ಸೂರಜ್‌ ರೇವಣ್ಣ ಸೆರೆ, ಸಿಐಡಿ ತನಿಖೆ

| Published : Jun 24 2024, 01:33 AM IST / Updated: Jun 24 2024, 04:28 AM IST

ಸಾರಾಂಶ

ಹಾಸನ ಜಿಲ್ಲೆ ಅರಕಲಗೂಡು ತಾಲೂಕಿನ ಜೆಡಿಎಸ್‌ ಕಾರ್ಯಕರ್ತನ ಮೇಲೆ ಅನೈಸರ್ಗಿಕ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪದಡಿ ಮಾಜಿ ಪ್ರಧಾನಿ  ಡಾ.ಸೂರಜ್ ರೇವಣ್ಣ ಅವರನ್ನು ಹೊಳೆನರಸೀಪುರ ಠಾಣೆ ಪೊಲೀಸರು ಭಾನುವಾರ ಬಂಧಿಸಿದ್ದಾರೆ.

ಹಾಸನ : ಅರಕಲಗೂಡು ತಾಲೂಕಿನ ಜೆಡಿಎಸ್‌ ಕಾರ್ಯಕರ್ತನ ಮೇಲೆ ಅನೈಸರ್ಗಿಕ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪದಡಿ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರ ಮೊಮ್ಮಗ, ಮಾಜಿ ಸಚಿವ ಎಚ್‌.ಡಿ.ರೇವಣ್ಣ ಅವರ ಹಿರಿಯ ಪುತ್ರನೂ ಆಗಿರುವ ವಿಧಾನಪರಿಷತ್ತಿನ ಜೆಡಿಎಸ್‌ ಸದಸ್ಯ ಡಾ.ಸೂರಜ್ ರೇವಣ್ಣ ಅವರನ್ನು ಹೊಳೆನರಸೀಪುರ ಠಾಣೆ ಪೊಲೀಸರು ಭಾನುವಾರ ಬಂಧಿಸಿದ್ದಾರೆ.

ಇದರ ಬೆನ್ನಲ್ಲೇ ಪ್ರಕರಣದ ತನಿಖೆಯನ್ನು ಸಿಐಡಿಗೆ ಸರ್ಕಾರ ವಹಿಸಿದ್ದು, ಸೋಮವಾರ ಸಿಐಡಿ ತಂಡ ಅಧಿಕೃತವಾಗಿ ತನಿಖೆ ಶುರು ಮಾಡಲಿದೆ. ಸೂರಜ್ ಅವರನ್ನು ಸಿಐಡಿ ವಶಕ್ಕೆ ಪಡೆದು ವಿಚಾರಣೆ ನಡೆಸಲಿದೆ.

ಅನೈಸರ್ಗಿಕ ಲೈಂಗಿಕ ದೌರ್ಜನ್ಯ ಪ್ರಕರಣ ಸಂಬಂಧ ಹಾಸನದಲ್ಲಿ ಶನಿ‍ವಾರ ಸೂರಜ್‌ ಅವರನ್ನು ವಶಕ್ಕೆ ಪಡೆದಿದ್ದ ಪೊಲೀಸರು, ತಡರಾತ್ರಿ ಅವರನ್ನು ಬಂಧನಕ್ಕೊಳಪಡಿಸಿದರು. ಬೆಂಗಳೂರಿಗೆ ಭಾನುವಾರ ಸೂರಜ್ ಅ‍ವರನ್ನು ಕರೆತಂದ ಹಾಸನ ಪೊಲೀಸರು, ಬೌರಿಂಗ್ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆಗೊಳಪಡಿಸಿ ನಂತರ ಕೋರಮಂಗಲದಲ್ಲಿರುವ ನ್ಯಾಯಾಧೀಶರ ಮನೆಯಲ್ಲಿ ಜಡ್ಜ್‌ ಮುಂದೆ ಹಾಜರುಪಡಿಸಿದರು. ಆಗ ನ್ಯಾಯಾಧೀಶರು ಸೂರಜ್‌ ಅವರನ್ನು 14 ದಿನ ನ್ಯಾಯಾಂಗ ಬಂಧನಕ್ಕೊಪ್ಪಿಸಿದರು. ಕೂಡಲೇ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಕರೆದೊಯ್ದು ಸೂರಜ್‌ ಅ‍ವರನ್ನು ಹಾಸನ ಪೊಲೀಸರು ಬಿಟ್ಟಿದ್ದಾರೆ. ಈ ಪ್ರಕರಣದ ತನಿಖೆ ಆರಂಭಿಸಲಿರುವ ಸಿಐಡಿ, ನ್ಯಾಯಾಲಯದಲ್ಲಿ ಬಾಡಿ ವಾರಂಟ್ ಪಡೆದು ಸೂರಜ್ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

