ಪದವೀಧರ ಶಿಕ್ಷಕರ ಈಶಾನ್ಯ ಮತ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶಶಿಲ್ ನಮೋಶಿ ಪರ ವಿಧಾನಪರಿಷತ್ ಸದಸ್ಯ ಎನ್. ರವಿಕುಮಾರ ಅವರು ಬುಧವಾರ ಪಟ್ಟಣದಲ್ಲಿ ಬಿರುಸಿನ ಪ್ರಚಾರ ನಡೆಸಿದರು.

ಕನಕಗಿರಿ: ಪದವೀಧರ ಶಿಕ್ಷಕರ ಈಶಾನ್ಯ ಮತ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶಶಿಲ್ ನಮೋಶಿ ಪರ ವಿಧಾನಪರಿಷತ್ ಸದಸ್ಯ ಎನ್. ರವಿಕುಮಾರ ಅವರು ಬುಧವಾರ ಪಟ್ಟಣದಲ್ಲಿ ಬಿರುಸಿನ ಪ್ರಚಾರ ನಡೆಸಿದರು.

ಬಳಿಕ ಪತ್ರಕರ್ತರೊಂದಿಗೆ ಮಾತನಾಡಿ, ಶಶಿಲ್ ನಮೋಶಿ ಅವರು ಹಲವು ವರ್ಷಗಳಿಂದ ಪದವೀಧರ ಶಿಕ್ಷಕರ ಪರವಾಗಿ ದುಡಿಯುತ್ತಿದ್ದಾರೆ. ಈ ಹಿಂದೆಯೂ ಈಶಾನ್ಯ ಶಿಕ್ಷಕರ ಪದವೀಧರ ಕ್ಷೇತ್ರದಿಂದ ನಮೋಶಿ ಗೆದ್ದು, ಅನೇಕ ಬದಲಾವಣೆ ತಂದಿದ್ದಾರೆ. ಪದವೀಧರರ ಕಷ್ಟ, ಕಾರ್ಪಣ್ಯಗಳಿಗೆ ಸ್ಪಂದಿಸುವ ಮೂಲಕ ನಮೋಶಿ ಜನಮುಖಿಯಾಗಿದ್ದಾರೆ. ಇಂತಹ ನಾಯಕರಿಗೆ ಮತ ಚಲಾಯಿಸಿ ಅಭಿವೃದ್ಧಿಗೆ ಆದ್ಯತೆ ನೀಡಬೇಕು ಎಂದರು. ಪಿಯು ಕಾಲೇಜಿನ ಪ್ರಾಚಾರ್ಯ ಅಮರೇಶ ದೇವರಾಳ ಮಾತನಾಡಿ, ಪಿಯು ಕಾಲೇಜುಗಳಿಗೆ ಪ್ರಾಚಾರ್ಯ ನೇಮಕಾತಿ ಆಯ್ಕೆಯಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶದ ಅಭ್ಯರ್ಥಿಗಳಿಗೆ ಅವಕಾಶ ನೀಡಿಲ್ಲ. ಇಲಾಖೆಯ ನಿಯಮಾನುಸಾರ ಅನುಭವ ಹಾಗೂ ಸಾಮರ್ಥ್ಯ ಹೊಂದಿದ್ದರೂ ಇಲ್ಲಿನ ಉಪನ್ಯಾಸಕರಿಗೆ ಕಲ್ಯಾಣ ಕರ್ನಾಟಕ ಪ್ರದೇಶಕ್ಕೆ ಸೀಮಿತಗೊಳಿಸಿ ಅನ್ಯಾಯ ಮಾಡಲಾಗುತ್ತಿದೆ. ಕಲ್ಯಾಣ ಕರ್ನಾಟಕ ಪ್ರದೇಶದ ಉಪನ್ಯಾಸಕರಿಗೂ ರಾಜ್ಯವ್ಯಾಪಿ ನಡೆಯುವ ಪ್ರಾಚಾರ್ಯ ನೇಮಕ ಪ್ರಕ್ರಿಯೆಯಲ್ಲಿ ಅವಕಾಶ ನೀಡಬೇಕು. ಈ ನಮ್ಮ ಪ್ರದೇಶದಲ್ಲಿ ಹಿಂದುಳಿದ ಕಾಲೇಜುಗಳಿಗೆ ವಿಶೇಷ ಅನುದಾನ ಮಂಜೂರು ಮಾಡುವ ಮೂಲಕ ಅಭಿವೃದ್ಧಿಗೆ ಆದ್ಯತೆ ನೀಡಬೇಕು. ಉಪನ್ಯಾಸಕರ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಮನವಿ ಮಾಡಿದರು.

ಉಪನ್ಯಾಸಕರಾದ ಪಂಪಾ ರೆಡ್ಡಿ ಗಚ್ಚಿನಮನಿ, ಶಿವಪುತ್ರಪ್ಪ ಗಳಪೂಜಿ, ಪ್ರಮುಖರಾದ ಸಣ್ಣ ಕನಕಪ್ಪ, ಮಹಾಂತೇಶ ಸಜ್ಜನ್, ಮಂಜುನಾಥ, ಕನಕಪ್ಪ ಯಾದವ್, ಶೇಷಪ್ಪ ಪೂಜಾರ, ನರಸಪ್ಪ ಕುರುಗೋಡ, ಅರುಣಕುಮಾರ, ಲಿಂಗಪ್ಪ ಪೂಜಾರ ಇತರರಿದ್ದರು.

ಅನ್ಯಾಯ ಸರಿಪಡಿಸಲು ಯತ್ನ: ಪಿಯು ಕಾಲೇಜುಗಳ ಪ್ರಾಚಾರ್ಯರಾಗಲು ಅರ್ಹತೆ ಹೊಂದಿರುವ ಕಲ್ಯಾಣ ಕರ್ನಾಟಕ ಪ್ರದೇಶದ ಉಪನ್ಯಾಸಕರಿಗೆ ನ್ಯಾಯ ಕೊಡಿಸುವ ನಿಟ್ಟಿನಲ್ಲಿ ಹೋರಾಡುತ್ತೇನೆ. ಈ ಬಗ್ಗೆ ಅಧಿಕಾರಿಗಳಿಗೆ ಗಮನಕ್ಕೆ ತಂದು, ಅನ್ಯಾಯ ಸರಿಪಡಿಸಲು ಪ್ರಯತ್ನಿಸುತ್ತೇನೆ ಎಂದು ವಿಪ ಸದಸ್ಯ ಎನ್. ರವಿಕುಮಾರ ಹೇಳಿದರು.