- ಬಂದ್ ಗೆ ಕರೆ ಕೊಡುವುದು ಮೂರು-ನಾಲ್ಕು ಮಂದಿಗೆ ಫ್ಯಾಶನ್ ಆಗಿದೆ

- ವಾಟಾಳ್ ನಾಗರಾಜ್ ಅವರ ಸಂಘಟನೆ ಜೀವಂತವಾಗಿ ಎಲ್ಲಿದೆ?

- ಹೋರಾಟಗಳಲ್ಲಿ ಕೊನೆಯ ಅಸ್ತ್ರವಾಗಬೇಕಿದ್ದ ಬಂದ್‌ಗೆ ಮೌಲ್ಯ ಇಲ್ಲದಂತಾಗಿದೆ

- ದುಡಿಮೆಯೇ ಕಷ್ಟವಾಗಿರುವಾಗ ಬಲವಂತದ ಬಂದ್ ಬೇಡ

ಕನ್ನಡಪ್ರಭ ವಾರ್ತೆ ರಾಮನಗರ


ಕಳೆದ ಎರಡೂವರೆ ದಶಕಗಳಲ್ಲಿ ಬಂದ್ ಕರೆ ನೀಡಿದ ಯಾವುದೇ ಹೋರಾಟಗಳು ಸಾತ್ವಿಕ ಅಂತ್ಯ ಕಂಡ ಉದಾಹರಣೆ ಇಲ್ಲ. ಆಗಸ್ಟ್ 13ರ ಬಂದ್ ಕೂಡ ಅದೇ ರೀತಿ ಆಗಲಿದೆ. ಕನ್ನಡಪರ ಹೋರಾಟಗಾರರ ಹೆಸರಿನಲ್ಲಿ ಮೂರು-ನಾಲ್ಕು ಮಂದಿ ಸ್ವ ಪ್ರತಿಷ್ಠೆಗಾಗಿ ಕರ್ನಾಟಕ ಬಂದ್ ಗೆ ಕರೆ ಕೊಡುವುದನ್ನು ಫ್ಯಾಶನ್ ಮಾಡಿಕೊಂಡಿದ್ದಾರೆ ಎಂದು ಕನ್ನಡ ಒಕ್ಕೂಟದ ಅಧ್ಯಕ್ಷ ವಾಟಾಳ್ ನಾಗರಾಜ್ ವಿರುದ್ಧ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣದ ರಾಜ್ಯಾಧ್ಯಕ್ಷ ಪಿ.ಕೃಷ್ಣೇಗೌಡ ವಾಗ್ದಾಳಿ ನಡೆಸಿದರು.

ನಗರದ ಖಾಸಗಿ ಹೋಟೆಲ್‌ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನಿಮ್ಮ ಬಗ್ಗೆ ಗೌರವ ಇದೆ. ನಿಮ್ಮ ಹಿರಿತನಕ್ಕೆ ತಕ್ಕುದಾಗಿ ಎಲ್ಲರನ್ನೂ ವಿಶ್ವಾಸಕ್ಕೆ ಪಡೆದು ಸಲಹೆ ನೀಡಿ. ಒಟ್ಟಾಗಿ ಹೋರಾಟ ಮಾಡಿದರೆ ಯಶಸ್ಸು ಕಾಣಬಹುದೇ ಹೊರತು ಮೂರು ನಾಲ್ಕು ಮಂದಿ ಕರೆ ನೀಡುವ ಬಂದ್ ನಿಂದಲ್ಲ

ಎಂದು ಟೀಕಿಸಿದರು.

ರಾಜ್ಯದ ಅನೇಕ ಜಿಲ್ಲೆಗಳಲ್ಲಿ ಬರ ಆವರಿಸಿದೆ. ಸರ್ಕಾರಿ ಶಾಲೆಗಳು ಮುಚ್ಚುತ್ತಿವೆ. ಬಿಡದಿ ಟೌನ್ ಶಿಪ್ ಯೋಜನೆ ವಿರುದ್ಧ ರೈತರ ಹೋರಾಟ ಸೇರಿದಂತೆ ಸಾಕಷ್ಟು ವಿಚಾರಗಳಿವೆ. ಈ ಬಗ್ಗೆ ಸರ್ಕಾರದ ಕಿವಿ ಹಿಂಡುವ ಕೆಲಸ ಕನ್ನಡ ಸಂಘಟನೆಗಳು ಮಾಡಬೇಕಿದೆ. ಅದನ್ನು ಬಿಟ್ಟು ಮೂರು ನಾಲ್ಕು ಮಂದಿ ಕರೆ ನೀಡಿರುವ ಬಂದ್ ಅವೈಜ್ಞಾನಿಕವಾಗಿದೆ. ಇದಕ್ಕೆ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣ ಬೆಂಬಲ ನೀಡುವುದಿಲ್ಲ ಎಂದರು.

