ಸರ್ಕಾರಿ ಆಸ್ಪತ್ರೆಯಲ್ಲಿ 600 ಮಂದಿಗೆ ಶಸ್ತ್ರ ಚಿಕಿತ್ಸೆ

| Published : Jul 01 2024, 01:45 AM IST

ಸರ್ಕಾರಿ ಆಸ್ಪತ್ರೆಯಲ್ಲಿ 600 ಮಂದಿಗೆ ಶಸ್ತ್ರ ಚಿಕಿತ್ಸೆ
Share this Article
  • FB
  • TW
  • Linkdin
  • Email

ಸಾರಾಂಶ

ಅಥಣಿ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದ ಎರಡು ದಿನಗಳ ಶಿಬಿರದಲ್ಲಿ ಸಾವಿರಕ್ಕೂ ಅಧಿಕ ಜನರಿಗೆ ನೇತ್ರ ತಪಾಸಣೆ

ಕನ್ನಡಪ್ರಭ ವಾರ್ತೆ ಅಥಣಿ

ಪಟ್ಟಣದ ಸಾರ್ವಜನಿಕ ತಾಲೂಕು ಆಸ್ಪತ್ರೆಯಲ್ಲಿ ಎರಡು ದಿನಗಳ ಕಾಲ ಹಮ್ಮಿಕೊಳ್ಳಲಾಗಿದ್ದ ಬೃಹತ್ ಉಚಿತ ನೇತ್ರ ತಪಾಸಣಾ ಮತ್ತು ಶಸ್ತ್ರ ಚಿಕಿತ್ಸಾ ಶಿಬಿರ ಮುಕ್ತಾಯವಾಗಿದ್ದು, ಈ ಶಿಬಿರದಲ್ಲಿ 1000 ಜನರಿಗೆ ಯಶಸ್ವಿ ನೇತ್ರ ತಪಾಸಣೆ ಮಾಡಲಾಗಿದೆ. ಅಲ್ಲದೇ, 600 ಜನರು ಕಣ್ಣಿನ ಶಸ್ತ್ರಚಿಕಿತ್ಸೆ ಪಡೆದುಕೊಂಡಿದ್ದಾರೆ. ಎರಡೇ ದಿನಕ್ಕೆ ಶಿಬಿರ ಮುಕ್ತಾಯಗೊಂಡಿದ್ದರಿಂದ ಇನ್ನು 300ಕ್ಕೂ ಅಧಿಕ ಜನರು ತಪಾಸಣೆ ಮತ್ತು ಶಸ್ತ್ರ ಚಿಕಿತ್ಸೆಯ ಅವಕಾಶದಿಂದ ವಂಚಿತರಾಗಬೇಕಾಯಿತು. ಅಂಥವರಿಗೆ ಮುಂದಿನ ಶಿಬಿರದಲ್ಲಿ ಚಿಕಿತ್ಸೆ ನೀಡಲಾಗುವುದು ಎಂದು ತಾಲೂಕ ವೈದ್ಯಾಧಿಕಾರಿ ಡಾ.ಬಸಗೌಡ ಕಾಗೆ ಹೇಳಿದರು.

ರವಿವಾರ ನಡೆದ ಶಿಬಿರದ ಸಮಾರೋಪ ಸಭೆಯಲ್ಲಿ ನೇತ್ರ ಚಿಕಿತ್ಸಾ ತಂಡದ ವೈದ್ಯರಿಗೆ ಮತ್ತು ಸಿಬ್ಬಂದಿಗಳಿಗೆ ಅಭಿನಂದನೆ ಸಲ್ಲಿಸಿದರು. ಈ ವೇಳೆ ಮಾತನಾಡಿದ ಅವರು, ಎರಡು ಬಾರಿ ನಡೆಸಿದ ಶಿಬಿರಗಳಲ್ಲಿ 950ಕ್ಕೂ ಅಧಿಕ ಜನರು ಈ ತಪಾಸಣೆಯ ಲಾಭ ಪಡೆದುಕೊಂಡಿದ್ದರು. ಈಗ ಎರಡು ದಿನಗಳ ಕಾಲ ನಡೆದ ಶಿಬಿರದಲ್ಲಿ 1000 ಕ್ಕಿಂತಲೂ ಅಧಿಕ ಜನರು ನೇತ್ರ ತಪಾಸಣೆ ಮಾಡಲಾಗಿದ್ದು, ಅದರಲ್ಲಿ 600 ಜನರಿಗೆ ಶಸ್ತ್ರ ಚಿಕಿತ್ಸೆ ಮಾಡಲಾಗಿದೆ. ಮತ ಕ್ಷೇತ್ರದ ಶಾಸಕ ಲಕ್ಷ್ಮಣ ಸವದಿಯವರ ಮಾರ್ಗದರ್ಶನ ಮತ್ತು ಕಾಗವಾಡ ಶಾಸಕರಾದ ರಾಜು ಕಾಗೆ ಅವರ ಸಹಕಾರದಿಂದ ಈ ಶಿಬಿರವು ಯಶಸ್ವಿಯಾಗಿ ಜರುಗಿದೆ. ಈ ಉಚಿತ ನೇತ್ರ ತಪಾಸಣಾ ಮತ್ತು ಶಸ್ತ್ರಚಿಕಿತ್ಸೆ ಶಿಬಿರದ ಯಶಸ್ವಿಗೆ ಸಹಕಾರ ನೀಡಿದ ಡಾ.ಕೃಷ್ಣಮೋಹನ ಜಿಂಕಾ ಹಾಗೂ ಅವರ ತಂಡಕ್ಕೆ ಆಸ್ಪತ್ರೆಯ ಎಲ್ಲ ವೈದ್ಯರಿಗೆ, ಸಿಬ್ಬಂದಿ ವರ್ಗಕ್ಕೆ ಧನ್ಯವಾದಗಳನ್ನು ಅರ್ಪಿಸಿದರು.

