ರಾಜ್ಯ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ನ್ಯಾಯ ನೀಡಿದೆ: ಜೆಪಿ ಹೆಗ್ಡೆ

| Published : Apr 24 2024, 02:15 AM IST

ರಾಜ್ಯ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ನ್ಯಾಯ ನೀಡಿದೆ: ಜೆಪಿ ಹೆಗ್ಡೆ
Share this Article
  • FB
  • TW
  • Linkdin
  • Email

ಸಾರಾಂಶ

ಜನರ ಪ್ರತಿನಿಧಿಯಾಗಿ ಆರಿಸಲ್ಪಟ್ಟವರಿಗೆ ಜನರ ಕೆಲಸ ಮಾಡುವ ರೀತಿ ಗೊತ್ತಿರಬೇಕು. ಅವರಿಗೆ ಜನರು ಬೆಂಗಳೂರಿನಲ್ಲಿ, ದೆಹಲಿಯಲ್ಲಿ ಕುಳಿತುಕೊಳ್ಳಲು ಮತ ಕೊಟ್ಟಿರುವುದಲ್ಲ. ಜನರ ಜೊತೆ ಬೆರೆತು ಕೆಲಸ ಮಾಡಬೇಕು ಎಂದು ಜೆಪಿ ಹೆಗ್ಡೆ ಟಾಂಗ್ ನೀಡಿದರು.

ಕನ್ನಡಪ್ರಭ ವಾರ್ತೆ ಕಾಪು

ರಾಜ್ಯಕ್ಕೆ ಕೇಂದ್ರ ಸರ್ಕಾರ ನೀಡದೇ ಇದ್ದ ಬರ ಪರಿಹಾರಕ್ಕೆ ಸುಪ್ರೀಂಕೋರ್ಟ್ ಅಸ್ತು ಹೇಳುವ ಮೂಲಕ ನ್ಯಾಯ ನೀಡಿದೆ. ಬರ ಪರಿಹಾರ ಸಿಗದಿದ್ದಾಗ ರಾಜ್ಯ ಸರ್ಕಾರ ದೆಹಲಿಯಲ್ಲಿ ಪ್ರತಿಭಟನೆ ಮಾಡಿತ್ತು. ರಾಜ್ಯ ಸರ್ಕಾರದ ಪರ ನ್ಯಾಯ ಇದ್ದ ಕಾರಣ ಈ ತೀರ್ಪು ಬಂದಿದೆ ಎಂದು ಉಡುಪಿ- ಚಿಕ್ಕಮಗಳೂರು ಲೋಕಸಭಾ ಕಾಂಗ್ರೆಸ್ ಅಭ್ಯರ್ಥಿ ಕೆ.ಜಯಪ್ರಕಾಶ್ ಹೆಗ್ಡೆ ಹೇಳಿದ್ದಾರೆ.ಅವರು ಮಂಗಳವಾರ, ಕಾಪು ಪೇಟೆಯಲ್ಲಿ ನಡೆದ ಬಹಿರಂಗ ಮತ ಪ್ರಚಾರ ಸಭೆಯಲ್ಲಿ ಮಾತನಾಡಿದರು.

ಜನರ ಪ್ರತಿನಿಧಿಯಾಗಿ ಆರಿಸಲ್ಪಟ್ಟವರಿಗೆ ಜನರ ಕೆಲಸ ಮಾಡುವ ರೀತಿ ಗೊತ್ತಿರಬೇಕು. ಅವರಿಗೆ ಜನರು ಬೆಂಗಳೂರಿನಲ್ಲಿ, ದೆಹಲಿಯಲ್ಲಿ ಕುಳಿತುಕೊಳ್ಳಲು ಮತ ಕೊಟ್ಟಿರುವುದಲ್ಲ. ಜನರ ಜೊತೆ ಬೆರೆತು ಕೆಲಸ ಮಾಡಬೇಕು ಎಂದವರು ಟಾಂಗ್ ನೀಡಿದರು.

* ಹಿಂದು ನಾಯಕರ ಪಾರ್ಟ್ನರ್ ಯಾರು?

