ಸಾರಾಂಶ
ಸುರತ್ಕಲ್‌ನಿಂದ ಎಪಿಎಂಸಿ ವರೆಗೆ ಕೂಳೂರಿನಿಂದ ಎ.ಜೆ. ಆಸ್ಪತ್ರೆಯವರೆಗೆ ಎರಡು ಕಡೆ ಡಾಮರು, ನಂತೂರು ಪಡೀಲ್ ಬೈಪಾಸ್ ವರೆಗೆ ಡಾಮರು ಒಟ್ಟು ೩೬ ಕಿ.ಮೀ ವರೆಗೆ ಈ ಕಾಮಗಾರಿ ನಡೆಯಲಿದೆ. ಎರಡೂ ಕಡೆ ಹುಲ್ಲು ಕಟಾವ್, ಚರಂಡಿ ಸ್ವಚ್ಛತೆ, ರಸ್ತೆಗೆ ಮಾರ್ಕಿಂಗ್ ಅಗಲಿದೆ.
ಕನ್ನಡಪ್ರಭ ವಾರ್ತೆ ಮಂಗಳೂರು
ಸುರತ್ಕಲ್‌ನಿಂದ ಬಿ.ಸಿ. ರೋಡ್ ವರೆಗಿನ ಹೆದ್ದಾರಿಯನ್ನು ಡಾಂಬರೀಕರಣ ಕಾಮಗಾರಿ ಹಾಗೂ ಇತರ ನಿರ್ವಹಣೆಗಾಗಿ ಕೇಂದ್ರದ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ಮನವಿ ಮಾಡಿದ ಮೇರೆಗೆ ೩೧ ಕೋಟಿ ರು. ಬಿಡುಗಡೆ ಮಾಡಿದ್ದು, ೨೮.೫೮ ಕೋಟಿ ರು.ಗೆ ಕಾಮಗಾರಿ ಟೆಂಡರ್ ಆಗಿದ್ದು, ಮಳೆಗಾಲದ ಒಳಗಾಗಿ ಮುಕ್ತಾಯಗೊಳಿಸುವ ಗುರಿ ಹೊಂದಲಾಗಿದೆ ಎಂದು ದ.ಕ. ಸಂಸದ ಕ್ಯಾ.ಬ್ರಿಜೇಶ್ ಚೌಟ ಹೇಳಿದರು.ಅವರು ಸುರತ್ಕಲ್‌ನಲ್ಲಿ ಗುರುವಾರ ಕಾಮಗಾರಿ ಆರಂಭಕ್ಕೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದರು.
ಸುರತ್ಕಲ್ ರಸ್ತೆ ಪ್ರತ್ಯೇಕ ಎನ್‌ಎಂಪಿಟಿ ಪೋರ್ಟ್ ರೋಡ್ ಆಗಿರುವುದರಿಂದ ಹೆದ್ದಾರಿ ಇಲಾಖೆಗೆ ಅಭಿವೃದ್ಧಿ ಪಡಿಸಲು ಆಗುತ್ತಿರಲಿಲ್ಲ. ಇದನ್ನು ಎನ್‌ಎಚ್‌ಎಐ ಇಲಾಖೆಯೇ ಸುಪರ್ದಿಗೆ ತೆಗೆದುಕೊಳ್ಳಬೇಕು ಎಂದು ಸಚಿವರಿಗೆ ಕಾರ್ಯದರ್ಶಿಯವರಿಗೆ ಮನವಿ ಮಾಡಿದ್ದು ಒಪ್ಪಿಗೆ ಸೂಚಿಸಿದ್ದಾರೆ. ಸದಸ್ಯದ ಮಟ್ಟಿಗೆ ಇತರ ಹೆದ್ದಾರಿ ನಿರ್ವಹಣೆಯಂತೆ ಈ ರಸ್ತೆ ಪ್ರತಿ ವರ್ಷ ನಿರ್ವಹಣೆಗೆ ಗುತ್ತಿಗೆದಾರರನ್ನು ನೇಮಿಸುವ ಬಗ್ಗೆಯೂ ಸಚಿವರ ಗಮನಕ್ಕೆ ತರಲಾಗಿದೆ ಎಂದರು.ಸುರತ್ಕಲ್‌ನಿಂದ ಎಪಿಎಂಸಿ ವರೆಗೆ ಕೂಳೂರಿನಿಂದ ಎ.ಜೆ. ಆಸ್ಪತ್ರೆಯವರೆಗೆ ಎರಡು ಕಡೆ ಡಾಮರು, ನಂತೂರು ಪಡೀಲ್ ಬೈಪಾಸ್ ವರೆಗೆ ಡಾಮರು ಒಟ್ಟು ೩೬ ಕಿ.