ನಾನೊಬ್ಬನೇ ಸಂಘದ ಉದ್ಧಾರಕ. ನನ್ನಿಂದಲೇ ಸಂಘ ಬೆಳವಣಿಗೆ ಸಾಧಿಸಿದೆ. ನಾನಿಲ್ಲದಿದ್ದರೆ ವಿದ್ಯಾರ್ಥಿನಿಲಯ ಕಟ್ಟಡ, ಮಳವಳ್ಳಿಯ ಕನಕಭವನ ನಿರ್ಮಾಣವಾಗುವುದೇ ಇಲ್ಲ ಎಂಬ ಭ್ರಮೆಯಲ್ಲಿ ಅಧ್ಯಕ್ಷರಿದ್ದಾರೆ. ಸಂಘವನ್ನು ೧೯೫೪ ರಿಂದ ಆಯಾ ಕಾಲಘಟ್ಟದಲ್ಲಿ ಅಧ್ಯಕ್ಷರಾಗಿದ್ದವರು ನಿರಂತರವಾಗಿ ಅಭಿವೃದ್ಧಿಪಡಿಸಿಕೊಂಡು ಬಂದಿದ್ದಾರೆ. ಸುರೇಶ್ ಅವರನ್ನು ನೋಡಿ ಸಿಎಂ ಹಣ ಬಿಡುಗಡೆ ಮಾಡಿಲ್ಲ.
ಕನ್ನಡಪ್ರಭ ವಾರ್ತೆ ಮಂಡ್ಯ
ಕುರುಬರ ಸಂಘದ ಚುನಾವಣೆಯಲ್ಲಿ ರೆಸಾರ್ಟ್ ರಾಜಕಾರಣ ಆರಂಭಿಸಿದ್ದೇ ಹಾಲಿ ಅಧ್ಯಕ್ಷ ಎಂ.ಎಲ್.ಸುರೇಶ್. ಈಗಿನ ಕಾರ್ಯಕಾರಿ ಮಂಡಳಿ ಮುಂದುವರೆಸುವುದಕ್ಕೂ ಸಾಮಾನ್ಯ ಸಭೆಗೆ ಮುನ್ನ ನಿರ್ದೇಶಕರನ್ನು ರೆಸಾರ್ಟ್‌ಗೆ ಕರೆದುಕೊಂಡಿದ್ದ ಕುಖ್ಯಾತಿಯೂ ಅವರದ್ದೇ ಆಗಿದೆ ಎಂದು ಸಂಘದ ನಿರ್ದೇಶಕ ಹಾರೋಹಳ್ಳಿ ಕೃಷ್ಣ ಮತ್ತು ಸದಸ್ಯ ಚಂದಹಳ್ಳಿ ಶ್ರೀಧರ್ ಟೀಕಿಸಿದರು.ನಾನೊಬ್ಬನೇ ಸಂಘದ ಉದ್ಧಾರಕ. ನನ್ನಿಂದಲೇ ಸಂಘ ಬೆಳವಣಿಗೆ ಸಾಧಿಸಿದೆ. ನಾನಿಲ್ಲದಿದ್ದರೆ ವಿದ್ಯಾರ್ಥಿನಿಲಯ ಕಟ್ಟಡ, ಮಳವಳ್ಳಿಯ ಕನಕಭವನ ನಿರ್ಮಾಣವಾಗುವುದೇ ಇಲ್ಲ ಎಂಬ ಭ್ರಮೆಯಲ್ಲಿ ಅಧ್ಯಕ್ಷರಿದ್ದಾರೆ. ಸಂಘವನ್ನು ೧೯೫೪ ರಿಂದ ಆಯಾ ಕಾಲಘಟ್ಟದಲ್ಲಿ ಅಧ್ಯಕ್ಷರಾಗಿದ್ದವರು ನಿರಂತರವಾಗಿ ಅಭಿವೃದ್ಧಿಪಡಿಸಿಕೊಂಡು ಬಂದಿದ್ದಾರೆ. ಸುರೇಶ್ ಅವರನ್ನು ನೋಡಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಅವರು ಹಣ ಬಿಡುಗಡೆ ಮಾಡಿಲ್ಲ ಎಂದು ಗುರುವಾರ ಜಂಟಿ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಚಂದಹಳ್ಳಿ ಶ್ರೀಧರ್ ಮಾತನಾಡಿ, ಅಧ್ಯಕ್ಷರು ನನ್ನನ್ನು ಭೂಗಳ್ಳ ಎಂದು ಕರೆದಿದ್ದು, ನಾನು ಭೂಗಳ್ಳ ಎನ್ನುವುದಕ್ಕೆ ಇವರ ಬಳಿ ಸಾಕ್ಷಿ ಏನಿದೆ. ನಾಲಿಗೆಯನ್ನು ಬಿಗಿಹಿಡಿಯದಿದ್ದರೆ ನಿಮ್ಮ ಇತಿಹಾಸವನ್ನು ಎಲ್ಲರೆದುರು ಬಿಚ್ಚಿಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.