ಕಾರವಾರ ಮೆಡಿಕಲ್ ಕಾಲೇಜಿಗೆವೈದ್ಯ ಮಾಡುವರೇ ಸರ್ಜರಿ

| Published : Nov 09 2023, 01:03 AM IST

ಸಾರಾಂಶ

ಸುಸಜ್ಜಿತ ಆಸ್ಪತ್ರೆಗಾಗಿ ಹೋರಾಟ ಮಾಡುತ್ತಿದ್ದಾರೆ. ನಾವು ಮೊದಲು ಈ ಕಾಲೇಜನ್ನು ಸಮಗ್ರ ಅಭಿವೃದ್ಧಿ ಮಾಡಿಕೊಂಡು ಬಳಿಕ ಹೊನ್ನಾವರ ಅಥವಾ ಕುಮಟಾ ಭಾಗದಲ್ಲಿ ಮತ್ತೊಂದು ಸುಸಜ್ಜಿತ ಆಸ್ಪತ್ರೆ ನಿರ್ಮಾಣ ಮಾಡಬೇಕು ಎಂದು ಯೋಚಿಸಿದ್ದೇವೆ.

ಕಾರವಾರ:

ಇಲ್ಲಿನ ವೈದ್ಯಕೀಯ ಕಾಲೇಜು ಮಂಜೂರಾಗಿ ೧೦ ವರ್ಷ ಕಳೆದರೂ ಜನರಿಗೆ ಅನುಕೂಲ ಆಗುತ್ತಿಲ್ಲ ಎಂದು ಅಸಮಾಧಾನ ಹೊರಹಾಕಿದ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ವೈದ್ಯ, ಈ ಕಾಲೇಜನ್ನು ಸಮಗ್ರ ಅಭಿವೃದ್ಧಿಪಡಿಸಿದ ಬಳಿಕ ಹೊನ್ನಾವರ ಅಥವಾ ಕುಮಟಾ ಭಾಗದಲ್ಲಿ ಸುಸಜ್ಜಿತ ಆಸ್ಪತ್ರೆ ನಿರ್ಮಾಣ ಮಾಡಬೇಕು ಎಂದು ಯೋಚಿಸಿದ್ದೇವೆ ಎಂದರು.