ಮೀ ವರೆಗೆ ಈ ಕಾಮಗಾರಿ ನಡೆಯಲಿದೆ. ಎರಡೂ ಕಡೆ ಹುಲ್ಲು ಕಟಾವ್, ಚರಂಡಿ ಸ್ವಚ್ಛತೆ, ರಸ್ತೆಗೆ ಮಾರ್ಕಿಂಗ್ ಅಗಲಿದೆ. ಮಳೆಗಾಲದ ಮುನ್ನ ಮುಗಿಸಬೇಕಿರುವುದರಿಂದ ಶಾರ್ಟ್ ಲಿಸ್ಟ್ ಟೆಂಡರ್ ಮಾಡಿ ತುರ್ತು ಕಾಮಗಾರಿ ಅಗುವಂತೆ ಮೊದಲ ಬಾರಿ ಇಲಾಖೆ ಶ್ರಮ ವಹಿಸಿದೆ. ಮುಗ್ರೋಡಿ ಕನ್‌ಸ್ಟ್ರಕ್ಷನ್ ಈ ಭಾಗದಲ್ಲಿ ಉತ್ತಮವಾಗಿ ಹೆಸರು ಗಳಿಸಿರುವುದರಿಂದ ಸಂಚಾರಕ್ಕೆ ತೊಡಕಾಗದ ರೀತಿಯಲ್ಲಿ ಕಾಮಗಾರಿ ಕ್ಲಪ್ತ ಸಮಯಕ್ಕೆ ಮಾಡಿಕೊಡುವ ಭರವಸೆಯಿದೆ ಎಂದರು.ನಂತೂರು ಭಾಗದಲ್ಲಿ ಸೇತುವೆ ಕಾಮಗಾರಿ ವಿಳಂಬವಾಗುತ್ತಿರುವುದರಿಂದ ಈಗಿನ ಪರಿಸ್ಥಿಗೆ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುವ ನಿಟ್ಟಿನಲ್ಲಿ ನಾಲ್ಕು ಭಾಗದಲ್ಲಿ ಫ್ರಿ ಟರ್ನ್ ಆದ್ಯತೆ ನೀಡಲು ಕ್ರಮ ಕೈಗೊಳ್ಳಲಾಗಿದೆ ಎಂದರು. ಸರ್ವಿಸ್ ರಸ್ತೆ ಬೇಡಿಕೆ, ಬೀದಿ ದೀಪದ ಅಳವಡಿಕೆಗೂ ಅಧಿಕಾರಿಗಳ ಜತೆ ಸಮಾಲೋಚಿಸಲಾಗಿದೆ ಎಂದರು.ಮಂಗಳೂರು ಉತ್ತರ ಶಾಸಕ ಡಾ.ಭರತ್ ಶೆಟ್ಟಿ ಮಾತನಾಡಿ, ಸುರತ್ಕಲ್ ಹೆದ್ದಾರಿಯನ್ನು ಪೋರ್ಟ್ ರೋಡ್‌ನಿಂದ ಹೆದ್ದಾರಿ ಇಲಾಖೆಗೆ ಹಸ್ತಾಂತರಿಸಿ, ಹೊಸ ಚತುಷ್ಪಥ ಸುರತ್ಕಲ್ ರೈಲ್ವೆ ಮೇಲ್ಸೇತುವೆ ನಿರ್ಮಾಣಕ್ಕೂ ಆದ್ಯತೆ ನೀಡಲಾಗಿದೆ. ಈ ಭಾಗದ ಜನತೆಗೆ ಗುಣಮಟ್ಟದ ರಸ್ತೆ ಒದಗಿಸಲು ಸಂಸದರು ಸಚಿವರೊಂದಿಗೆ ಮಾತುಕತೆ ನಡೆಸಿದ್ದು, ಹಂತ ಹಂತವಾಗಿ ಕಾರ್ಯರೂಪಕ್ಕೆ ಬರಲಿದೆ ಎಂದರು.ಮಾಜಿ ಸಚಿವ ನಾಗರಾಜ ಶೆಟ್ಟಿ, ಮಾಜಿ ಮೇಯರ್‌ಗಳಾದ ದಿವಾಕರ್ ಪಾಂಡೇಶ್ವರ, ಜಯಾನಂದ ಅಂಚನ್, ಮನೋಜ್ ಕುಮಾರ್, ಎನ್‌ಎಚ್‌ಎಐ ಅಧಿಕಾರಿಗಳು, ಬಿಜೆಪಿ ಉತ್ತರ ಮಂಡಲ ಅಧ್ಯಕ್ಷ ರಾಜೇಶ್ ಕೊಠಾರಿ, ಮುಗ್ರೋಡಿ ಸಂಸ್ಥೆಯ ಸುಧಾಕರ್ ಮುಗ್ರೋಡಿ ಮತ್ತಿತರರಿದ್ದರು.