ಜಮೀನ್ದಾರ್ ಜವರೇಗೌಡ ಮನೆತನಕ್ಕೆ ಒಂದು ಇತಿಹಾಸವಿದೆ. ನಮಗೇ ನೂರಾರು ಎಕರೆ ಜಮೀನಿದೆ. ಸರ್ಕಾರಿ ಭೂಮಿಗೆ ಆಸೆಪಡುವ ದುರ್ಗತಿ ನಮಗೆ ಬಂದಿಲ್ಲ. ನಮ್ಮ ಮನೆತನದಿಂದ ಹಲವಾರು ಚುನಾವಣೆ ಎದುರಿಸಿ ಗೆದ್ದಿದ್ದೇವೆ. ಅಧ್ಯಕ್ಷರಾಗಿರುವ ಎಂ.ಎಲ್.ಸುರೇಶ್ ಅವರ ಇತಿಹಾಸದಲ್ಲಿ ಒಂದೇ ಒಂದು ಚುನಾವಣೆಯಲ್ಲಿ ಗೆದ್ದಿದ್ದಾರಾ. ಜನರನ್ನು ಹೆದರಿಸಿ, ಬ್ಲಾಕ್‌ಮೇಲ್ ಮಾಡಿಕೊಂಡು ಅಧ್ಯಕ್ಷ ಸ್ಥಾನದಲ್ಲಿ ಕುಳಿತಿದ್ದಾರೆ. ಅವರಿಗೆ ನಮ್ಮ ಕುಟುಂಬದ ಬಗ್ಗೆ ಮಾತನಾಡುವ ಯೋಗ್ಯತೆಯೇ ಇಲ್ಲ ಎಂದು ಖಾರವಾಗಿ ಹೇಳಿದರು.
ಸಮುದಾಯದವರನ್ನು ರೌಡಿಗಳು, ಗೂಂಡಾಗಳು ಎಂದು ಕರೆದಿದ್ದಾರೆ. ಅವರ ಗೊಡ್ಡು ಬೆದರಿಕೆಗಳಿಗೆಲ್ಲಾ ನಾವು ಹೆದರುವುದಿಲ್ಲ. ನಾಚಿಕೆ-ಮಾನ, ಮರ್ಯಾದೆ ಇದ್ದರೆ ನೇರವಾಗಿ ಚುನಾವಣೆ ಎದುರಿಸಲಿ. ಮತ್ತೆ ಅವರೇ ಗೆದ್ದುಬರಲಿ. ಅದಕ್ಕೆ ನಮ್ಮ ಅಭ್ಯಂತರವಿಲ್ಲ. ಆದರೆ, ಈಗಿರುವ ಕಾರ್ಯಕಾರಿ ಮಂಡಳಿಯನ್ನು ಮುಂದುವರೆಸುವುದಕ್ಕೆ ಸಾಧ್ಯವೇ ಇಲ್ಲ ಎಂದು ನೇರವಾಗಿ ಹೇಳಿದರು.ನಾನು ಸಂಘದ ಅಧಿಕೃತ ಸದಸ್ಯನಾಗಿದ್ದರೂ ನನ್ನನ್ನು ಸಂಘದ ಸದಸ್ಯನೇ ಅಲ್ಲ ಎಂದಿರುವ ಎಂ.ಎಲ್.ಸುರೇಶ್ ಸದಸ್ಯರ ಬಗ್ಗೆ ಎಂತಹ ಭಾವನೆ ಇಟ್ಟಿದ್ದಾರೆ ಎನ್ನುವುದಕ್ಕೆ ಸಾಕ್ಷಿಯಾಗಿದೆ. ಕಾನೂನಾತ್ಮಕವಾಗಿ ಪ್ರಶ್ನೆ ಮಾಡುವವರನ್ನು ಅವರು ಸಹಿಸುವುದಿಲ್ಲ. ಅವರ ತಾಳಕ್ಕೆ ತಕ್ಕಂತೆ ಕುಣಿಯುವವರಿದ್ದರೆ ಅವರಷ್ಟೇ ಅಧ್ಯಕ್ಷರ ಆಪ್ತರು ಎಂದು ಭಾವಿಸಿದಂತಿದೆ ಎಂದು ಆರೋಪಿಸಿದರು.