ನಗರದ ವೈದ್ಯಕೀಯ ಕಾಲೇಜಿನ ವೈದ್ಯಾಧಿಕಾರಿಗಳೊಂದಿಗೆ ಬುಧವಾರ ನಡೆದ ಸಭೆಯಲ್ಲಿ ಮಾತನಾಡಿ, ಸುಸಜ್ಜಿತ ಆಸ್ಪತ್ರೆಗಾಗಿ ಹೋರಾಟ ಮಾಡುತ್ತಿದ್ದಾರೆ. ನಾವು ಮೊದಲು ಈ ಕಾಲೇಜನ್ನು ಸಮಗ್ರ ಅಭಿವೃದ್ಧಿ ಮಾಡಿಕೊಂಡು ಬಳಿಕ ಹೊನ್ನಾವರ ಅಥವಾ ಕುಮಟಾ ಭಾಗದಲ್ಲಿ ಮತ್ತೊಂದು ಸುಸಜ್ಜಿತ ಆಸ್ಪತ್ರೆ ನಿರ್ಮಾಣ ಮಾಡಬೇಕು ಎಂದು ಯೋಚಿಸಿದ್ದೇವೆ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದು ೫ ತಿಂಗಳು ಕಳೆದಿದೆ. ಯಾರೊಬ್ಬರೂ ಇಂತಹ ವ್ಯವಸ್ಥೆ ಆಗಬೇಕು ಎಂದು ನಮ್ಮ ಬಳಿ, ಸ್ಥಳೀಯ ಶಾಸಕರ ಹತ್ತಿರ ಕೇಳಲಿಲ್ಲ. ನಿಮ್ಮ ಮನಸ್ಥಿತಿ ನೋಡಿದರೆ ಆಸಕ್ತಿ ಇಲ್ಲದಂತೆ ಕಾಣುತ್ತದೆ ಎಂದು ಕಿಡಿಕಾರಿದರು.ಎಂಆರ್‌ಐ ಯಂತ್ರಕ್ಕೆ ಕ್ಯಾಬಿನೆಟ್ ಒಪ್ಪಿಗೆ ಸಿಕ್ಕಿದೆ. ಯಂತ್ರ ಬರುವುದು ಬಾಕಿದೆ. ನಮ್ಮ ಸರ್ಕಾರ ಬಂದಮೇಲೆ ಯಾವುದೇ ಪ್ರಸ್ತಾವನೆ ಕಾಲೇಜಿನಿಂದ ಸರ್ಕಾರಕ್ಕೆ ಹೋಗಿಲ್ಲ. ಆದರೂ ನಮ್ಮ ಕರ್ತವ್ಯ ಮರೆಯಬಾರದು. ಜನರಿಗೆ ತೊಂದರೆ ಆಗಬಾರದು ಎಂದು ಎಂಆರ್‌ಐ ಯಂತ್ರದ ಪ್ರಸ್ತಾವನೆ ಸಲ್ಲಿಸಿ ಮಂಜೂರಿ ಮಾಡಿಸಿಕೊಂಡಿದ್ದೇವೆ ಎಂದರು.ಶಾಸಕ ಸತೀಶ ಸೈಲ್, ಟ್ರಾಮಾಸೆಂಟರ್‌ಗೆ ಇಲ್ಲಿನ ವೈದ್ಯರು ನಿರಾಸಕ್ತಿ ತೋರುತ್ತಿದ್ದಾರೆ. ಜಾಗ ನೀಡಿ ಎಂದರೂ ನೆಪ ಹೇಳುತ್ತಿದ್ದಾರೆ. ಈಚೆಗೆ ದೊಡ್ಡ ಪ್ರಮಾಣದಲ್ಲಿ ಕನ್ನಡ ರಾಜ್ಯೋತ್ಸವ ಆಚರಿಸಿದ್ದಾರೆ. ಸೌಜನ್ಯಕ್ಕೂ ಸ್ಥಳೀಯ ಶಾಸಕರನ್ನು ಆಹ್ವಾನಿಸಿಲ್ಲ. ಸಚಿವರು, ಶಾಸಕರು ಜಿಲ್ಲಾಧಿಕಾರಿ ಯಾರೂ ಇವರಿಗೆ ಸಂಬಂಧವಿಲ್ಲ. ಅವರದ್ದೇ ಬೇರೆ ಆಡಳಿತ ವ್ಯವಸ್ಥೆಯಿದೆ. ನಾವು ಗಂಭೀರವಾಗಿ ಪರಿಗಣಿಸದೇ ಇದ್ದರೆ ನಮ್ಮ ಜಿಲ್ಲೆಗೆ ಕೆಟ್ಟ ಹೆಸರು ಬರುತ್ತದೆ ಎಂದು ಹೇಳಿದರು.

ಡಾ. ಪೂರ್ಣಿಮಾ ಮಾತನಾಡಿ, ೨೦೧೪ರಿಂದ ಈ ಕಾಲೇಜಿನಲ್ಲಿ ಕೆಲಸ ಮಾಡುತ್ತಿದ್ದು, ಹಿರಿಯ ವೈದ್ಯರನ್ನು ಗಣನೆಗೆ ತೆಗೆದುಕೊಳ್ಳುವುದಿಲ್ಲ. ನಾನು ಪ್ರಶ್ನೆ ಮಾಡಲು ಹೋದರೆ ನಮ್ಮನ್ನು ಟಾರ್ಗೆಟ್ ಮಾಡುತ್ತಾರೆ. ಅನಗತ್ಯವಾಗಿ ನಮಗೆ ಕಿರುಕುಳ ನೀಡುತ್ತಾರೆ ಎಂದು ಆರೋಪಿಸಿದರು.

