ಸುರತ್ಕಲ್ ಲೈಟ್ ಹೌಸ್ ಬೀಚ್ ರಸ್ತೆ ಕುಸಿತ; ಸಂಚಾರ ಬಂದ್

| Published : Sep 01 2024, 01:47 AM IST

ಸಾರಾಂಶ

ಸೆ.1ರಿಂದ ಮೂರು ದಿನಗಳ ಕಾಲ ಜಿಲ್ಲೆಯಲ್ಲಿ ಉತ್ತಮ ಮಳೆ ಸುರಿಯುವ ಆರೇಂಟ್‌ ಅಲರ್ಟ್‌ನ್ನು ಹವಾಮಾನ ಇಲಾಖೆ ನೀಡಿದೆ. ಅದರ ಬಳಿಕ ನಾಲ್ಕು ದಿನಗಳ ಕಾಲ ಹಳದಿ ಅಲರ್ಟ್‌ ಘೋಷಿಸಲಾಗಿದೆ.

ಮೂಲ್ಕಿ: ಸುರತ್ಕಲ್ ಸಮೀಪದ ಸದಾಶಿವ ದೇವಸ್ಥಾನದ ಬಳಿಯ ಬೀಚ್ ರಸ್ತೆ ಭಾರಿ ಮಳೆಗೆ ಕುಸಿತಗೊಂಡಿದ್ದು, ವಾಹನ ಸಂಚಾರ ಸಂಪೂರ್ಣ ಬಂದ್ ಆಗಿದೆ.

ಸುರತ್ಕಲ್ ಸದಾಶಿವ ದೇವಸ್ಥಾನಕ್ಕೆ ತಾಗಿಕೊಂಡೇ ಇರುವ ಈ ರಸ್ತೆ ಶುಕ್ರವಾರ ಏಕಾಏಕಿ ಕುಸಿದಿದೆ. ಕುಸಿದ ರಭಸಕ್ಕೆ ರಸ್ತೆ ಬದಿಯ ತಡೆಗೋಡೆಯ ಕಲ್ಲುಗಳು ಕೆಳಭಾಗದಲ್ಲಿರುವ ಮಣ್ಣು ಕುಸಿದಿದ್ದು ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ರಸ್ತೆ ಕೆಳ ಭಾಗದಲ್ಲಿ ಎರಡು ಮನೆಗಳಿದ್ದು ಮನೆಯವರು ಅಪಾಯದ ಸ್ಥಿತಿ ಎದುರಿಸುತ್ತಿದ್ದಾರೆ.

ಇನ್ನಷ್ಟು ಮಳೆ ಬಂದರೆ ರಸ್ತೆ ಕುಸಿಯುವ ಸಾಧ್ಯತೆ ಇದೆ ಎಂದು ಸ್ಥಳೀಯ ಮನೆಯವರಾದ ವೀಣಾ ಅರವಿಂದ್ ಹಾಗೂ ರಾಮಚಂದ್ರ ಇಂದಿರಾ ತಿಳಿಸಿದ್ದಾರೆ. ರಸ್ತೆ ಕುಸಿತದಿಂದ ಬೀಚ್‌ಗೆ ಹೋಗುವ ರಸ್ತೆ ಸಂಪೂರ್ಣ ಬಂದ್ ಆಗಿದ್ದು ಸ್ಥಳಕ್ಕೆ ಮಂಗಳೂರು ಉತ್ತರ ಸಂಚಾರಿ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲಿಸಿ ಬ್ಯಾರಿಕೇಡ್ ಹಾಗೂ ವಾಹನ ಸಂಚಾರ ಸಂಪೂರ್ಣ ನಿಷೇಧದ ನಾಮಫಲಕ ಅಳವಡಿಸಿದ್ದಾರೆ.

ದ.ಕ.ದಲ್ಲಿ ಮತ್ತೆ ಬಿರುಸುಗೊಂಡ ಮಳೆಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಳೆ ಮತ್ತೆ ಬಿರುಸು ಪಡೆದಿದ್ದು, ಶನಿವಾರ ಉತ್ತಮ ಮಳೆಯಾಗಿದೆ.ಬೆಳಗ್ಗಿನಿಂದಲೇ ಮಳೆ ಸುರಿಯತೊಡಗಿದ್ದು, ಮಂಗಳೂರಿನಲ್ಲಿ ಕೆಲಕಾಲ ಧಾರಾಕಾರ ಮಳೆಯಾಗಿ ಬೆಳಗ್ಗೆ ಸಂಚರಿಸುವವರಿಗೆ ತೀವ್ರ ಸಮಸ್ಯೆ ತಂದೊಡ್ಡಿತ್ತು. ಅಲ್ಲಲ್ಲಿ ತಗ್ಗು ಪ್ರದೇಶಗಳಲ್ಲಿ ರಸ್ತೆಯಲ್ಲೇ ನೀರು ಹರಿದು ಕೃತಕ ಪ್ರವಾಹ ಉಂಟಾಗಿತ್ತು. ಮಧ್ಯಾಹ್ನ ಬಳಿಕ ಮಳೆಯ ತೀವ್ರತೆ ಇಳಿದಿತ್ತು.ಸೆ.1ರಿಂದ ಮೂರು ದಿನಗಳ ಕಾಲ ಜಿಲ್ಲೆಯಲ್ಲಿ ಉತ್ತಮ ಮಳೆ ಸುರಿಯುವ ಆರೇಂಟ್‌ ಅಲರ್ಟ್‌ನ್ನು ಹವಾಮಾನ ಇಲಾಖೆ ನೀಡಿದೆ. ಅದರ ಬಳಿಕ ನಾಲ್ಕು ದಿನಗಳ ಕಾಲ ಹಳದಿ ಅಲರ್ಟ್‌ ಘೋಷಿಸಲಾಗಿದೆ. ಶುಕ್ರವಾರ ಬೆಳಗ್ಗಿನಿಂದ ಶನಿವಾರ ಬೆಳಗ್ಗಿನವರೆಗೆ ಜಿಲ್ಲೆಯಲ್ಲಿ ಸರಾಸರಿ 23.6 ಮಿಮೀ ಮಳೆ ದಾಖಲಾಗಿದೆ.