ಈ ಹಿಂದಿನ ಆಡಳಿತ ಮಂಡಳಿಗಳು ಯಾವ ರೀತಿ ಆಡಳಿತ ನಡೆಸಿದೆ ಎಂಬುದು ಜನರಿಗೆ ಗೊತ್ತಿದೆ. ಮತದಾರರು ಹೊಸ ಮುಖಗಳನ್ನು ಆಯ್ಕೆ ಮಾಡಿದರೆ ಕ್ರಿಯಾಶೀಲ ಶಾಸಕ ದರ್ಶನ್ ಪುಟ್ಟಣ್ಣಯ್ಯಅವರು ಹೊಸ ಚಿಂತನೆಯೊಂದಿಗೆ ಸಹಕಾರ ಸಂಘಗಳನ್ನು ಬೇರೆ ದಿಕ್ಕಿಗೆ ಕೊಂಡೊಯ್ಯಲಿದ್ದಾರೆ.

ಕನ್ನಡಪ್ರಭ ವಾರ್ತೆ ಪಾಂಡವಪುರ

ತಾಲೂಕು ಗೃಹ ನಿರ್ಮಾಣ ಸಹಕಾರ ಸಂಘದ ಚುನಾವಣೆಯಲ್ಲಿ ರೈತಸಂಘ ಮತ್ತು ಕಾಂಗ್ರೆಸ್ ಮೈತ್ರಿಕೂಟ ಬೆಂಬಲಿತ ಅಭ್ಯರ್ಥಿಗಳನ್ನು ಬೆಂಬಲಿಸುವಂತೆ ರೈತಸಂಘ ತಾಲೂಕು ಅಧ್ಯಕ್ಷ ವೈ.ಪಿ.ಮಂಜು ಮನವಿ ಮಾಡಿದರು.

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಹಕಾರ ಸಂಘಗಳ ಅಭಿವೃದ್ಧಿ ಮೂಲಕ ರೈತರಜೀವನ ಮಟ್ಟ ಸುಧಾರಣೆಗೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಶ್ರಮಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಜು.26ರಂದು ನಡೆಯುವ ಚುನಾವಣೆಯಲ್ಲಿ ಮೈತ್ರಿಕೂಟ ಅಭ್ಯರ್ಥಿಗಳನ್ನು ಬೆಂಬಲಿಸಬೇಕು ಎಂದು ಕೋರಿದರು.

ಸಹಕಾರ ಸಂಘಗಳು ಅಭಿವೃದ್ಧಿಗೊಂಡರೆ ರೈತರು ಆರ್ಥಿಕವಾಗಿ ಪ್ರಗತಿ ಸಾಧಿಸಬಹದು ಎಂಬ ಕಲ್ಪನೆಯಲ್ಲಿ ಶಾಸಕ ದರ್ಶನ್ ಪುಟ್ಟಣ್ಣಯ್ಯ ಹಲವು ಯೋಜನೆ ರೂಪಿಸಿಕೊಂಡು ಕೆಲಸ ಮಾಡುತ್ತಿದ್ದಾರೆ. ಇವರ ಪರಿಕಲ್ಪನೆ ಸಾಕಾರಗೊಳ್ಳ ಬೇಕಾದರೆ ಸಹಕಾರ ಸಂಘಗಳ ಆಡಳಿತ ಮಂಡಳಿ ಸಹಕಾರ ಅತ್ಯಗತ್ಯ ಎಂದರು.

ಗೃಹ ನಿರ್ಮಾಣ ಸಹಕಾರ ಸಂಘದ ಎಲ್ಲಾ 15 ನಿರ್ದೇಶಕ ಸ್ಥಾನಗಳಿಗೆ ರೈತಸಂಘ ಮತ್ತು ಕಾಂಗ್ರೆಸ್ ಬೆಂಬಲಿತರನ್ನು ಕಣಕ್ಕಿಳಿಸಲಾಗಿದೆ. ಸಂಘದ ಷೇರುದಾರ ಮತದಾರರು ಮೈತ್ರಿ ಬೆಂಬಲಿತರಿಗೆ ಮತ ನೀಡುವಂತೆ ಮನವಿ ಮಾಡಿದರು.

