ಮನೆ ಮನೆ ಸಮೀಕ್ಷೆ ವೇಳೆ ಕುರುಬ ಎಂದು ನಮೂದಿಸಿ: ಸುರೇಶ್ ಮನವಿ

| Published : Sep 17 2025, 01:05 AM IST

ಸಾರಾಂಶ

ಸೆ.22 ರಿಂದ ಅ.7ರವರೆಗೆ ರಾಜ್ಯಾದ್ಯಂತ ಶೈಕ್ಷಣಿಕ, ಸಾಮಾಜಿಕ, ಆರ್ಥಿಕ, ಔದ್ಯೋಗಿಕ, ಮತ್ತು ರಾಜಕೀಯ ಪ್ರಾತಿನಿಧ್ಯಗಳ ಕುರಿತಾದ ಸಮೀಕ್ಷೆ ನಡೆಯಲಿದೆ. ಏಕೈಕ ಜಾತಿ ಕಾಲಂ 9, 10 ಮತ್ತು 11ರಲ್ಲಿ ಕುರುಬ ಎಂದು ನಮೂದಿಸಿ.

ಕನ್ನಡಪ್ರಭ ವಾರ್ತೆ ಪಾಂಡವಪುರ

ಕುರುಬ ಸಮುದಾಯದವರು ಮನೆ ಮನೆ ಸಮೀಕ್ಷೆ ವೇಳೆ ಕುರುಬ ಎಂದು ನಮೂದಿಸಬೇಕು ಎಂದು ಸಂಘದ ಜಿಲ್ಲಾಧ್ಯಕ್ಷ ಎಂ.ಎಲ್.ಸುರೇಶ್ ಮನವಿ ಮಾಡಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಜಿಲ್ಲಾ ಕುರುಬರ ಸಂಘದಿಂದ ಆಯೋಜಿಸಿದ್ದ ಜನಜಾಗೃತಿ ಸಭೆಯಲ್ಲಿ ಮಾತನಾಡಿ, ಸೆ.22 ರಿಂದ ಅ.7ರವರೆಗೆ ರಾಜ್ಯಾದ್ಯಂತ ಶೈಕ್ಷಣಿಕ, ಸಾಮಾಜಿಕ, ಆರ್ಥಿಕ, ಔದ್ಯೋಗಿಕ, ಮತ್ತು ರಾಜಕೀಯ ಪ್ರಾತಿನಿಧ್ಯಗಳ ಕುರಿತಾದ ಸಮೀಕ್ಷೆ ನಡೆಯಲಿದೆ. ಏಕೈಕ ಜಾತಿ ಕಾಲಂ 9, 10 ಮತ್ತು 11ರಲ್ಲಿ ಕುರುಬ ಎಂದು ನಮೂದಿಸಲು ಅವರು ಸಮಯದಾಯದ ಮುಖಂಡರಲ್ಲಿ ವಿನಂತಿಸಿದರು.

ಈ ಹಿಂದೆ ಕಾಂತರಾಜು ಸಮಿತಿ ನಡೆಸಿದ್ದ ಸಮೀಕ್ಷೆ ವರದಿ ಕಸದ ಬುಟ್ಟಿಗೆ ಸೇರಿದೆ. ಹೀಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎಲ್ಲ ವರ್ಗಗಳಿಗೂ ಸಾಮಾಜಿಕ‌ ನ್ಯಾಯ ದೊರಕಿಸಲು ಈ ಸಮೀಕ್ಷೆ ಕೈಗೊಂಡಿದ್ದಾರೆ. ಸಮೀಕ್ಷೆ ವರದಿಯು ಡಿಸೆಂಬರ್ ವೇಳೆಗೆ ಸಲ್ಲಿಕೆಯಾಗಲಿದೆ. ರಾಜ್ಯಾದ್ಯಂತ ಸಮೀಕ್ಷೆಗಾಗಿ 1ಲಕ್ಷದ 75ಸಾವಿರ ಶಿಕ್ಷಕರನ್ನು ಸರ್ಕಾರ ನೇಮಕ ಮಾಡಿಕೊಂಡಿದೆ. ಶಿಕ್ಷಕರು ಸಮೀಕ್ಷೆ ಮಾಡಲು ಮನೆ ಬಳಿ ಬಂದಾಗ ಅವರಿಗೆ ತಪ್ಪದೇ ಕುರುಬ ಸಮುದಾಯದ ಕುಟುಂಬ ವರ್ಗದವರು

ನಿಖರವಾದ ಮಾಹಿತಿ ನೀಡುವ ಮೂಲಕ ಸಮೀಕ್ಷೆಗೆ ಸಹಕರಿಸಬೇಕು ಎಂದರು.

ಈಗಾಗಲೇ ಕೆ.ಆರ್.ಪೇಟೆ, ಶ್ರೀರಂಗಪಟ್ಟಣ, ಪಾಂಡವಪುರದಲ್ಲಿ ಜನಜಾಗೃತಿ ಸಭೆ ಮಾಡಿದ್ದು, ನಂತರ ನಾಗಮಂಗಲ, ಮಂಡ್ಯ, ಮದ್ದೂರು ಮತ್ತು ಮಳವಳ್ಳಿ ತಾಲೂಕು ಕೇಂದ್ರಗಳಲ್ಲಿ ಜನ ಜಾಗೃತಿ‌ಸಭೆ ನಡೆಯಲಿದೆ ಎಂದರು.

ಸಭೆಯಲ್ಲಿ ಸಂಘದ ಜಿಲ್ಲಾ ಖಜಾಂಚಿ ರಾಜಣ್ಣ, ಜಿಲ್ಲಾ ಉಪಾಧ್ಯಕ್ಷ ಬಿ.ಕೆ.ರೇವಣ್ಣ, ತಾಲೂಕು ಅಧ್ಯಕ್ಷ ಹಾರೋಹಳ್ಳಿ ಡಿ.ಹುಚ್ಚೇಗೌಡ, ಕಾರ್ಯದರ್ಶಿ ಹಾಗನಹಳ್ಳಿ ಗೋಪಾಲ್, ಉಪಾಧ್ಯಕ್ಷ ಕರಿಗೌಡ, ತಾಪಂ ಮಾಜಿ ಅಧ್ಯಕ್ಷ ಮಾಳಿಗೇಗೌಡ, ಮುಖಂಡರಾದ ಚಿಕ್ಕಮರಳಿ ಸ್ವಾಮಿಗೌಡ, ಬಂಕ್ ಶ್ರೀನಿವಾಸ್, ಚಂದ್ರೇಗೌಡ, ಪಾಲಾಕ್ಷ, ಮದ್ದೂರು ತಾಲೂಕು ಉಪಾಧ್ಯಕ್ಷ ಪ್ರಪುಲ್ಲಾಚಂದ್ರು, ಹಾರೋಹಳ್ಳಿ ಚಿಕ್ಕಣ್ಣ, ರಾಜಮುಡಿ ಸೇರಿದಂತೆ ಇತರರು ಇದ್ದರು.