8 ತಾಸು ಪೊಲೀಸ್‌ ಗ್ರಿಲ್‌:

ಸೂರಜ್ ವಿರುದ್ಧ ಸಲಿಂಗ ಕಾಮದ ಆರೋಪ ಕೇಳಿ ಬಂದ ಮರುದಿನವೇ ಹೊಳೆನರಸೀಪುರ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಠಾಣೆಗೆ ತೆರಳಿ ದೂರುದಾರ ದೂರು ಕೊಟ್ಟಿದ್ದ. ಪ್ರಕರಣ ದಾಖಲಾದ ಬೆನ್ನಲ್ಲೇ ಬೆಂಗಳೂರಿಗೆ ಹೊರಟಿದ್ದ ಸೂರಜ್ ಅವರನ್ನು ಹಾಸನದಲ್ಲಿ ಶನಿವಾರ ರಾತ್ರಿ ಪೊಲೀಸರು ವಶಕ್ಕೆ ಪಡೆದರು. ಆನಂತರ ಹಾಸನದ ‘ಸೆನ್‌’ (ಸೈಬರ್‌ ಕ್ರೈಂ, ಆರ್ಥಿಕ ಅಪರಾಧ, ನಾರ್ಕೋಟಿಕ್ಸ್‌) ಪೊಲೀಸ್‌ ಠಾಣೆಯಲ್ಲಿ 8 ತಾಸು ವಿಚಾರಣೆ ನಡೆಸಿದರು. ಈ ಸುದೀರ್ಘ ವಿಚಾರಣೆ ನಂತರ ಪ್ರಕರಣದಲ್ಲಿ ಅವರನ್ನು ಬಂಧನಕ್ಕೊಳಪಡಿಸಿ ಬೆಂಗಳೂರಿಗೆ ಕರೆದೊಯ್ದರು.

ಒಂದೆಡೆ ಮಹಿಳೆಯರ ಮೇಲಿನ ಅತ್ಯಾಚಾರ ಪ್ರಕರಣದಲ್ಲಿ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರನ್ನು ಎಸ್‌ಐಟಿ ಬಂಧಿಸಿದ ಬೆನ್ನಲ್ಲೇ ಅವರ ಅಣ್ಣ ಡಾ.ಸೂರಜ್ ಬಂಧನವಾಗಿದೆ. ಈಗ ಹಾಸನ ಜಿಲ್ಲೆಯ ಪ್ರಭಾವಿ ರಾಜಕಾರಣಿ ಎಚ್‌.ಡಿ.ರೇವಣ್ಣ ಅವರ ಇಬ್ಬರು ಪುತ್ರರೂ ಲೈಂಗಿಕ ದೌರ್ಜನ್ಯ ಪ್ರಕರಣಗಳಲ್ಲಿ ಸಿಲುಕಿ ಜೈಲು ಸೇರುವಂತಾಗಿದೆ.

ಪ್ರಕರಣವೇನು?:

ತಮ್ಮ ಮೇಲೆ ಅನೈಸರ್ಗಿಕ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಿ ಸೂರಜ್ ರೇವಣ್ಣ ವಿರುದ್ಧ ಅರಕಲಗೂಡು ತಾಲೂಕಿನ ಜೆಡಿಎಸ್‌ ಕಾರ್ಯಕರ್ತರೊಬ್ಬರು ಶನಿವಾರ ಹೊಳೆನರಸೀಪುರ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದರು. ಈ ದೂರಿನ ಮೇರೆಗೆ ಐಪಿಸಿ ಸೆಕ್ಷನ್‌ 377 (ಅಸಹಜ ಲೈಂಗಿಕ ಕ್ರಿಯೆ) ಹಾಗೂ 506 (ಜೀವ ಬೆದರಿಕೆ) ಆರೋಪಗಳಡಿ ಹೊಳೆನರಸೀಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಯಿತು. ಈ ಮಧ್ಯೆ, ದೂರುದಾರ ತಮ್ಮನ್ನು ಬ್ಲ್ಯಾಕ್‌ ಮೇಲ್‌ ಮಾಡಿದ್ದಾನೆ ಎಂದು ಆರೋಪಿಸಿ ದೂರು ನೀಡಲು ಸೂರಜ್‌ ಅವರು ಶನಿವಾರ ಸಂಜೆ 7.30ರ ಸುಮಾರಿಗೆ ಹಾಸನದ ‘ಸೆನ್‌’ (ಸೈಬರ್‌ಕ್ರೈಂ, ಆರ್ಥಿಕ ಅಪರಾಧ, ನಾರ್ಕೋಟಿಕ್ಸ್‌) ಪೊಲೀಸ್‌ ಠಾಣೆಗೆ ಆಗಮಿಸಿದ್ದರು.

