ಸಾರಾಂಶ
ಕಿಕ್ಕೇರಿ ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ನೂತನವಾಗಿ ಶಸ್ತ್ರಚಿಕಿತ್ಸೆ ಹಾಗೂ ಉಪಕರಣಗಳ ಕೊಠಡಿ ಉದ್ಘಾಟಿಸಿ ಮಾಡಲಾಗಿದ್ದು, ಹೋಬಳಿಯ ಸುತ್ತಮುತ್ತಲ ಗ್ರಾಮಗಳ ಗರ್ಭಿಣಿಯರು ಆರೋಗ್ಯದಲ್ಲಿ ದೊಡ್ಡ ಸಮಸ್ಯೆಗಳಾದಾಗ ತುರ್ತು ಶಸ್ತ್ರಚಿಕಿತ್ಸೆಗಾಗಿ ದೂರದ ಊರುಗಳಿಗೆ ತೆರಳುವ ಸಮಸ್ಯೆ ಇದರಿಂದ ದೂರವಾಗಿದೆ.
ಕನ್ನಡಪ್ರಭ ವಾರ್ತೆ ಕಿಕ್ಕೇರಿ
ಸಮುದಾಯ ಆರೋಗ್ಯ ಕೇಂದ್ರದಲ್ಲೇ ಗರ್ಭಿಣಿಯರಿಗೆ ಶಸ್ತ್ರ ಚಿಕಿತ್ಸೆಗೆ ಅಗತ್ಯ ಸೌಲಭ್ಯ ಕಲ್ಪಿಸಿ ಉಪಕರಣಗಳ ಕೊಠಡಿಗೆ ಚಾಲನೆ ನೀಡಲಾಗಿದೆ ಎಂದು ಶಾಸಕ ಎಚ್.ಟಿ.ಮಂಜು ತಿಳಿಸಿದರು.ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ನೂತನವಾಗಿ ಶಸ್ತ್ರಚಿಕಿತ್ಸೆ ಹಾಗೂ ಉಪಕರಣಗಳ ಕೊಠಡಿ ಉದ್ಘಾಟಿಸಿ ಮಾತನಾಡಿ, ಹೋಬಳಿಯ ಸುತ್ತಮುತ್ತಲ ಗ್ರಾಮಗಳ ಗರ್ಭಿಣಿಯರು ಆರೋಗ್ಯದಲ್ಲಿ ದೊಡ್ಡ ಸಮಸ್ಯೆಗಳಾದಾಗ ತುರ್ತು ಶಸ್ತ್ರಚಿಕಿತ್ಸೆಗಾಗಿ ದೂರದ ಊರುಗಳಿಗೆ ತೆರಳುವ ಸಮಸ್ಯೆ ಇದರಿಂದ ದೂರವಾಗಿದೆ ಎಂದರು.
ತಾಲೂಕಿನಲ್ಲೆ ಬಲುದೊಡ್ಡ ಹೋಬಳಿ ಕೇಂದ್ರವಾದ ಕಿಕ್ಕೇರಿ ಸುತ್ತಮುತ್ತಾ 80ಕ್ಕೂ ಹೆಚ್ಚಿನ ಹಳ್ಳಿಗಳ ಜನರು ಈ ಆಸ್ಪತ್ರೆಯನ್ನುಆಶ್ರಯಿಸಿದ್ದಾರೆ. ಗರ್ಭಿಣಿಯರಿಗೆ ಸಿಸೇರಿಯನ್ ರೀತಿ ತುರ್ತು ಚಿಕಿತ್ಸೆಗೆ ತಾಲೂಕು ಕೇಂದ್ರ, ಖಾಸಗಿ ಆಸ್ಪತ್ರೆಗೆ ತೆರಳಬೇಕಿತ್ತು. ಇಂದು ಶಸ್ತ್ರಚಿಕಿತ್ಸಾ ಕೊಠಡಿ ಆರಂಭವಾಗಿರುವುದರಿಂದ ರೈತರು, ಬಡ ಮಹಿಳೆಯರು ಇನ್ನು ಮುಂದೆ ಹೊರಗಡೆ ಹೋಗುವ ಸಮಸ್ಯೆ ತಪ್ಪಿದೆ ಎಂದರು.
