ಪೋಷಕ ನಟ ದಿನೇಶ್ ಮಂಗಳೂರು ನಿಧನ

| Published : Aug 26 2025, 02:00 AM IST

ಸಾರಾಂಶ

ಕನ್ನಡ ಚಿತ್ರರಂಗದ ಹಿಟ್ ಸಿನಿಮಾ ಕೆಜಿಎಫ್‌ನಲ್ಲಿ ಬಾಂಬೆ ಡಾನ್ ಪಾತ್ರದಲ್ಲಿ ನಟಿಸಿದ್ದ ದಿನೇಶ್, ಆ ದಿನಗಳು, ಕಿಚ್ಚ, ಕಿರಿಕ್ ಪಾರ್ಟಿ, ರಿಕ್ಕಿ, ಹರಿಕಥೆ ಅಲ್ಲ ಗಿರಿಕಥೆ, ಉಳಿದವರು ಕಂಡಂತೆ ಇತ್ಯಾದಿ ಸಿನಿಮಾಗಳಲ್ಲಿ ಗಮನಾರ್ಹ ಪಾತ್ರಗಳನ್ನು ನಿರ್ವಹಿಸಿದ್ದರು. ಕಲಾನಿರ್ದೇಶಕರಾಗಿ ಸಿನಿಮಾರಂಗ ಪ್ರವೇಶ ಮಾಡಿದ ದಿನೇಶ್, ಓಂಕಾರ, ರಣವಿಕ್ರಮ, ಅಂಬಾರಿ, ಸವಾರಿ, ಸ್ಲಂ ಬಾಲಾ, ದುರ್ಗಿ ಮುಂತಾದ ಆ್ಯಕ್ಷನ್ ಸಿನಿಮಾಗಳಿಗೆ ಕಲಾ ನಿರ್ದೇಶಕರಾಗಿದ್ದರು.

ಕನ್ನಡಪ್ರಭ ವಾರ್ತೆ ಕುಂದಾಪುರಬಹುಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದ ಕನ್ನಡ ಚಿತ್ರ ರಂಗದ ಹಿರಿಯ ಪೋಷಕ ನಟ ದಿನೇಶ್ ಮಂಗಳೂರು (55) ಸೋಮವಾರ ಮುಂಜಾನೆ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.

ಅವರು ಕಾಂತಾರ ಸಿನಿಮಾ ಶೂಟಿಂಗ್ ವೇಳೆ ಪಾರ್ಶ್ವವಾಯು ಪೀಡಿತರಾಗಿ, ವಿಶ್ರಾಂತಿಗಾಗಿ ಕುಂದಾಪುರದಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು.ಕನ್ನಡ ಚಿತ್ರರಂಗದ ಹಿಟ್ ಸಿನಿಮಾ ಕೆಜಿಎಫ್‌ನಲ್ಲಿ ಬಾಂಬೆ ಡಾನ್ ಪಾತ್ರದಲ್ಲಿ ನಟಿಸಿದ್ದ ದಿನೇಶ್, ಆ ದಿನಗಳು, ಕಿಚ್ಚ, ಕಿರಿಕ್ ಪಾರ್ಟಿ, ರಿಕ್ಕಿ, ಹರಿಕಥೆ ಅಲ್ಲ ಗಿರಿಕಥೆ, ಉಳಿದವರು ಕಂಡಂತೆ ಇತ್ಯಾದಿ ಸಿನಿಮಾಗಳಲ್ಲಿ ಗಮನಾರ್ಹ ಪಾತ್ರಗಳನ್ನು ನಿರ್ವಹಿಸಿದ್ದರು. ಕಲಾನಿರ್ದೇಶಕರಾಗಿ ಸಿನಿಮಾರಂಗ ಪ್ರವೇಶ ಮಾಡಿದ ದಿನೇಶ್, ಓಂಕಾರ, ರಣವಿಕ್ರಮ, ಅಂಬಾರಿ, ಸವಾರಿ, ಸ್ಲಂ ಬಾಲಾ, ದುರ್ಗಿ ಮುಂತಾದ ಆ್ಯಕ್ಷನ್ ಸಿನಿಮಾಗಳಿಗೆ ಕಲಾ ನಿರ್ದೇಶಕರಾಗಿದ್ದರು.ವರ್ಷದ ಹಿಂದೆ ಪಾರ್ಶ್ವವಾಯು ಪೀಡಿತರಾಗಿ ಬೆಂಗಳೂರಿನಲ್ಲಿ ಚಿಕಿತ್ಸೆ ಪಡೆದು, ಕುಂದಾಪುರಕ್ಕೆ ಬಂದು ವಾಸವಾಗಿದ್ದರು. ರಕ್ತದೊತ್ತಡ, ಮಧುಮೇಹ, ಕಿಡ್ನಿ ಸಮಸ್ಯೆಗಳಿಂದಲೂ ಅವರು ಬಳಲುತ್ತಿದ್ದರು. ಹಿಂದೊಮ್ಮೆ ಅವರು ಕಾಲಿಗೆ ಗಾಯವಾಗಿ ಗ್ಯಾಂಗ್ರೀನ್ ಆಗಿ ಕಾಲಿನ ಬೆರಳ‍ನ್ನು ಕತ್ತರಿಸಲಾಗಿತ್ತು. ಕೆಲ ಸಮಯದ ಹಿಂದೆ ಅವರಿಗೆ ಬ್ರೈನ್ ಸ್ಟ್ರೋಕ್ ಕೂಡ ಆಗಿ ಚಿಕಿತ್ಸೆ ಪಡೆದಿದ್ದರು. ವಾರದ ಹಿಂದೆ ಅವರು ಉಸಿರಾಟದ ಒಳಗಾಗಿ, ಇಲ್ಲಿನ ಕೋಟೇಶ್ವರದ ಸರ್ಜನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಹು ಅಂಗಾಂಗ ವೈಫಲ್ಯವಾಗಿ ಸೋಮವಾರ ಮುಂಜಾನೆ 3.30ಕ್ಕೆ ಅವರು ಕೊನೆಯುಸಿರೆಳೆದಿದ್ದಾರೆ.ಅವರ ಪಾರ್ಥಿವ ಶರೀರವನ್ನು ಬೆಂಗಳೂರಿಗೆ ಕೊಂಡೊಯ್ಯಲಾಗಿದ್ದು, ಮಂಗಳವಾರ ಬೆಳಗ್ಗೆ ಸುಮನಹಳ್ಳಿ ಚಿತಾಗಾರದಲ್ಲಿ ಅಂತಿಮಸಂಸ್ಕಾರಗಳನ್ನು ನಡೆಸಲಾಗುತ್ತದೆ.

ಮೃತರು ಪತ್ನಿ ಹಾಗೂ ಇಬ್ಬರು ಪುತ್ರರನ್ನು ಅಗಲಿದ್ದಾರೆ.