ಸಾರಾಂಶ
ಕನ್ನಡಪ್ರಭ ವಾರ್ತೆ, ತುಮಕೂರುರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರು ವಿಧಾನಸಭಾ ಕ್ಷೇತ್ರಗಳ ಅಭಿವೃದ್ಧಿ ಬಗ್ಗೆ ಶಾಸಕರೊಂದಿಗೆ ಚರ್ಚೆ ನಡೆಸಿದ್ದು, ಏನಾದರೂ ಅನುದಾನ ಕೊರತೆಗಳಿದ್ದರೆ ಆ ಬಗ್ಗೆ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಲಿದ್ದಾರೆ. ಇದಕ್ಕೆ ವಿಶೇಷ ಅರ್ಥ ಕಲ್ಪಿಸುವ ಅಗತ್ಯವಿಲ್ಲ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ತಿಳಿಸಿದರು. ಅವರು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸ್ವಾಭಾವಿಕವಾಗಿ ರಾಜಕೀಯವಾಗಿ ಎರಡು ಅಭಿಪ್ರಾಯಗಳು ಇದ್ದೇ ಇರುತ್ತವೆ. ಇದು ಎಲ್ಲ ಪಕ್ಷಗಳಲ್ಲೂ ಸರ್ವೇ ಸಾಮಾನ್ಯ ಎಂದರು.ಸುರ್ಜೇವಾಲಾ ಅವರು ಶಾಸಕರೊಂದಿಗೆ ಸಭೆ ನಡೆಸುತ್ತಿರುವುದು ಕ್ಷೇತ್ರಗಳ ಅಭಿವೃದ್ಧಿ ವಿಚಾರದ ಕುರಿತು ಮಾಹಿತಿ ಪಡೆದುಕೊಳ್ಳಲು ಅಷ್ಟೇ ಎಂದರು. ಸಿಗಂಧೂರು ಸೇತುವೆ ಉದ್ಘಾಟನೆಗೆ ಯಾರ ವಿರೋಧವೂ ಇಲ್ಲ. ಇದು ಕೇಂದ್ರ ಸರ್ಕಾರದ ಯೋಜನೆಯಾಗಿರುವುದರಿಂದ ಅವರೇ ಬಂದು ಉದ್ಘಾಟನೆ ಮಾಡಲು ಮುಂದಾಗಿದ್ದಾರೆ. ಈ ಉದ್ಘಾಟನೆಯನ್ನು ಮುಂದಕ್ಕೆ ಹಾಕಿ ಎಂದಷ್ಟೇ ಮುಖ್ಯಮಂತ್ರಿಗಳು ಪತ್ರ ಬರೆದಿದ್ದಾರೆ ಎಂದು ಅವರು ಈ ಸೇತುವೆ ಉದ್ಘಾಟನೆ ಸಂಬಂಧ ರಾಜ್ಯ ಸರ್ಕಾರದ ವಿರೋಧದ ಬಗ್ಗೆ ಸಮರ್ಥಿಸಿಕೊಂಡರು.
