದಿಸಲಾಗುತ್ತದೆ. ರೈತರಿಂದ ರಾಗಿ ಖರೀದಿಸಿದ ದಿನವೇ ಸಂಬಂಧಿಸಿದ ರೈತರಿಗೆ ಗ್ರೈನ್ ಓಚರ್ ಅನ್ನು ಆಯಾ ದಿನವೇ ನೀಡಲಾಗುವುದು ಎಂದರು.
ಪ್ರತಿಯೊಂದು ಖರೀದಿ ಕೇಂದ್ರಗಳಲ್ಲಿ ಬ್ಯಾನರ್‌ಗಳನ್ನು ಹಾಕಿ ಪ್ರತಿ ಕ್ವಿಂಟಾಲ್‌ಗೆ ಸರ್ಕಾರವು ನಿಗದಿಪಡಿಸಿರುವ ದರ ಹಾಗೂ ಇತರೆ ವಿವರವನ್ನು ಪ್ರದರ್ಶಿಸುವುದು, ಕುಡಿಯುವ ನೀರು ಹಾಗೂ ಮೂಲಭೂತ ಸೌಕರ್ಯಗಳ ವ್ಯವಸ್ಥೆ ಮಾಡಬೇಕು. ಖರೀದಿ ಅಧಿಕಾರಿಯು ರಾಗಿ ಖರೀದಿ ಕೇಂದ್ರಗಳಲ್ಲಿ ಯಾವುದೇ ಲೋಪದೋಷಗಳಿಗೆ ಅವಕಾಶ ನೀಡದೆ ನಿಯಮಾನುಸಾರ ಕರ್ತವ್ಯ ನಿರ್ವಹಿಸಬೇಕು ಎಂದು ಇಲಾಖೆಯ ಅಧಿಕಾರಿಗಳಿಗೆ ತಿಳಿಸಿದರು. ಈ ಸಂದರ್ಭದಲ್ಲಿ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರ ಇಲಾಖೆಯ ಉಪನಿರ್ದೇಶಕ ನಾಗರಾಜು ಕೆಳಗಿನ ಮನೆ, ಕೃಷಿ ಇಲಾಖೆ ಉಪನಿರ್ದೇಶಕಿ ಜಿ.ದೀಪಶ್ರಿ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರ ಇಲಾಖೆಯ ಸಹಾಯಕ ನಿರ್ದೇಶಕ ಡಿ. ನಾಗರಾಜು ಮತ್ತಿತರು ಇದ್ದರು.