ಬೈಲಾದಲ್ಲಿರುವಂತೆ ಐದು ವರ್ಷಕ್ಕೊಮ್ಮೆ ಚುನಾವಣೆ ನಡೆಯಲೇಬೇಕು. ಯಾವ ಕಾರಣಕ್ಕೂ ಆಡಳಿತ ಮಂಡಳಿಯನ್ನು ಮುಂದುವರೆಸುವುದಕ್ಕೆ ಒಪ್ಪುವುದಿಲ್ಲ. ಚುನಾವಣೆಯನ್ನು ಘೋಷಿಸದಿದ್ದರೆ ಉಗ್ರ ಸ್ವರೂಪದ ಹೋರಾಟಕ್ಕೆ ಮುಂದಾಗುವುದಾಗಿ ಎಚ್ಚರಿಕೆ ನೀಡಿದರು.ನಿರ್ದೇಶಕ ಹಾರೋಹಳ್ಳಿ ಕೃಷ್ಣ ಮಾತನಾಡಿ, ಸಾಮಾನ್ಯಸಭೆಯ ನೋಟೀಸ್‌ನಲ್ಲಿ ಕಾರ್ಯಕಾರಿಣಿ ಮಂಡಳಿಯನ್ನು ಮುಂದುವರೆಸುವ ವಿಷಯವನ್ನೇ ಚರ್ಚೆಗೆ ತರದೆ ಉಳಿದೆಲ್ಲಾ ನಡವಳಿಗಳ ಬಗ್ಗೆ ಮಾತನಾಡದೆ ಏಕಾಏಕಿ ಕಾರ್ಯಕಾರಿಣಿ ಮಂಡಳಿ ಮುಂದುವರೆಸುವ ವಿಷಯವನ್ನು ಚರ್ಚೆಗೆ ತೆಗೆದುಕೊಂಡಾಗ ಸಭೆಯಲ್ಲಿ ಸದಸ್ಯರು ಆಕ್ರೋಶಗೊಂಡಿದ್ದಾಗಿ ಹೇಳಿದರು.
ರಾಜ್ಯ ಸಂಘದ ಬೈಲಾವೇ ಬೇರೆ. ಜಿಲ್ಲಾ ಸಂಘದ ಬೈಲಾವೇ ಬೇರೆ. ಬೈಲಾ ಪ್ರಕಾರ ಐದು ವರ್ಷಕ್ಕೊಮ್ಮೆ ಚುನಾವಣೆ ನಡೆಯಲೇಬೇಕು. ಕಾರ್ಯಕಾರಿ ಮಂಡಳಿಯನ್ನು ಮುಂದುವರೆಸುವ ಬಗ್ಗೆ ಎಲ್ಲಿಯೂ ಪ್ರಸ್ತಾಪವೇ ಇಲ್ಲ. ಆದರೂ ಎಂ.ಎಲ್.ಸುರೇಶ್ ಅವರು ಡಿಆರ್ ಹೇಳಿರುವಂತೆ ೬ ತಿಂಗಳು ಮಂಡಳಿ ಮುಂದುವರೆಯುವುದಕ್ಕೆ ಅವಕಾಶವಿದೆ. ಅದರಂತೆ ಮುಂದುವರೆಯುವುದಾಗಿ ಹೇಳುತ್ತಿದ್ದಾರೆ. ಸಹಕಾರ ಕಾಯ್ದೆಗೆ ವಿರುದ್ಧವಾಗಿ ಅಧ್ಯಕ್ಷ ಎಂ.ಎಲ್.ಸುರೇಶ್ ನಡೆದುಕೊಳ್ಳುತ್ತಿದ್ದಾರೆ ಎಂದು ದೂಷಿಸಿದರು.ಸಾಮಾನ್ಯ ಸಭೆಯಲ್ಲಿ ವ್ಯಕ್ತವಾಗುವ ಅಭಿಪ್ರಾಯಗಳನ್ನು ನಡವಳಿ ಪುಸ್ತಕದಲ್ಲಿ ದಾಖಲಿಸಬೇಕಿರುವುದು ನಿಯಮ. ಆದರೆ, ಸಭೆಯ ಹೊರಗೆ ನಡವಳಿ ಪುಸ್ತಕವನ್ನಿಟ್ಟುಕೊಂಡು ಸದಸ್ಯರಿಂದ ಸಹಿ ಹಾಕಿಸಿಕೊಳ್ಳುತ್ತಿದ್ದುದೇಕೆ. ಇದನ್ನು ಪ್ರಶ್ನೆ ಮಾಡಿದರೆ ಪಲಾಯನ ಮಾಡುವುದಕ್ಕೆ ಮುಂದಾಗುತ್ತಾರೆ. ಸರ್ವಸದಸ್ಯರ ಅಭಿಪ್ರಾಯಕ್ಕೆ ವಿರುದ್ಧವಾಗಿ ಸಂಘದ ಆಡಳಿತ ಮಂಡಳಿ೦ ನಡೆದುಕೊಂಡರೆ ಹಾಗೂ ಅದಕ್ಕೆ ಎ.ಆರ್., ಡಿ.ಆರ್. ಒಪ್ಪಿಗೆ ಸೂಚಿಸಿದರೆ ಪ್ರತಿಭಟನೆ ಮತ್ತು ಕಾನೂನು ಹೋರಾಟ ನಡೆಸುವ ಎಚ್ಚರಿಕೆ ನೀಡಿದರು.
ಗೋಷ್ಠಿಯಲ್ಲಿ ಶಿವಣ್ಣ, ಗುರುಪ್ರಸಾದ್, ಆರ್.ಭಾಸ್ಕರ್, ಚನ್ನಮಾದಯ್ಯ, ಸಿ.ಟಿ.ಬೀರೇಶ್, ರಮೇಶ್, ಬಸವರಾಜು ಇತರರಿದ್ದರು.