ಮೋದಿ ಆಡಳಿತ ಕೊನೆಗಾಣಿಸಲು ಇಂಡಿಯಾ ಕೂಟಕ್ಕೆ ಬೆಂಬಲ: ಸಿಪಿಐ

| Published : Mar 29 2024, 12:54 AM IST

ಮೋದಿ ಆಡಳಿತ ಕೊನೆಗಾಣಿಸಲು ಇಂಡಿಯಾ ಕೂಟಕ್ಕೆ ಬೆಂಬಲ: ಸಿಪಿಐ
Share this Article
  • FB
  • TW
  • Linkdin
  • Email

ಸಾರಾಂಶ

ಬಿಜೆಪಿ ಮೂಲಭೂತ ವಿಷಯಗಳನ್ನು ಮರೆಮಾಚಿದ್ದು ದ್ವಿಪಕ್ಷೀಯ ಚುನಾವಣಾ ನಡೆಸುವಂತಹ ಸನ್ನಿವೇಶ ಸೃಷ್ಟಿಯಾಗಿದೆ ಎಂದು ಸಿಪಿಐ ರಾಷ್ಟ್ರೀಯ ಮಂಡಳಿ ಸದಸ್ಯ ಪಿ.ವಿ.ಲೋಕೇಶ್ ಅವರು ಹೇಳಿದರು.

ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು

ಪ್ರಧಾನಿ ನರೇಂದ್ರ ಮೋದಿ ಆಡಳಿತ ಕೊನೆಗಾಣಿಸಲು ಚುನಾವಣಾ ಬಾಂಡ್ ಕಾನೂನುಬದ್ಧ ಭ್ರಷ್ಟಾಚಾರವನ್ನು ಖಂಡಿಸಿ ಇಂಡಿಯಾ ಮೈತ್ರಿಕೂಟದ ಕಾಂಗ್ರೆಸ್ ಅಭ್ಯರ್ಥಿಗಳನ್ನು ಬೆಂಬಲಿಸಲು ನಿರ್ಧರಿಸಲಾಗಿದೆ ಎಂದು ಸಿಪಿಐ ರಾಷ್ಟ್ರೀಯ ಮಂಡಳಿ ಸದಸ್ಯ ಪಿ.ವಿ.ಲೋಕೇಶ್ ಅವರು ಹೇಳಿದರು.

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಜಾತಾಂತ್ರಿಕ ವ್ಯವಸ್ಥೆ ದುರ್ಬಳಕೆ ಆಗುತ್ತಿರುವುದು ಪ್ರಪಂಚದಾದ್ಯಂತ ಚರ್ಚೆ ನಡೆಯುತ್ತಿದ್ದು ಪ್ರಜಾಪ್ರಭುತ್ವದ ಅತಿ ದೊಡ್ಡ ದೇಶ ಭಾರತ ಮತ್ತು ಸಂವಿಧಾನವನ್ನು ರಕ್ಷಿಸಲು ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೆ. ಜಯಪ್ರಕಾಶ್ ಹೆಗ್ಡೆಯವರನ್ನು ಬೆಂಬಲಿಸಲು ಪಕ್ಷದ ವರಿಷ್ಠರ ತೀರ್ಮಾನದಂತೆ ನಿರ್ಧರಿಸಲಾಗಿದೆ ಎಂದರು.

ಈ ದೇಶ ಅಪಾಯದಲ್ಲಿರುವುದನ್ನು ಮನಗಂಡು ಹಲವಾರು ಪ್ರಗತಿಪರ ಸಂಘಟನೆಗಳು ಹಾಗೂ ವಿವಿಧ ಪಕ್ಷಗಳು ಸೇರಿ ಇಂಡಿಯಾ ಒಕ್ಕೂಟವನ್ನು ಸ್ಥಾಪನೆ ಮಾಡಿವೆ. ಬಿಜೆಪಿ ಮೂಲಭೂತ ವಿಷಯಗಳನ್ನು ಮರೆಮಾಚಿದ್ದು ದ್ವಿಪಕ್ಷೀಯ ಚುನಾವಣಾ ನಡೆಸುವಂತಹ ಸನ್ನಿವೇಶ ಸೃಷ್ಟಿಯಾಗಿದೆ ಎಂದು ಆರೋಪಿಸಿದರು.