ರಾಜ್ಯ ಸಹಕಾರ ಮಾರಾಟ ಮಹಾಮಂಡಳ ನಿರ್ದೇಶಕ ಚೋಳೇನಹಳ್ಳಿ ಪುಟ್ಟಸ್ವಾಮಿಗೌಡ ಮಾತನಾಡಿ, ಗ್ರಾಮೀಣ ಪ್ರದೇಶದಿಂದ ಬರುವ ಮಹಿಳೆಯರು, ಪುರುಷ ರೋಗಿಗಳು ಹಾಗೂ ಸಂಬಂಧಿಕರೊಂದಿಗೆ ಆಸ್ಪತ್ರೆ ಸಿಬ್ಬಂದಿ ಸೌಜನ್ಯದಿಂದ ವರ್ತಿಸಿ ತಿಳಿಹೇಳುವ ಕೆಲಸ ಮಾಡಬೇಕು ಎಂದರು.ಇದೇ ವೇಳೆ ಬಡ ರೋಗಿಗಳು ಹೊರಗಡೆ ಹೋಗಲು ಕಷ್ಟವಿದೆ. ರಾತ್ರಿ ವೇಳೆ ವೈದ್ಯರಿಲ್ಲದೆ ಖಾಸಗಿ ಆಸ್ಪತ್ರೆಗೆ ಹೋಗಲು ಸಮಸ್ಯೆಯಾಗಿದೆ. ತುರ್ತು ವೈದ್ಯರು ಇರುವಂತೆ ವ್ಯವಸ್ಥೆ ಮಾಡಿಕೊಡಬೇಕು ಎಂದು ಸಾರ್ವಜನಿಕರು ವಿನಂತಿಸಿದರು. ಶಾಸಕರು ವೈದ್ಯರ ನೇಮಕದ ಭರವಸೆ ನೀಡಿದರು.
ಈ ವೇಳೆ ಕೆಪಿಎಸ್ ಶಾಲೆ ಎಸ್‌ಡಿಎಂಸಿ ಅಧ್ಯಕ್ಷ ಮುಖಂಡರಾದ ಐಕನಹಳ್ಳಿ ಕೃಷ್ಣೇಗೌಡ, ಜೆಡಿಎಸ್ ಹೋಬಳಿ ಅಧ್ಯಕ್ಷ ಕಾಯಿ ಮಂಜೇಗೌಡ, ಕಿಕ್ಕೇರಿ ಕೃಷಿ ಪತ್ತಿನ ಸಹಕಾರ ಸಂಘ ಮಾಜಿ ಅಧ್ಯಕ್ಷ ಶೇಖರ್, ಮುಖಂಡ ಐನೋರಹಳ್ಳಿ ಮಲ್ಲೇಶ್, ಗ್ರಾಪಂ ಅಧ್ಯಕ್ಷ ಕೆ.ಜಿ.ಪುಟ್ಟರಾಜು, ಉಪಾಧ್ಯಕ್ಷೆ ಜ್ಯೋತಿ, ಸದಸ್ಯ ಎಸ್.ಕೆ.ಬಾಲಕೃಷ್ಣ, ಕೆ.ಆರ್.ರಾಜೇಶ್, ತಾಲೂಕು ಆರೋಗ್ಯಾಧಿಕಾರಿ ಡಾ.ಅಜಿತ್, ಡಾ.ಸೌಜನ್ಯ, ಡಾ.ಸುಪ್ರೀತ್, ಡಾ.ಚಂದನ್, ಡಾ.ಋತಿಕ್, ಆರೋಗ್ಯ ಶುಶ್ರೂಷಕಿಯರು, ಆರೋಗ್ಯ ಸಿಬ್ಬಂದಿ ರಂಗಸ್ವಾಮಿ, ನಾಗೇಂದ್ರ, ಮಹೇಶ್, ಸುಂದರ್, ಶಿವರಾಜ್, ಜಗದೀಶ್, ಪ್ರಕಾಶ್, ಕುಮುದಾ, ಮಂಜುಳಾ, ಸವಿತಾ, ಜ್ಯೋತಿ, ಅನುಶ್ರೀ, ಆಶಾ ಕಾರ್ಯಕರ್ತೆಯರು ಇದ್ದರು.