ಸಾಮಾನ್ಯವಾಗಿ ಕೇಂದ್ರ ಸರ್ಕಾರದ ಯೋಜನೆಗಳಲ್ಲಿ ರಾಜ್ಯ ಸರ್ಕಾರದ್ದು ಪಾಲು ಇರುತ್ತದೆ. ಕೇಂದ್ರ ಒಂದೇ ಮಾಡಲು ಸಾಧ್ಯವಿಲ್ಲ. ಕೇಂದ್ರ ಮತ್ತು ರಾಜ್ಯ ಸರ್ಕಾರ ಎರಡು ಒಟ್ಟಿಗೆ ಕೆಲಸ ಮಾಡಬೇಕಾಗುತ್ತದೆ ಎಂದು ಅವರು ಹೇಳಿದರು. ಒಂದೊಂದು ಬಾರಿ ಮುಖ್ಯಮಂತ್ರಿಗಳು ಉದ್ಘಾಟನಾ ಕಾರ್ಯಕ್ರಮಗಳಿಗೆ ಹೋಗಲು ಸಾಧ್ಯವಾಗದಿದ್ದಾಗ ನಮ್ಮಲ್ಲೇ ಇರುವ ಒಬ್ಬರು ಸಚಿವರೊಬ್ಬರನ್ನು ನಿಯೋಜಿಸುತ್ತಾರೆ. ಇದು ರಾಜ್ಯ ಸರ್ಕಾರದ ಪದ್ದತಿ. ಆದರೆ ಎಲ್ಲೋ ಒಂದು ಕಡೆ ಈ ವಿಚಾರದಲ್ಲಿ ಕಮ್ಯುನಿಕೇಷನ್ ಗ್ಯಾಪ್ ಆಗಿರಬಹುದು. ಅದನ್ನು ಸರಿಪಡಿಸಿಕೊಂಡರಾಯಿತು ಎಂದರು.ಆಪರೇಷನ್ ಬಿಜೆಪಿ ಆಗುತ್ತದೆ ಎಂಬ ಕಾಶಪ್ಪನವರು ಹೇಳಿಕೆ ನೀಡಿದ್ದಾರೆ ಎಂಬ ಸುದ್ದಿಗಾರರ ಪ್ರಶ್ನೆಗೆ, ಕಾಶಂಪ್ಪನವರ ಹೇಳಿಕೆ ಬಗ್ಗೆ ನನಗೆ ಗೊತ್ತಿಲ್ಲ, ಆ ಬಗ್ಗೆ ಅವರನ್ನೇ ಕೇಳಬೇಕು ಎಂದರು.ಪೊಲೀಸ್ ಇಲಾಖೆಯಲ್ಲಿ ಮೂರು ಪಾಳಿಯಲ್ಲಿ ಕೆಲಸ ಮಾಡಿಸುವ ಬಗ್ಗೆ ಇನ್ನು ಮಾತುಕತೆ ನಡೆಸಲಾಗುತ್ತಿದೆ. ಎಲ್ಲ ಸಾಧಕ-ಬಾಧಕಗಳನ್ನು ಪರಿಶೀಲನೆ ಮಾಡಿ ನಂತರ ಆ ಬಗ್ಗೆ ನಿರ್ಧಾರ ಮಾಡಲಾಗುವುದು ಎಂದು ಹೇಳಿದರು. ಮೂರು ಪಾಳಿಯಲ್ಲಿ ಕೆಲಸ ಮಾಡುವ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ಸ್ಥಿತಿಗತಿಯೂ ನೋಡಬೇಕಲ್ಲವೆ, ದಿಢೀರನೆ ಕ್ರಮ ಕೈಗೊಳ್ಳಲು ಆಗುವುದಿಲ್ಲ ಎಂದರು.
ತುಮಕೂರು ಸ್ಟೇಡಿಯಂ ನಿರ್ವಹಣೆಗೆ ಒಂದು ಸ್ಕೀಂನ ಅಳವಡಿಸಿಕೊಳ್ಳುವ ಸಂಬಂಧ ಚಿಂತನೆ ನಡೆಸಲಾಗುತ್ತಿದೆ. ನಿರ್ವಹಣೆಗೆ ಇಲಾಖೆಯಿಂದ ಹಣ ಕೊಡುತ್ತಿಲ್ಲ ಎಂಬ ಕೂಗು ಕೇಳಿ ಬರುತ್ತಿತ್ತು. ಹಾಗಾಗಿ ಬೆಂಗಳೂರಿನ ಸ್ಟೇಡಿಯಂ ನಿರ್ವಹಣೆಗೆ ಅನುಸರಿಸುತ್ತಿರುವ ಮಾರ್ಗವನ್ನೇ ಇಲ್ಲು ಅನುಸರಿಸೋಣ ಎಂಬ ಚಿಂತನೆ ಇದೆ ಎಂದರು. ತುಮಕೂರನ್ನು ವ್ಯವಸ್ಥಿತವಾಗಿ ವಿಸ್ತರಣೆ ಮಾಡಲು ೧೪ ಪಂಚಾಯ್ತಿಗಳನ್ನು ಮಹಾನಗರ ಪಾಲಿಕೆ ವ್ಯಾಪ್ತಿಗೆ ಸೇರ್ಪಡೆ ಮಾಡಿಕೊಳ್ಳುವ ಸಂಬಂಧ ಚಿಂತನೆ ನಡೆಸಲಾಗಿದೆ. ಮುಂದಿನ ದಿನಗಳಲ್ಲಿ ಈ ಕುರಿತು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದರು.