ಸುರತ್ಕಲ್‌ ಬೀಚ್‌ ದುರಂತ: ಮದುಮಗಳ ತಮ್ಮನ ಮೃತದೇಹ ಪತ್ತೆ

| Published : Apr 17 2025, 12:11 AM IST

ಸಾರಾಂಶ

ಸುರತ್ಕಲ್‌ ಬೀಚ್‌ನಲ್ಲಿ ಮಂಗಳವಾರ ಸಮುದ್ರಪಾಲಾಗಿದ್ದ ಇನ್ನೊಬ್ಬ ಯುವಕ, ಮದುಮಗಳ ಸಹೋದರ ಅನೀಶ್‌ (16) ಮೃತದೇಹ ಬುಧವಾರ ಬೆಳಗ್ಗೆ ಪತ್ತೆಯಾಗಿದೆ. ಈ ಮೂಲಕ ದುರಂತದಲ್ಲಿ ಇಬ್ಬರು ಮೃತಪಟ್ಟಂತಾಗಿದೆ.

ಕನ್ನಡಪ್ರಭ ವಾರ್ತೆ ಮೂಲ್ಕಿ

ಸುರತ್ಕಲ್‌ ಬೀಚ್‌ನಲ್ಲಿ ಮಂಗಳವಾರ ಸಮುದ್ರಪಾಲಾಗಿದ್ದ ಇನ್ನೊಬ್ಬ ಯುವಕ, ಮದುಮಗಳ ಸಹೋದರ ಅನೀಶ್‌ (16) ಮೃತದೇಹ ಬುಧವಾರ ಬೆಳಗ್ಗೆ ಪತ್ತೆಯಾಗಿದೆ. ಈ ಮೂಲಕ ದುರಂತದಲ್ಲಿ ಇಬ್ಬರು ಮೃತಪಟ್ಟಂತಾಗಿದೆ.

ಸುರತ್ಕಲ್ ಸಮೀಪದ ಸೂರಿಂಜೆಯಲ್ಲಿ ಪುಚ್ಚಾಡಿ ಪೊರಿಕಾನದಲ್ಲಿ ಮದುವೆ ನಿಗದಿಯಾಗಿದ್ದ ಮನೆಗಯಲ್ಲಿ ಮೆಹಂದಿ ಕಾರ್ಯಕ್ರಮ ನಡೆದಿದ್ದು ಮಂಗಳವಾರ ಸಂಜೆ ಮದುಮಗಳ ತಮ್ಮ ಅನೀಶ್‌ ನೆಂಟರೊಂದಿಗೆ ಸುರತ್ಕಲ್‌ ಸಮುದ್ರ ತೀರಕ್ಕೆ ತೆರಳಿದ್ದ. ಈ ವೇಳೆ ಸಮುದ್ರದಲ್ಲಿ ಆಟವಾಡುತ್ತಿದ್ದಾಗ ಧ್ಯಾನ್‌ ಬಂಜನ್‌ ನೀರಿನಲ್ಲಿ ಮುಳುಗಿದ್ದು ಆಸ್ಪತ್ರೆಗೆ ಕೊಂಡೊಯ್ಯುವಷ್ಟರಲ್ಲಿ ಮೃತಪಟ್ಟಿದ್ದ. ಅನೀಶ್‌ ನಾಪತ್ತೆಯಾಗಿದ್ದ.

ಕುಟುಂಬಸ್ಥರು ರಾತ್ರಿಯಿಡೀ ಸಮುದ್ರತೀರದಲ್ಲಿ ಉಳಿದು ಹುಡುಕಾಟ ನಡೆಸಿದ್ದರು. ಮುಳುಗಿದ ಸ್ಥಳದ ಅನತಿ ದೂರದಲ್ಲಿ ಬೆಳಗ್ಗೆ ಮೃತದೇಹ ಪತ್ತೆಯಾಯಿತು. ಪೊಲೀಸರು ಮಹಜರು ನಡೆಸಿದ ಬಳಿಕ ಮೃತದೇಹವನ್ನು ಕುಟುಂಬಸ್ಥರಿಗೆ ಬಿಟ್ಟುಕೊಡಲಾಯಿತು.

ಧ್ಯಾನ್‌ ಮತ್ತು ಅನೀಶ್ ಅಂತಿಮ ವಿದಿವಿಧಾನವನ್ನು ಸೂರಿಂಜೆಯ ಮೂಲಮನೆಯಲ್ಲಿ ನೆರವೇರಿಸಿ ಸುರತ್ಕಲ್ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ನಡೆಯಿತು. ಅನೀಶ್ ಮದುಮಗಳ ತಮ್ಮ, ಧ್ಯಾನ್ ಚಿಕ್ಕಪ್ಪನ ಪುತ್ರ.

ಉಮೇಶ್ ಹಾಗೂ ವಿವೇಕ್ ಸಹೋದರರಾಗಿದ್ದು ಉದ್ಯೋಗ ನಿಮಿತ್ತ ಮುಂಬೈನಲ್ಲಿ ನೆಲೆಸಿದ್ದರು. ಬುಧವಾರ ಉಮೇಶ್‌ ಪುತ್ರಿಯ ಮದುವೆ ಮೂಡುಬಿದಿರೆಯಲ್ಲಿ ಕಲ್ಯಾಣ ಮಂಟಪದಲ್ಲಿ ನಡೆಯಬೇಕಿದ್ದು, ಮದುವೆ ಮುಂದೂಡಿಕೆಯಾಗಿದೆ.