ಬಿಜೆಪಿ ಮಿತ್ರ ಪಕ್ಷಗಳು ಪ್ರಜಾತಂತ್ರ ವ್ಯವಸ್ಥೆಯನ್ನು ಧಮನ ಮಾಡುತ್ತಿದ್ದು ರಾಷ್ಟ್ರಮಟ್ಟದಲ್ಲಿ ರಾಜಕೀಯ ಧೃವೀಕರಣ ಆಗಿದೆ. ಈ ನಿಟ್ಟಿನಲ್ಲಿ ಸರ್ವಾಧಿಕಾರಿ ಧೋರಣೆಯ ಕೋಮುವಾದಿ ಬಿಜೆಪಿ ಮಿತ್ರ ಪಕ್ಷಗಳನ್ನು ಸೋಲಿಸಲು ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಲು ನಿರ್ಧರಿಸಿದ್ದು ಗುಂಪುಗಾರಿಕೆ, ಪ್ರತಿಷ್ಠೆ, ಸ್ವಹಿತಾಸಕ್ತಿಯನ್ನು ಬದಿಗಿಟ್ಟು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳಿಗೆ ಆಶೀರ್ವದಿಸಬೇಕೆಂದು ಮನವಿ ಮಾಡಿದರು.

ರಾಜ್ಯ ಮಂಡಳಿ ಸದಸ್ಯ ಹೆಚ್.ಎಂ ರೇಣುಕಾರಾಧ್ಯ ಮಾತನಾಡಿ, 2024 ರ ಲೋಕಸಭಾ ಚುನಾವಣೆಯನ್ನು ಭಾರತ ಕಮ್ಯೂನಿಸ್ಟ್ ಪಕ್ಷವು ಬಹಳ ಗಂಭೀರವಾಗಿ ಪರಿಗಣಿಸಿದ್ದು ದೇಶದ ಸಮಗ್ರತೆ, ಜಾತ್ಯಾತೀತತೆ ವ್ಯವಸ್ಥೆ ಮತ್ತು ಸಂವಿಧಾನದ ರಕ್ಷಣೆ ಪ್ರಮುಖ ವಿಷಯಗಳಾಗಿವೆ ಎಂದರು.

ದೇಶದ ಜನರನ್ನು ಭಾವನಾತ್ಮಕವಾಗಿ ದಿಕ್ಕು ತಪ್ಪಿಸುತ್ತಾ ಕೇಂದ್ರದ ಬಿಜೆಪಿ ಸರ್ಕಾರ ತನ್ನ ಜನ ವಿರೋಧಿ ನೀತಿ ಆಡಳಿತವನ್ನು ಜನಪರ ಆಡಳಿತವೆಂದು ಬಿಂಬಿ ಸುತ್ತಿದೆ. ಗಡಿ ಭಾಗದಲ್ಲಿ ದೇಶದ ಸಮಗ್ರತೆಯನ್ನು ಚೈನಾ ದೇಶದೊಂದಿಗೆ ರಾಜಿಯಾಗಿದ್ದು, ಬಂಡವಾಳಗಾರರ ಪರವಾದ ನೀತಿಯಿಂದ ಕೋಟ್ಯಾಂತರ ಯುವಕರು ಉದ್ಯೋಗದಿಂದ ವಂಚಿತರಾಗಿದ್ದಾರೆ ಎಂದು ಟೀಕಿಸಿದರು.