ಸರ್ವೋದಯ ಕರ್ನಾಟಕ ಪಕ್ಷದ ತಾಲೂಕು ಅಧ್ಯಕ್ಷ ಎಸ್.ದಯಾನಂದ್ ಮಾತನಾಡಿ, ಈ ಹಿಂದಿನ ಆಡಳಿತ ಮಂಡಳಿಗಳು ಯಾವ ರೀತಿ ಆಡಳಿತ ನಡೆಸಿದೆ ಎಂಬುದು ಜನರಿಗೆ ಗೊತ್ತಿದೆ. ಮತದಾರರು ಹೊಸ ಮುಖಗಳನ್ನು ಆಯ್ಕೆ ಮಾಡಿದರೆ ಕ್ರಿಯಾಶೀಲ ಶಾಸಕ ದರ್ಶನ್ ಪುಟ್ಟಣ್ಣಯ್ಯಅವರು ಹೊಸ ಚಿಂತನೆಯೊಂದಿಗೆ ಸಹಕಾರ ಸಂಘಗಳನ್ನು ಬೇರೆ ದಿಕ್ಕಿಗೆ ಕೊಂಡೊಯ್ಯಲಿದ್ದಾರೆ. ಮೈತ್ರಿಕೂಟ ಬೆಂಬಲಿತ ಅಭ್ಯರ್ಥಿಗಳು ಆಯ್ಕೆಯಾದರೆ ಶಾಸಕರ ಮಾರ್ಗದರ್ಶನದಲ್ಲಿ ಗೃಹ ನಿರ್ಮಾಣ ಮಂಡಳಿ ಬೆಳವಣಿಗೆಗೆ ಉತ್ತಮ ಕೆಲಸ ಮಾಡಲಾಗುವುದು ಎಂದರು.

ಸಾಲಗಾರರಲ್ಲದ ಮಹಿಳಾ ಮೀಸಲು ಕ್ಷೇತ್ರದಿಂದ ಕವಿತಾ, ಜಯಮ್ಮ, ಜಲಬೋರೇಗೌಡ, ಎಚ್.ಎನ್.ದಯಾನಂದ, ಡಿ.ಕೆ.ದೇವೇಗೌಡ, ಎಸ್.ದಯಾನಂದ, ಕೆ.ಮಹೇಶ್‌, ಮಹಾಂತೇಶ ಹಿಂದುಳಿದ ವರ್ಗದಿಂದ ಬಿ.ಟಿ.ಶಿವಣ್ಣ, ಪರಿಶಿಷ್ಟ ಜಾತಿಯಿಂದ ಸಿದ್ದಲಿಂಗಯ್ಯ ಹಾಗೂ ಸಾಲಗಾರರ ಕ್ಷೇತ್ರದಿಂದ ಮುರುಳೀಧರ, ರಾಜನಾಯಕ, ಎ.ವೆಂಕಟೇಶ್‌, ಎಚ್.ಪಿ.ಶಿವಕುಮಾರ ಮತ್ತು ಜಿ.ಬಿ.ಸುರೇಶ್ ಕಣದಲ್ಲಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಹೊನಗಾನಹಳ್ಳಿ ಕೃಷ್ಣೇಗೌಡ, ರೈತಸಂಘ, ಕಾಂಗ್ರೆಸ್ ಮುಖಂಡರಾದ ಬಿ.ಟಿ.ಶಿವಣ್ಣ, ಡಿ.ಕೆ.ದೇವೇಗೌಡ, ವಡ್ಡರಹಳ್ಳಿ ಮಹೇಶ್, ಹಾರೋಹಳ್ಳಿ ಧರ್ಮ, ವಿಷ್ಣು ಇತರರು ಇದ್ದರು.