ಇದು ದೇಶಪ್ರೇಮಿಗಳ ನಡುವಿನ ಚುನಾವಣೆ ಅನ್ನುತ್ತಾರೆ, ಹಾಗಿದ್ದರೆ ಸಮಾಜದಲ್ಲಿ ಒಳ್ಳೆಯ ವಾತಾವರಣ ನಿರ್ಮಿಸಿದವರು ದೇಶದ್ರೋಹಿಗಳಾ? ಹಿಂದುತ್ವದ ಬಗ್ಗೆ ಮಾತನಾಡುವ ಇಲ್ಲಿನ ನಾಯಕರ ವ್ಯವಹಾರದ ಪಾರ್ಟ್ನರ್ಸ್ ಯಾರು? ದೇಶಭಕ್ತಿಯ ವಿಚಾರದಲ್ಲಿ ನಾನು ಚರ್ಚೆಗೆ ತಯಾರಿದ್ದೇನೆ ಎಂದು ಸವಾಲು ಹಾಕಿದರು.

ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ವಿನಯಕುಮಾರ್ ಸೊರಕೆ, ಪಕ್ಷದ ಮುಖಂಡರಾದ ಸುಧೀರ್ ಕುಮಾರ್ ಮರೋಳಿ, ತೇಜಸ್ವಿನಿ ಗೌಡ, ನವೀನ್ ಚಂದ್ರ ಶೆಟ್ಟಿ, ಗೀತಾ ವಾಗ್ಳೆ, ಎಂ.ಎ.ಗಫೂರ್ ಮೊದಲಾದವರು ಉಪಸ್ಥಿತರಿದ್ದರು.

ಸಾರ್ವಜನಿಕ ಸಭೆಯ ಆರಂಭಕ್ಕೂ ಮುನ್ನ ವಿನಯಕುಮಾರ್ ಸೊರಕೆ ನೇತೃತ್ವದಲ್ಲಿ ಪಡುಬಿದ್ರೆಯಿಂದ ಕಾಪು ಪೇಟೆಯವರೆಗೆ ಬೃಹತ್ ವಾಹನ ಜಾಥಾವನ್ನು ನಡೆಸಲಾಯಿತು‌. ಆಗ ಕೋಟ ಜಾತಿ ಸಮೀಕರಣ ಎಲ್ಲಿ ಹೋಗಿತ್ತು?

ಬಿಜೆಪಿ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ ಅವರು ಈಗ ಜಾತಿ ಸಮೀಕರಣದ ಬಗ್ಗೆ ಮಾತನಾಡುತ್ತಿದ್ದಾರೆ. ಗಣರಾಜ್ಯೋತ್ಸವ ಪರೇಡಿನಲ್ಲಿ ನಾರಾಯಣಗುರುಗಳ ಟ್ಯಾಬ್ಲೋ ರದ್ದಾದಾಗ ಅವರ ಜಾತಿ ಸಮೀಕರಣ ಎಲ್ಲಿಗೆ ಹೋಗಿತ್ತು? ಬಿಜೆಪಿ ಸರ್ಕಾರ ಪಠ್ಯ ಪುಸ್ತಕದಿಂದ ನಾರಾಯಣಗುರುಗಳ ಪಾಠವನ್ನೇ ಕಿತ್ತು ಹಾಕಿದಾಗ ಅವರು ಮಾತನಾಡಿಲ್ಲ ಎಂದು ವಿನಯ ಕುಮಾರ್ ಸೊರಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.ಬಿಜೆಪಿ ನಾಯಕರು ಏನು ಉತ್ತರ ಕೊಡುತ್ತೀರಿ?

ಗ್ಯಾರೆಂಟಿ ಕೊಟ್ಟರೆ ಹೆಣ್ಣು ಮಕ್ಕಳು ದಾರಿತಪ್ತಾರೆ ಎನ್ನುವ ಕುಮಾರಣ್ಣ, ನೀವು ಅಧಿಕಾರದಲ್ಲಿದ್ದಾಗ ದಾರಿತಪ್ಪಿದ್ದು ಯಾರು ಅಂತ ಎಲ್ಲರಿಗೂ ಗೊತ್ತಿದೆ ಎಂದ ಸುಧೀರ್ ಕುಮಾರ್ ಮರೋಳಿ, ಈಗ ಹೆಣ್ಣು ಮಕ್ಕಳು ಹಾದಿ ತಪ್ಪಿಲ್ಲ, ತಮ್ಮ ಕುಟುಂಬ ಕಟ್ಟಿಕೊಂಡಿದ್ದಾರೆ ಎಂದರು.