ಡಾ. ಸವಿತಾ, ಡಾ. ಗಣೇಶ, ಡಾ. ಹೇಮಗಿರಿ ಕೂಡಾ ಕಾಲೇಜಿನ ಸಮಸ್ಯೆಗಳ ಬಗ್ಗೆ ಸಚಿವರಿಗೆ ತಿಳಿಸಿದರು. ಸೈಲ್, ನೀವು ನಿಮ್ಮದಿಯಿಂದ ಇಲ್ಲದಿದ್ದರೆ ರೋಗಿಗಳನ್ನು ಗುಣಪಡಿಸಲು ಸಾಧ್ಯವಿಲ್ಲ. ನಿಮ್ಮ ಜೀವಿತಾವಧಿ ಕೊನೆಯವರಿಗೂ ಜನರನ್ನು ಬದುಕಿಸಬಹುದು. ಬೇರೆ ಯಾರಿಗೂ ಅವಕಾಶವಿಲ್ಲ. ವೈದ್ಯರಿಗೊಂದೆ ಈ ಒಂದೇ ಅವಕಾಶ ಇರುತ್ತದೆ ಎಂದರು.

ಸಚಿವರು ಟೆಂಡರ್ ಯಾರು ಕರೆಯುತ್ತಾರೆ ಎಂದು ಕೇಳಿದಾಗ, ಅಕೌಂಟ್ ವಿಭಾಗದಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿರುವ ಸಿಬ್ಬಂದಿ ಒಬ್ಬರು ಬಂದರು. ಇದರಿಂದ ಕೋಪಗೊಂಡ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ, ಕಾಯಂ ಹುದ್ದೆ ಮಂಜೂರಾತಿ ಇಲ್ಲವೇ? ಹೊರಗುತ್ತಿಗೆ ಸಿಬ್ಬಂದಿ ಕರೆಯುತ್ತಿರಿ ಎಂದು ಹೇಳಿದರು. ಡೀನ್ ಡಾ. ಗಜಾನನ ನಾಯಕ, ಕಾಯಂ ಸಿಬ್ಬಂದಿ ಇಲ್ಲ ಎಂದು ಉತ್ತರಿಸಿದರು. ಟೆಂಡರ್ ಯಾರು ಕರೆಯುತ್ತಾರೆ ಎಂದರೆ ಅವರಿವರ ಬಗ್ಗೆ ಹೇಳಿದರು. ಆಗ ಡಿಸಿ ಕಾಲೇಜಿನ ಮುಖ್ಯ ಆಡಳಿತಾಧಿಕಾರಿಯಾಗಿರುವ ಕೆಎಎಸ್ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು. ಕೆಎಎಸ್ ಆಫೀಸರಾಗಿ ನಿಮಗೆ ಜವಾಬ್ದಾರಿ ಇಲ್ಲವೇ? ಕಾಲೇಜಿನ ಕುರಿತಾಗಿ ನಿಮ್ಮ ಕಡೆಯಿಂದ ಯಾವುದೇ ಮಾಹಿತಿ ಇಲ್ಲ. ನಾವಾಗಿಯೇ ಕೇಳಿದರೂ ನೀವು ಏನು ಬೇಕು ಹೇಳುವುದಿಲ್ಲ ಎಂದು ಕಿಡಿಕಾದರು.ಸಚಿವ ಮಂಕಾಳು ವೈದ್ಯ, ಪ್ರತಿ ತಿಂಗಳು ಕಾಲೇಜಿನಲ್ಲಿ ಸಭೆ ನಡೆಸುತ್ತೇವೆ. ಕಾಟಾಚಾರಕ್ಕೆ ನಾವು ಇಲ್ಲಿಗೆ ಬಂದಿಲ್ಲ. ಎಲ್ಲಾ ವ್ಯವಸ್ಥೆಯೂ ಸರಿಯಾಗಬೇಕು. ಯಾರಿಗೆ ಕೆಲಸ ಮಾಡಲು ಮನಸ್ಸಿಲ್ಲವೆಂದು ಹೇಳೀದರೆ ಅವರನ್ನು ಕಳಿಸುತ್ತೇವೆ. ವೈದ್ಯಕೀಯ ಕಾಲೇಜಿನ ಪ್ರಯೋಜನ ಜನರಿಗೆ ಸಿಗಬೇಕು. ಯಾರೇ ತಪ್ಪು ಮಾಡಿದ್ದು ಕಂಡರೂ ಮುಲಾಜಿಲ್ಲದೇ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಎಚ್ಚರಿಕೆ ನೀಡಿದರು.ಜಿಲ್ಲಾ ಶಸ್ತçಚಿಕಿತ್ಸಕ ಡಾ. ಶಿವಾನಂದ ಕುಡ್ತಳಕರ ಇದ್ದರು.