ಕನ್ನಡಪ್ರಭ ವಾರ್ತೆ ಪಾವಗಡ

ತುಮಕೂರು ಹಾಲು ಒಕ್ಕೂಟದ ಚುನಾವಣಾ ಮತ ಎಣಿಕೆ ವಿಷಯದಲ್ಲಿ ರಾಜ್ಯ ಹೈಕೋರ್ಟ್ ಚೆನ್ನಮಲ್ಲಯ್ಯ ಅವರಿಗೆ ನೀಡಿದ ಆದೇಶವನ್ನು ಸುಪ್ರೀಂ ಕೋರ್ಟ್ ತಡೆಹಿಡಿದಿದೆ. ಈ ಸಂಬಂಧ ನ್ಯಾಯಾಲಯದ ತೀರ್ಪು ಏ.6ಕ್ಕೆ ಹೊರಬೀಳಲಿದ್ದು ಅಲ್ಲಿಯ ವರೆವಿಗೆ ಯಥಾ ಸ್ಥಿತಿ ಕಾಪಾಡುವ ಮೂಲಕ ಹಾಲಿ ತುಮುಲ್ ನಿರ್ದೇಶಕರಾದ ಚಂದ್ರಶೇಖರ್ ರೆಡ್ಡಿ ಅವರನ್ನೇ ಮುಂದುವರೆಸುವಂತೆ ಬುಧವಾರ ಸುಪ್ರೀಂ ಕೊರ್ಟ್ ನಿಂದ ಆದೇಶ ಜಾರಿಯಾಗಿದೆ.

ಕಳೆದ ವರ್ಷ ನಡೆದ ತುಮುಲ್ ಚುನಾವಣೆಯ ಫಲಿತಾಂಶ ಪ್ರಶ್ನಿಸಿ ಪರಾಜಿತ ಅಭ್ಯ ರ್ಥಿ ಚನ್ನಮಲ್ಕಯ್ಯ ಅವರು, ಬೆಂಗಳೂರು ಹೈಕೋರ್ಟ್ ಮೊರೆ ಹೋಗಿದ್ದರು. ಈ ಸಂಬಂಧ ಬುಧವಾರ ತೀರ್ಪು ಪ್ರಕಟವಾಗಿ ನಿರ್ದೇಶಕರಾಗಿ ಅಧಿಕಾರವಹಿಸಿಕೊಳ್ಳಲು ಚನ್ನಮಲ್ಕಯ್ಯ ಅವರ ಪರ ಆದೇಶ ಜಾರಿಪಡಿಸಿತ್ತು. ಇದನ್ನು ಪ್ರಶ್ನಿಸಿ ಹಾಲಿ ತುಮುಲ್ ನಿರ್ದೇಶಕ ಚಂದ್ರಶೇಖರರೆಡ್ಡಿ ಅವರು ಅಗತ್ಯ ದಾಖಲೆ ಸಮೇತ ಸುಪ್ರೀಂ ಕೋರ್ಟ್ ಮೊರೆ ಹೋಗಿ ತಡೆಯಾಜ್ಞೆ ತಂದಿದ್ದು ಹಾಲಿ ಸಿ.ಎಸ್‌ ರೆಡ್ಡಿ ಅವರೆ ತುಮುಲ್ ನಿರ್ದೇಶಕರಾಗಿ ಮುಂದುವರಿಸುವಂತೆ ಸುಪ್ರೀಂ ಕೋರ್ಟ್ ಆದೇಶ ಜಾರಿಪಡಿಸಿದೆ. ಇದರ ಬೆನ್ನಲ್ಲೇ ತಾಲೂಕು ಕಾಂಗ್ರೆಸ್ ಕಾರ್ಯಕರ್ತರು ಪಟಾಕಿ ಸಿಡಿಸಿ ವಿಜಯೋತ್ಸವ ಆಚರಿಸಿದರು.ಈ ಕುರಿತು‌ ತಾಲೂಕು ಕಾಂಗ್ರೆಸ್ ಮುಖಂಡ ವಿ.ಎಚ್.ಪಾಳ್ಯ ಹರೀಶ್ ಪಾಪಣ್ಣ, ದಾಖಲೆ ಸಮೇತ ಮಾತನಾಡಿ, ಮತ ಎಣಿಕೆ ಆದೇಶದ ವಿರುದ್ಧ ಸುಪ್ರೀಂ ಕೋರ್ಟ್ ನಿಂದ ತಡೆಯಾಜ್ಞೆ ಆದೇಶ ಜಾರಿಯಾಗಿದೆ‌. ಈ ಸಂಬಂಧ ನ್ಯಾಯಾಲಯದ ದಾಖಲಾತಿಗಳಿವೆ ಎಂದರು. ನಿರ್ದೇಶಕರು ಸರ್ವೋಚ್ಚ ನ್ಯಾಯಾಲಯದ ಮೊರೆ ಹೋಗಿ ಚನ್ನಮಲ್ಲಯ್ಯ ನವರಿಗೆ ನೀಡಿದ ಆದೇಶಕ್ಕೆ ತಡೆ ನೀಡಿಲಾಗಿದೆ. ಏಪ್ರಿಲ್ 6 ನೆ ತಾರೀಖು ನ್ಯಾಯಾಲಯದ ತೀರ್ಪು ಬರುತ್ತೆ ಅಲ್ಲಿಯವರೆಗೂ ಚಂದ್ರಶೇಖರ್ ರೆಡ್ಡಿ ಅವರೇ ನಿರ್ದೇಶಕರಾಗಿ ಮುಂದುವರೆಯಲಿದ್ದು ಅದಾದ ಬಳಿಕ ಮುಂದಿನ ನಾಲ್ಕು ವರ್ಷ ಸಿ.ಎಸ್. ರೆಡ್ಡಿಯವರೇ ನಿರ್ದೇಶಕರಾಗಿ ಮುಂದುವರಿಯುವ ಮೂಲಕ ಸೇವೆ ಸಲ್ಲಿಸಲಿರುವ ಖಚಿತ ವಿಶ್ವಾಸ ವ್ಯಕ್ತಪಡಿಸಿದರು.