ಸುರೇಶ್ ಕ್ಷೇತ್ರ ಜನರ ನಾಡಿ ಮಿಡಿತ ಬಲ್ಲವರು

| Published : Mar 21 2024, 01:02 AM IST

ಸಾರಾಂಶ

ಪೋಡಿ ಅಂತ ಏನಕ್ಕೆ ಹೇಳುತ್ತಾರೆ? ಟ್ರಾನ್ಸ್ ಫಾರ್ಮರ್ ಅಂದರೇನು ಗೊತ್ತಿಲ್ಲದವರು ರಾಜಕಾರಣಕ್ಕೆ ಬಂದಿದ್ದಾರೆ. ಹಳ್ಳಿಯಲ್ಲಿ ನಿಂತು ಕೆಲಸ ಮಾಡುವ ನಾಯಕ ಬೇಕಾ, ಎಸಿ ರೂಮ್‌ನಲ್ಲಿ ಕುಳಿತುಕೊಳ್ಳುವ ನಾಯಕ ಬೇಕಾ ಎಂಬುದನ್ನು ಮತದಾರರು ತೀರ್ಮಾನ ಮಾಡಬೇಕು ಎಂದು ಬಿಜೆಪಿ ಅಭ್ಯರ್ಥಿ ಡಾ.ಸಿ.ಎನ್.ಮಂಜುನಾಥ್ ವಿರುದ್ಧ ಮಾಗಡಿ ಕ್ಷೇತ್ರ ಶಾಸಕ ಬಾಲಕೃಷ್ಣ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು.

ಕನ್ನಡಪ್ರಭ ವಾರ್ತೆ ರಾಮನಗರ

ಪೋಡಿ ಅಂತ ಏನಕ್ಕೆ ಹೇಳುತ್ತಾರೆ? ಟ್ರಾನ್ಸ್ ಫಾರ್ಮರ್ ಅಂದರೇನು ಗೊತ್ತಿಲ್ಲದವರು ರಾಜಕಾರಣಕ್ಕೆ ಬಂದಿದ್ದಾರೆ. ಹಳ್ಳಿಯಲ್ಲಿ ನಿಂತು ಕೆಲಸ ಮಾಡುವ ನಾಯಕ ಬೇಕಾ, ಎಸಿ ರೂಮ್‌ನಲ್ಲಿ ಕುಳಿತುಕೊಳ್ಳುವ ನಾಯಕ ಬೇಕಾ ಎಂಬುದನ್ನು ಮತದಾರರು ತೀರ್ಮಾನ ಮಾಡಬೇಕು ಎಂದು ಬಿಜೆಪಿ ಅಭ್ಯರ್ಥಿ ಡಾ.ಸಿ.ಎನ್.ಮಂಜುನಾಥ್ ವಿರುದ್ಧ ಮಾಗಡಿ ಕ್ಷೇತ್ರ ಶಾಸಕ ಬಾಲಕೃಷ್ಣ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು.

ಮಾಗಡಿ ಕ್ಷೇತ್ರ ವ್ಯಾಪ್ತಿಯ ವಡ್ಡರದೊಡ್ಡಿಯ ರೆಸಾರ್ಟ್‌ನಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಆ ಅಭ್ಯರ್ಥಿಗೆ ದೊಡ್ಡಗಂಗವಾಡಿ, ಚಿಕ್ಕಗಂಗವಾಡಿ ಎಲ್ಲಿದೆ ಅಂತಾನೆ ಗೊತ್ತಿಲ್ಲ. ಕ್ಷೇತ್ರದಲ್ಲಿ ಆಗಬೇಕಿರುವ ಅಭಿವೃದ್ಧಿ ಕಾರ್ಯ ಹಾಗೂ ಜನರ ಬೇಕು ಬೇಡಗಳ ಅರಿವೂ ಇಲ್ಲ. ಆದರೆ, ಡಿ.ಕೆ.ಸುರೇಶ್ ಅವರಿಗೆ ಕ್ಷೇತ್ರ ಪರಿಚಯವಿದ್ದು, ಜನರ ನಾಡಿ ಮಿಡಿತ ಬಲ್ಲವರಾಗಿದ್ದಾರೆ ಎಂದರು.

ಈ ವರೆಗೆ ಕ್ಷೇತ್ರದಿಂದ ಗೆದ್ದ ಸಂಸದರು ಯಾರೂ ಹಳ್ಳಿಗಳಿಗೆ ಭೇಟಿ ನೀಡಿದ ಉದಾಹರಣೆ ಇಲ್ಲ. ಜಾಫರ್ ಷರೀಫ್, ಚಂದ್ರಶೇಖರ್, ದೇವೇಗೌಡ, ತೇಜಸ್ವಿನಿ ಹಾಗೂ ಕುಮಾರಸ್ವಾಮಿ ಆದಿಯಾಗಿ ಎಲ್ಲರೂ ದೆಹಲಿ ಟು ಬೆಂಗಳೂರು ಅಂತ ತಿರುಗಾಡಿಕೊಂಡು ಇದ್ದರು. ಆದರೆ, ಡಿ.ಕೆ.ಸುರೇಶ್ ಸಂಸದರು ಎಂಬುದನ್ನೂ ಮರೆತು ಗ್ರಾಪಂ ಸದಸ್ಯನಂತೆ ಹಳ್ಳಿ ಮಟ್ಟದಲ್ಲಿ ನಿಂತು ಕೆಲಸ ಮಾಡಿದವರು ಎಂದು ಗುಣಗಾನ ಮಾಡಿದರು. ಜಿಲ್ಲೆಯಲ್ಲಿ ನೀರಾವರಿ ವ್ಯವಸ್ಥೆ ಮಾಡಲು ಡಿಕೆ ಸಹೋದರರು ಜಲಾಶಯ ಹಾಗೂ ಕೆರೆಕಟ್ಟೆಗಳನ್ನು ತುಂಬಿಸಲು ಸತ್ತೇಗಾಲ ಯೋಜನೆ ರೂಪಿಸಿದರು. ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಸ್ಥಾಪಿಸಿ ಜನರ ಕುಡಿಯುವ ನೀರಿನ ದಾಹ ತಣಿಸಿದರು. ಅಭಿವೃದ್ಧಿ ಆಗಬೇಕಾದರೆ ಡಿ.ಕೆ.ಸುರೇಶ್‌ರಿಗೆ ಮತ ಕೊಡಿ ಅಂತ ಮತದಾರರಿಗೆ ಮನವರಿಕೆ ಮಾಡಿಕೊಡುವಂತೆ ಕಾರ್ಯಕರ್ತರಿಗೆ ಕಿವಿಮಾತು ಹೇಳಿದರು.