ಸಾಮಾಜಿಕ ಕಾರ್ಯಕರ್ತ ಪ್ರದೀಪ ನಂದಗಾವ ಮಾತನಾಡಿ, ಶಾಸಕರಿಗೆ ಮತ್ತು ವೈದ್ಯರ ತಂಡಕ್ಕೆ ಕೃತಜ್ಞತೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ರಾಮಗೊಂಡ ಪಾಟೀಲ, ಸುರೇಶ್ ವಾಲಿಕಾರ ಸೇರಿದಂತೆ ಆಸ್ಪತ್ರೆ ವೈದ್ಯರು ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.

-------------------

ಶಿಬಿರದಲ್ಲಿ ತಂದೆ ತಾಯಿಗೆ ಶಸ್ತ್ರಚಿಕಿತ್ಸೆ ಮಾಡಿಸಿ ವೈದ್ಯಾಧಿಕಾರಿ

ಅಥಣಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಉತ್ತಮ ಆಡಳಿತ ನೀಡಿ ಖ್ಯಾತಿ ಗಳಿಸಿರುವ ತಾಲೂಕ ವೈದ್ಯಾಧಿಕಾರಿ ಡಾ.ಬಸಗೌಡ ಕಾಗೆ ಅವರು ತಮ್ಮ ತಂದೆ ತಾಯಿಗೆ ಅಥಣಿ ಪಟ್ಟಣದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ನಡೆದ ಉಚಿತ ನೇತ್ರ ತಪಾಸಣೆ ಶಿಬಿರದಲ್ಲಿ ಶಸ್ತ್ರಚಿಕಿತ್ಸೆ ಮಾಡಿಸುವ ಮೂಲಕ ಸರ್ಕಾರಿ ಅಧಿಕಾರಿಗಳು ಮತ್ತು ವೈದ್ಯರಿಗೆ ಮಾದರಿಯಾಗಿದ್ದಾರೆ. ಸರ್ಕಾರಿ ಸಂಬಳ ಪಡೆಯುವ ಎಷ್ಟೋ ಅಧಿಕಾರಿಗಳು ಸರ್ಕಾರಿ ಸೌಲಭ್ಯಗಳನ್ನು ನಿರ್ಲಕ್ಷ್ಯ ಮಾಡುತ್ತಾರೆ. ಆದರೆ, ಈ ವೈದ್ಯಾಧಿಕಾರಿ ತಮ್ಮ ತಂದೆ ತಾಯಿಯ ನೇತ್ರ ಶಸ್ತ್ರ ಚಿಕಿತ್ಸೆಯನ್ನು ಶಿಬಿರದಲ್ಲಿ ಮಾಡಿಸಿದ್ದು, ಸಾರ್ವಜನಿಕರ ಮೆಚ್ಚುಗೆಗೆ ಕಾರಣವಾಗಿದೆ. ಅಲ್ಲದೇ, ಅಥಣಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಖಾಸಗಿ ಆಸ್ಪತ್ರೆಯಲ್ಲಿ ದೊರಕುವ ಎಲ್ಲ ಆರೋಗ್ಯ ಸೇವೆಗಳು ದೊರಕುತ್ತವೆ ಎಂಬುದಕ್ಕೆ ಇದೇ ಸಾಕ್ಷಿಯಾದಂತಾಗಿದೆ.

------------------------

ಖಾಸಗಿ ಆಸ್ಪತ್ರೆಗಳಲ್ಲಿ ಸಾವಿರಾರು ರೂಪಾಯಿಗಳನ್ನು ಕೊಟ್ಟು ಕಣ್ಣಿನ ಆಪರೇಶನ್ ಮಾಡಿಸಿಕೊಳ್ಳಲು ಸಾಧ್ಯವಾಗಿರಲಿಲ್ಲ. ಉಚಿತ ಕಣ್ಣಿನ ತಪಾಸಣೆ ಹಾಗೂ ಆಪರೇಷನ್ ಶಿಬಿರ ಆಯೋಜಿಸಿ, ಬಡವರಿಗೆ, ವೃದ್ಧರಿಗೆ ಅನುಕೂಲ ಕಲ್ಪಿಸಿದ್ದು ಸಂತಸ ತಂದಿದೆ. ನಮಗ ಕಣ್ಣಿನ ಆಪರೇಶನ್ ಮಾಡಿಸಿ ಬಾಳಲ್ಲಿ ಕಣ್ಣಾಗಿ ಬೆಳಕು ನೀಡಿದ್ದಾರೆ. ದೇವರು ಅವರಿಗೆ ಉನ್ನತ ಸ್ಥಾನ ನೀಡಲಿ.

ಗೌರವ್ವ, ಶಸ್ತ್ರ ಚಿಕಿತ್ಸೆಗೊಳಗಾದ ಮಹಿಳೆ.