ಸಾರಾಂಶ
ಕನ್ನಡಪ್ರಭ ವಾರ್ತೆ ಸುರಪುರ
ಸೋಮವಾರದಿಂದ ರಾಜ್ಯಾದ್ಯಂತ ಎಸ್ಸೆಸ್ಸೆಲ್ಸಿ ಪರೀಕ್ಷೆಗಳು ಆರಂಭಗೊಳ್ಳಲಿದ್ದು, ಸುರಪುರ ಮತ್ತು ಹುಣಸಗಿ ತಾಲೂಕುಗಳೆರಡರಲ್ಲಿನ 3064 ಬಾಲಕರು ಹಾಗೂ 2871-ಬಾಲಕಿಯರು ಸೇರಿ 5935 ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಲಿದ್ದಾರೆ.ಸುರಪುರ ನಗರದಲ್ಲಿ 7, ಕೆಂಭಾವಿಯಲ್ಲಿ 4, ಹುಣಸಗಿಯಲ್ಲಿ 2, ಕಕ್ಕೇರಾದಲ್ಲಿ 1, ಕೊಡೇಕಲ್ನಲ್ಲಿ 1, ನಾರಾಯಣಪುರದಲ್ಲಿ 1 ಹಾಗೂ ವಜ್ಜಲದಲ್ಲಿ 1 ಸೇರಿದಂತೆ ಒಟ್ಟು 17 ಪರೀಕ್ಷಾ ಕೇಂದ್ರಗಳಲ್ಲಿ ಸೋಮವಾರದಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷೆ ನಡೆಯಲಿದೆ. 326 ಶಿಕ್ಷಕರನ್ನು ಪರೀಕ್ಷೆಗೆ ನಿಯೋಜಿಸಲಾಗಿದೆ. ಎಲ್ಲ ಪರೀಕ್ಷಾ ಕೇಂದ್ರಗಳಿಗೆ ಮೂಲಸೌಲಭ್ಯ, ಶೌಚಾಲಯ, ಟೇಬಲ್ ಡೆಸ್ಕ್, ಮಧ್ಯಾಹ್ನದ ಬಿಸಿಯೂಟ, ವೈದ್ಯಕೀಯ ಸಿಬ್ಬಂದಿ ನಿಯೋಜಿಸಲಾಗಿದೆ.
ಸೂಕ್ಷ್ಮ ಕೇಂದ್ರ:ಸುರಪುರ ಬ್ಲಾಕ್‌ನಲ್ಲಿ ಸುರಪುರ ಬಾಲಕರ ಪ್ರೌಢಶಾಲೆ, ಕೆಂಭಾವಿ ಬಾಲಕರ ಪ್ರೌಢಶಾಲೆ, ನಾರಾಯಣಪುರ ಪ್ರೌಢಶಾಲೆ, ಕೊಡೇಕಲ್ ಬಾಲಕರ ಪ್ರೌಢಶಾಲೆಗಳನ್ನು ಅತಿ ಸೂಕ್ಷ್ಮ ಪರೀಕ್ಷಾ ಕೇಂದ್ರಗಳಾಗಿ ಗುರುತಿಸಲಾಗಿದೆ. ಸುರಪುರದ ಅಂಬೇಡ್ಕರ್ ಶಾಲೆ, ಹೇಮರೆಡ್ಡಿ ಮಲ್ಲಮ್ಮ ಪ್ರೌಢಶಾಲೆ, ಹುಣಸಗಿ ಬಾಲಕರ ಶಾಲೆ, ಕಕ್ಕೇರಾ ಬಾಲಕರ ಶಾಲೆಗಳನ್ನು ಸೂಕ್ಷ್ಮ ಎಂದು ಗುರುತಿಸಲಾಗಿದೆ.
300ಕ್ಕಿಂತ ಹೆಚ್ಚು ಕ್ಯಾಮೆರಾ:ನಕಲು ಅಕ್ರಮ ತಡೆಗಟ್ಟುವ ನಿಟ್ಟಿನಲ್ಲಿ ಸಿಸಿಟಿವಿ ಕ್ಯಾಮೆರಾಗಳ ಕಣ್ಗಾವಲು ಹಾಕಲಾಗಿದೆ. 300ಕ್ಕಿಂತ ಹೆಚ್ಚು ಸಿಸಿ ಕ್ಯಾಮೆರಾಗಳನ್ನು ಪರೀಕ್ಷಾ ಕೇಂದ್ರದಲ್ಲಿ ಅಳವಡಿಸಲಾಗಿದೆ. ವೆಬ್ ಕಾಸ್ಟಿಂಗ್ ಮೂಲಕ ಪರೀಕ್ಷೆ ಪ್ರಕ್ರಿಯೆಯ ನೇರಪ್ರಸಾರವನ್ನು ಬಿಇಓ ಮತ್ತು ಡಿಡಿಪಿಪಿ, ಡಿಸಿ, ಜಿಪಂ ಸಿಇಒ, ಅಪರ ಆಯುಕ್ತರು ಶಿಕ್ಷಣ ಇಲಾಖೆ ಕಲಬುರಗಿ ಅಧಿಕಾರಿಗಳು ನೇರವಾಗಿ ವೀಕ್ಷಿಸಬಹುದು.
17 ಪರೀಕ್ಷಾ ಕೇಂದ್ರಗಳಲ್ಲಿ 300ಕ್ಕೂ ಹೆಚ್ಚು ಸಿಸಿ ಕ್ಯಾಮೆರಾ ಅಳವಡಿಸಲಾಗಿದೆ. ಪರೀಕ್ಷೆಗೆ 326 ಶಿಕ್ಷಕರನ್ನು ನಿಯೋಜಿಸಲಾಗಿದೆ. ಸುಸೂತ್ರ ಮತ್ತು ನ್ಯಾಯ ಸಮ್ಮತ ಪರೀಕ್ಷೆ ನಡೆಸಲು ಸಿದ್ಧತೆ ನಡೆಸಲಾಗಿದೆ.ಯಲ್ಲಪ್ಪ ಕಾಡ್ಲುರು, ಕ್ಷೇತ್ರ ಶಿಕ್ಷಣಾಧಿಕಾರಿ, ಸುರಪುರ