ಈ ವೇಳೆ, ಸಕಲೇಶಪುರ ಡಿವೈಎಸ್ಪಿ ಪ್ರಮೋದ್‌ ನೇತೃತ್ವದಲ್ಲಿ ದೂರುದಾರ ನೀಡಿರುವ ದೂರು ಹಾಗೂ ಸೂರಜ್ ದೂರುಗಳ ಪ್ರತ್ಯೇಕ ವಿಚಾರಣೆ ನಡೆಸಲಾಯಿತು. ಭಾನುವಾರ ಮುಂಜಾನೆವರೆಗೂ ವಿಚಾರಣೆ ನಡೆಸಿದ ಬಳಿಕ, ಸೂರಜ್‌ ಅವರನ್ನು ಬಂಧಿಸಿ ಬೆಂಗಳೂರಿಗೆ ಕರೆ ತಂದರು.

ಇಂದು ಸೂರಜ್‌ಸಿಐಡಿ ಕಸ್ಟಡಿಗೆ?

ಸೂರಜ್‌ ಪ್ರಕರಣದ ತನಿಖೆ ಆರಂಭಿಸಲಿರುವ ಸಿಐಡಿ, ನ್ಯಾಯಾಲಯದಲ್ಲಿ ಬಾಡಿ ವಾರಂಟ್ ಪಡೆದು ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಿದೆ. ಸೋಮವಾರವೇ ಮತ್ತೆ ಕೋರ್ಟ್‌ಗೆ ಹಾಜರುಪಡಿಸಿ ಸಿಐಡಿ ತನ್ನ ವಶಕ್ಕೆ ಪಡೆಯುವ ಸಾಧ್ಯತೆಯಿದೆ.

----ಹಾಸನ-ಟು-ಬೆಂಗಳೂರು- ಜೆಡಿಎಸ್‌ ಕಾರ್ಯಕರ್ತನ ವಿರುದ್ಧ ಶುಕ್ರವಾರ ಹೊಳೆನರಸೀಪುರ ಠಾಣೆಗೆ ಬ್ಲಾಕ್ಮೇಲ್‌ ದೂರು ನೀಡಿದ್ದ ಸೂರಜ್‌ ರೇವಣ್ಣ ಅವರ ಆಪ್ತ

- ಶನಿವಾರ ಸಂಜೆ ಹೊಳೆನರಸೀಪುರ ಠಾಣೆಗೆ ಸೂರಜ್‌ ವಿರುದ್ಧ ಅನೈಸರ್ಗಿಕ ಲೈಂಗಿಕ ದೌರ್ಜನ್ಯದ ದೂರಿತ್ತ ಜೆಡಿಎಸ್‌ ಕಾರ್ಯಕರ್ತ- ಶನಿವಾರ ರಾತ್ರಿ ಸೂರಜ್‌ ರೇವಣ್ಣ ಬೆಂಗಳೂರಿಗೆ ಹೊರಟಿದ್ದಾಗ ಠಾಣೆಗೆ ಕರೆಸಿಕೊಂಡ ಹೊಳೆನರಸೀಪುರ ಠಾಣೆ ಪೊಲೀಸರು

- ಭಾನುವಾರ ಬೆಳಗಿನ ಜಾವದವರೆಗೂ ಸತತ ವಿಚಾರಣೆ ನಡೆಸಿ ಬಂಧನ- ಬೆಂಗಳೂರಿಗೆ ಕರೆತಂದು, ಬೌರಿಂಗ್‌ ಆಸ್ಪತ್ರೆಯಲ್ಲಿ ತಪಾಸಣೆ ನಡೆಸಿ, ಜಡ್ಜ್‌ ಮುಂದೆ ಹಾಜರು- 14 ದಿನಗಳ ನ್ಯಾಯಾಂಗ ಬಂಧನಕ್ಕೆ ನೀಡಿದ ಜಡ್ಜ್‌: ಪರಪ್ಪನ ಅಗ್ರಹಾರ ಕಾರಾಗೃಹಕ್ಕೆ ರವಾನೆ- ಈ ನಡುವೆ ದೂರುದಾರನಿಗೂ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆ ನಡೆಸಿ ರಹಸ್ಯ ಸ್ಥಳಕ್ಕೆ ಕರೆದೊಯ್ದ ಪೊಲೀಸರು