ದೇಶದಾದ್ಯಂತ ಭ್ರಷ್ಟಾಚಾರ ಆರೋಪಿತ ರಾಜಕೀಯ ಮುಖಂಡರುಗಳನ್ನು ತಮ್ಮ ಸಂಸ್ಥೆಗಳ ಮುಖಾಂತರ ಎದುರಿಸಿ ತನ್ನ ಕಡೆ ಸೆಳೆಯುವುದು ಮತ್ತು ವಿರೋಧ ಪಕ್ಷಗಳ ನಾಯಕರುಗಳನ್ನು ಬೆದರಿಸುವುದು ಕೇಂದ್ರ ಸರ್ಕಾರದ ಸರ್ವಾಧಿಕಾರಿ ಹಾಗೂ ಪ್ರಜಾಪ್ರಭುತ್ವ ವಿರೋಧಿ ನೀತಿಯಾಗಿದೆ ಎಂದು ದೂರಿದರು.

ಪಕ್ಷವು ಸಹ ಇಂಡಿಯಾ ಮೈತ್ರಿಕೂಟದ ಭಾಗವಾಗಿದ್ದು, ಜಿಲ್ಲೆಯಲ್ಲಿ ಇಂಡಿಯಾ ಮೈತ್ರಿಕೂಟ ಬಲಪಡಿಸಲು ಮತ್ತು ಬಿಜೆಪಿ ಸೋಲಿಸುವ ರಾಜಕೀಯ ಪ್ರಕ್ರಿಯೆಯಲ್ಲಿ ಮುಂದಾಗಿದ್ದು ಅದರಂತೆ ಮತದಾರರು ಮತ್ತು ಪಕ್ಷದ ಕಾರ್ಯಕರ್ತರನ್ನು ಜಾಗೃತಿಗೊಳಿಸುವ ಉದ್ದೇಶದಿಂದ ಜಿಲ್ಲೆಯಾದ್ಯಂತ ಸುಮಾರು 100 ಸಭೆಗಳನ್ನು ನಡೆಸುವ ನಿರ್ದಿಷ್ಟ ತೀರ್ಮಾನವನ್ನು ಕೈಗೊಳ್ಳಲಾಗಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಸಿಪಿಐ ಜಿಲ್ಲಾ ಕಾರ್ಯದರ್ಶಿ ಎಸ್.ಎಲ್. ರಾಧಾ ಸುಂದರೇಶ್, ಸಹ ಕಾರ್ಯದರ್ಶಿಗಳಾದ ಜಿ. ರಘು, ರಮೇಶ್ ಕೆಳಗೂರು, ಜಿಲ್ಲಾ ಮಂಡಳಿ ಸದಸ್ಯ ಎಸ್. ವಿಜಯಕುಮಾರ್, ತಾಲೂಕು ಕಾರ್ಯದರ್ಶಿ ಕೆರೆಮಕ್ಕಿ ರಮೇಶ್ ಇದ್ದರು.ಬಾಂಡ್ ಭ್ರಷ್ಟಾಚಾರ: ಭ್ರಷ್ಟಾಚಾರ ವಿರೋಧಿ ಎಂದು ಹೇಳುವ ಮೋದಿ ನೇತೃತ್ವದ ಸರ್ಕಾರವು ದೊಡ್ಡ ಮಟ್ಟದಲ್ಲಿ ಭ್ರಷ್ಟಾಚಾರದಲ್ಲಿ ತೊಡಗಿರುವುದು ಚುನಾವಣಾ ಬಾಂಡುಗಳ ಮುಖಾಂತರ ಭ್ರಷ್ಟಾಚಾರ ಆರೋಪಿತ ಕಂಪನಿಗಳಿಂದ ಹಣ ಸಂಗ್ರಹ ಮಾಡಿರುವುದೇ ಪ್ರಮುಖ ಸಾಕ್ಷಿಯಾಗಿದ್ದು, ಇದರಿಂದಾಗಿ ಮೋದಿಯವರ ನೈಜ ಬಣ್ಣ ಬಯಲಾಗಿದೆ ಎಂದು ಪಿ.ವಿ.ಲೋಕೇಶ್‌ ಲೇವಡಿ ಮಾಡಿದರು.