ಮಾಜಿ ಪ್ರಧಾನಿ ದೇವೇಗೌಡರು ಶ್ರಮಪಟ್ಪು ಕಟ್ಟಿದ ಜೆಡಿಎಸ್ ಪಕ್ಷವನ್ನು ಕುಮಾರಸ್ವಾಮಿ ಪ್ರಧಾನಿ ಮೋದಿ ಪಾದದ ಅಡಿಯಲ್ಲಿಟ್ಟು ನಮಸ್ಕಾರ ಮಾಡಿದ್ದಾರೆ. ಇನ್ನು ಕುಮಾರಸ್ವಾಮಿ ಅವರನ್ನು ಬಿಜೆಪಿಯವರು ಮುಖ್ಯಮಂತ್ರಿ ಮಾಡ್ತಾರಾ, ಬಿಜೆಪಿ ಹೇಳಿದಂತೆ ಕೇಳಿಕೊಂಡು ಇರಬೇಕಾಗುತ್ತದೆ ಎಂದರು. ಶ್ರೀಮಂತ ರಾಜಕಾರಣಿಗಳ ಪಟ್ಟಿಯಲ್ಲಿ ಡಿ.ಕೆ.ಶಿವಕುಮಾರ್ ಮಾತ್ರವಲ್ಲದೆ ಕುಮಾರಸ್ವಾಮಿ ಅವರ ಹೆಸರೂ ಇದೆ. ಡಿ.ಕೆ.ಶಿವಕುಮಾರ್ ತಾವು ಸಂಪಾದನೆ ಮಾಡಿದ ಹಣದಲ್ಲಿ ದಾನ ಮಾಡುತ್ತಿದ್ದಾರೆ. ನೀವು ಬೇಕಾದರೆ 10 ರಿಂದ 20 ಸಾವಿರ ಬೆಲೆ ಬಾಳುವ ಗಿಫ್ಟ್‌ಗಳನ್ನು ಕೊಡಿ ಬೇಡ ಅಂದವರು ಯಾರು. ನಿಮ್ಮದೇನಿದ್ದರು ಇನ್ ಕಮಿಂಗ್ ಅಷ್ಟೆ, ಔಟ್ ಗೋಯಿಂಗ್ ಇಲ್ಲ ಎಂದು ಮಾಜಿ ಸಿಎಂ ಕುಮಾರಸ್ವಾಮಿ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು.

ರಾಜಕಾರಣದಲ್ಲಿ ಡವ್ ಮಾಡುವವರು ಮತ್ತು ಕ್ಯಾಸೆಟ್ ತೋರಿಸುವವರನ್ನು ಮತದಾರರು ನಂಬಬಾರದು. ಕುಮಾರಸ್ವಾಮಿರವರಿಗೆ ಯಡಿಯೂರಪ್ಪ ಅವರಿಗೆ ಅಧಿಕಾರ ಬಿಟ್ಟುಕೊಡುವಂತೆ ಹೇಳಿದರು ಕೇಳಲಿಲ್ಲ. ಯೋಗೇಶ್ವರ್ ದೆಹಲಿಯಲ್ಲಿ ಕ್ಯಾಸೆಟ್ ತೋರಿಸಿ ಯಡಿಯೂರಪ್ಪ ಅವರಿಗೆ ಕಣ್ಣೀರು ಹಾಕಿಸಿ ಅಧಿಕಾರದಿಂದ ಕೆಳಗಿಳಿಸಿದರು. ಈಗ ಅವರಿಬ್ಬರು ಒಂದಾಗಿದ್ದಾರೆ ಎಂದು ಬಾಲಕೃಷ್ಣ ಟೀಕಿಸಿದರು.

ಸಭೆಯಲ್ಲಿ ಬಿಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಯರೇಹಳ್ಳಿ ಮಂಜು, ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಗಾಣಕಲ್ ನಟರಾಜ್, ತಾಪಂ ಮಾಜಿ ಅಧ್ಯಕ್ಷ ಜಗದೀಶ್, ಮಹದೇವಯ್ಯ, ಕೂಟಗಲ್ ಗ್ರಾಪಂ ಸದಸ್ಯ ಅರೇಹಳ್ಳಿ ಗಂಗಾಧರ್ ಗೌಡ ಮತ್ತಿತರರು ಉಪಸ್ಥಿತರಿದ್ದರು.