ಹೋರಾಟಗಳಲ್ಲಿ ಬಂದ್ ಯಾವಾಗಲು ಕೊನೆ ಅಸ್ತ್ರವಾಗಿ ಬಳಸಬೇಕು. ಬಂದ್ ಅನ್ನುವುದು ಸರ್ಕಾರ ಮತ್ತು ಆಡಳಿತಕ್ಕೆ ಚುರುಕು ಮುಟ್ಟಿಸುವಂತಿರಬೇಕು. ವಾಟಾಳ್ ನಾಗರಾಜ್ ಶಾಸಕರಾಗಿದ್ದವರು. ಸರ್ಕಾರದ ಮಟ್ಟದಲ್ಲಿ ಮುಖ್ಯಮಂತ್ರಿ ಮತ್ತು ಸಚಿವರನ್ನು ಗಟ್ಟಿಯಾಗಿ ಪ್ರಶ್ನಿಸುವ ಹಿರಿತನ ಇದೆ. ಅದನ್ನು ಬಿಟ್ಟು ಮಾತೆತಿದ್ದರೆ ಬಂದ್ ಕರೆ ಕೊಡುವುದು ಸರಿಯಲ್ಲ ಎಂದು ಪ್ರತಿಪಾದಿಸಿದರು.

ವಾಟಾಳ್ ನಾಗರಾಜ್ ಅವರ ಸಂಘಟನೆ ಸತ್ತು ಹೋಗಿದೆ. ಜೀವಂತವಾಗಿ ಎಲ್ಲಿದೆ ಎಂದು ಪ್ರಶ್ನೆ ಮಾಡಿದ ಅವರು, ಹೋರಾಟಗಳು ಯಶಸ್ಸು ಕಾಣಬೇಕಾದರೆ ಸಂಬಂಧಪಟ್ಟ ಶಾಸಕರು, ಸಚಿವರು ಹಾಗೂ ಸರ್ಕಾರದ ಮುಂದೆ ಬೇಡಿಕೆಗಳನ್ನಿಟ್ಟು ಎಚ್ಚರಿಸುವ ಕೆಲಸ ಮಾಡಬೇಕು. ಅದನ್ನು ಬಿಟ್ಟು ಬಂದ್ ಗೆ ಕರೆ ನೀಡಿ ಟೌನ್ ಹಾಲ್ ನಿಂದ ಫ್ರೀಡಂ ಪಾರ್ಕ್ ವರೆಗೆ ಜಂಬೂ ಸವಾರಿ ಮಾಡಿದರೆ ಏನು ಪ್ರಯೋಜನ ಆಗುವುದಿಲ್ಲ ಎಂದು ಟೀಕಿಸಿದರು.

ಸುದ್ದಿಗೋಷ್ಠಿಯಲ್ಲಿ ಸಂಘಟನೆ ರಾಜ್ಯ ಉಸ್ತುವಾರಿ ಅಧ್ಯಕ್ಷ ಶಿವುಗೌಡ, ಜಿಲ್ಲಾಧ್ಯಕ್ಷ ಕಿರಣ್ ಗೌಡ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅದ್ಧೂರಿ ಲಿಂಗೇಶ್, ಯುವ ಘಟಕ ಜಿಲ್ಲಾಧ್ಯಕ್ಷ ಸ್ವಾಮಿ, ಪ್ರಧಾನ ಕಾರ್ಯದರ್ಶಿ ಲಕ್ಷ್ಮೀಶ್, ಬೆಂಗಳೂರು ನಗರ ಪ್ರಚಾರ ಸಮಿತಿ ಅಧ್ಯಕ್ಷ ಪ್ರಭಾಕರ್ ಇದ್ದರು.

11ಕೆಆರ್ ಎಂಎನ್1

------------------

ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣದ ರಾಜ್ಯಾಧ್ಯಕ್ಷ ಪಿ.ಕೃಷ್ಣೇಗೌಡ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.