ಸಾರಾಂಶ
ಕನ್ನಡಪ್ರಭ ವಾರ್ತೆ ತುಮಕೂರುತುಮಕೂರು ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ವಿ.ಸೋಮಣ್ಣ ಗೆಲುವಿಗೆ ತುಮಕೂರು ಗ್ರಾಮಾಂತರ ಕ್ಷೇತ್ರದಲ್ಲಿಯೂ ಸಿಕ್ಕ ಲೀಡ್ ಕೂಡ ಕಾರಣವಾಗಿರುವುದು ವೈಯಕ್ತಿಕವಾಗಿ ಹೆಚ್ಚಿನ ಸಂತೋಷ ಕೊಟ್ಟಿದೆ ಎಂದು ತುಮಕೂರು ಗ್ರಾಮಾಂತರ ಶಾಸಕ ಬಿ.ಸುರೇಶ್ ಗೌಡ ತಿಳಿಸಿದ್ದಾರೆ.ವಿ.ಸೋಮಣ್ಣ ಅವರು ಹೊರಗಿನವರು ಎಂಬ ಅಪಪ್ರಚಾರವನ್ನು ಮೀರಿ ಕ್ಷೇತ್ರದ ಜನರು ಅವರಿಗೆ ಬೆಂಬಲ ಕೊಟ್ಟಿದ್ದಾರೆ. ತುಮಕೂರು ಗ್ರಾಮಾಂತರ ಕ್ಷೇತ್ರದಲ್ಲಿ ಮುನ್ನಡೆ ಕೊಡಿಸಲು ಆಗುವುದಿಲ್ಲ ಎಂದು ನಮ್ಮ ಪಕ್ಷದವರೇ ಆಡಿದ ಕುಹಕದ ಮಾತುಗಳಿಗೆ ಜನರು ಮನ್ನಣೆ ಕೊಟ್ಟಿಲ್ಲ. ನನ್ನ ಮೇಲೆ ವೈಯಕ್ತಿಕವಾಗಿ ನಂಬಿಕೆಯಿರಿಸಿ ಬಿಜೆಪಿ ಅಭ್ಯರ್ಥಿಗೆ 29,000 ಮತಗಳಿಗಿಂತ ಹೆಚ್ಚಿನ ಮುನ್ನಡೆ ನೀಡಿ ಅವರ ಗೆಲುವಿಗೆ ಕಾರಣರಾದ ನನ್ನ ಕ್ಷೇತ್ರದ ಮತದಾರರಿಗೆ ತಾವು ಹೃತ್ಪೂರ್ವಕ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದರು.ಸೋಮಣ್ಣ ಅವರು ಸಚಿವರಾಗಿ ಈ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸುತ್ತಾರೆ. ಕೇಂದ್ರದಲ್ಲಿ ಸತತವಾಗಿ ಮೂರನೇ ಸಾರಿ ಎನ್‌ಡಿಎ ಮೈತ್ರಿಕೂಟ ಅಧಿಕಾರಕ್ಕೆ ಬರಲಿರುವುದು ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ದೇಶದ ಜನರು ಇಟ್ಟಿರುವ ನಂಬಿಕೆಯ ಪ್ರತೀಕದಂತೆ ಇದೆ. ಕರ್ನಾಟಕದಲ್ಲಿ ಬಿಜೆಪಿಯೇ ಹೆಚ್ಚಿನ ಸಂಖ್ಯೆಯಲ್ಲಿ ಗೆಲುವು ಸಾಧಿಸಿದ್ದು ಬೆಂಗಳೂರು ಗ್ರಾಮಾಂತರದಲ್ಲಿ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಸೋದರ ಡಿ.ಕೆ. ಸುರೇಶ್ ಅವರು ಅನುಭವಿಸಿರುವ ಹೀನಾಯ ಸೋಲು ಶಿವಕುಮಾರ್ ಅವರ ಭವಿಷ್ಯಕ್ಕೆ ಮಾರಕವಾಗಿದೆʼ ಎಂದರು. ಕಾಂಗ್ರೆಸ್ ಪಕ್ಷವು ತನ್ನ ಹುಸಿ ಗ್ಯಾರಂಟಿ ಯೋಜನೆಗಳನ್ನು ಮುಂದಿಟ್ಟುಕೊಂಡು ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಸಮರ ಸಾರಿತ್ತು. ಆದರೆ, ಈಗ ಜನರು ಆ ಯೋಜನೆಗಳಿಗೆ ಮರುಳಾಗದೇ ಮೋದಿ ಅವರ ನಾಯಕತ್ವದಲ್ಲಿ ಮತ್ತೆ ವಿಶ್ವಾಸ ವ್ಯಕ್ತಪಡಿಸಿರುವುದರಿಂದ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ರಾಜೀನಾಮೆ ಕೊಟ್ಟು ಹೊಸದಾಗಿ ಚುನಾವಣೆ ಎದುರಿಸಬೇಕು ಎಂದು ಆಗ್ರಹಿಸಿದ್ದಾರೆ.ಭಾರತದಲ್ಲಿ ಪ್ರಜಾಪ್ರಭುತ್ವದ ಬೇರುಗಳು ಬಲಿಷ್ಠವಾಗಿದ್ದು ಜನರು ಅತ್ಯಂತ ಜಾಣ್ಮೆಯಿಂದ ಮತದಾನ ಮಾಡುತ್ತಾರೆ ಎನ್ನುವುದಕ್ಕೆ ಈ ಚುನಾವಣೆ ಮತ್ತೆ ಸಾಕ್ಷಿಯಾಗಿದೆ. ಅದಕ್ಕಾಗಿ ಭಾರತದ ಮತದಾರರಿಗೆ ಅಭಿನಂದನೆಗಳು ಸಲ್ಲಬೇಕು ಎಂದು ತಿಳಿಸಿದ್ದಾರೆ.