ಸಾರಾಂಶ
ನಾಗರಾಜ್ ನ್ಯಾಮತಿ
ಕನ್ನಡಪ್ರಭ ವಾರ್ತೆ ಸುರಪುರಎಸ್ಟಿ ಮೀಸಲಾತಿ-36 ಶೋರಾಪುರ (ಸುರಪುರ) ಮತಕ್ಷೇತ್ರದಲ್ಲಿ ಲೋಕಾಸಭೆ ಮತ್ತು ಉಪಚುನಾವಣೆ ಏಕಕಾಲದಲ್ಲಿ ನಡೆಯುತ್ತಿರುವುದರಿಂದ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷದ ಅಭ್ಯರ್ಥಿಗಳು ಅಬ್ಬರದ ಪ್ರಚಾರ ನಡೆಸುತ್ತಿದ್ದಾರೆ.
ಲೋಕಸಭಾ ಮತ್ತು ಉಪ ಚುನಾವಣೆ ಹುಣಸಗಿ ಮತ್ತು ಸುರಪುರ ಅವಳಿ ತಾಲೂಕುಗಳಿಂದ 4.04 ಲಕ್ಷ ಜನಸಂಖ್ಯೆಯಿಂದ 2.81 ಲಕ್ಷ ಮತದಾರರಿದ್ದಾರೆ. ಸುಮಾರು ಎರಡು ದಶಕಗಳಿಂದ ಕೈ ಮತ್ತು ಕಮಲದ ನಡುವೆಯೇ ಜಿದ್ದಾಜಿದ್ದಿ ನಡೆಯುತ್ತಿದೆ.ಅನುಭವಿ: ರಾಜಕೀಯದಲ್ಲಿ ಪಳಗಿದ ಬಿಜೆಪಿ ಅಭ್ಯರ್ಥಿ ನರಸಿಂಹ ನಾಯಕ (ರಾಜೂಗೌಡ), ಇವರು ಚಿಕ್ಕ ವಯಸ್ಸಿನಲ್ಲೇ ಕೊಡೇಕಲ್ ಜಿಲ್ಲಾ ಪಂಚಾಯತ್ ಕ್ಷೇತ್ರದಿಂದ ಆಯ್ಕೆಯಾಗಿ ರಾಜಕೀಯ ಪ್ರವೇಶ ಮಾಡಿದವರು. ಬಳಿಕ ಮೂರು ಬಾರಿ ಶಾಸಕರಾಗಿ, ಒಂದು ಬಾರಿ ಸಚಿವರಾಗಿ ಕಾರ್ಯನಿರ್ವಹಸಿದ್ದಾರೆ. ಅಲ್ಲದೆ ಪ್ರಸ್ತುತ ಬಿಜೆಪಿಯ ರಾಜ್ಯ ಉಪಾಧ್ಯಕ್ಷರಾಗಿ ನೇಮಕವಾಗಿದ್ದಾರೆ. ಜತೆಗೆ ರಾಜಕೀಯ ಪಟ್ಟುಗಳನ್ನು ಕರಗತ ಮಾಡಿಕೊಂಡು ಸುರಪುರ ಮತಕ್ಷೇತ್ರದ ಜನರ ನಾಡಿಮಿಡಿತವನ್ನು ಬಲ್ಲವರು.
ರಾಜಕೀಯ ಕುಟುಂಬದ ಹಿನ್ನೆಲೆ: ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ರಾಜಾ ವೇಣುಗೋಪಾಲ ನಾಯಕ ಅವರ ತಂದೆ ಶಾಸಕ ರಾಜಾ ವೆಂಕಟಪ್ಪ ನಾಯಕ ಅವರ ಗರಡಿಯ ಅಖಾಡದಲ್ಲಿ ಬೆಳೆದವರು. ತಾತಾನವರಾಧ ರಾಜಾ ಕುಮಾರ ನಾಯಕ ಅವರು ಸಹ ಶಾಸಕರಾಗಿದ್ದವರು. ಇದರಿಂದಾಗಿ ವೇಣಗೋಪಾಲ ನಾಯಕ ಅವರಿಗೆ ಮೊದಲಿನಿಂದಲೂ ರಾಜಕೀಯ ಕುಟುಂಬದ ನಂಟು ಇದೆ. ತಾತಾ ಮತ್ತು ತಂದೆಯವರ ರಾಜಕೀಯದ ನಂಟಿದ್ದು, ಜನರ ಮಸ್ತಕವನ್ನು ಅರಿತರಿವರು.ಅನುಕಂಪ-ಗ್ಯಾರಂಟಿ: ಶಾಸಕ ರಾಜಾ ವೆಂಕಟಪ್ಪ ನಾಯಕ ಅಕಾಲಿಕ ಮರಣ ಸುರಪುರ ಮತಕ್ಷೇತ್ರದಲ್ಲಿ ಉಪಚುನಾವಣೆ ಎದುರಾಗಿದೆ. ಶಾಸಕರ ಸಾವು ಯಾರೊಬ್ಬರೂ ನಿರೀಕ್ಷಿಸಿರಲಿಲ್ಲ. ಆದ್ದರಿಂದ ಕ್ಷೇತ್ರದ ಜನತೆಯೂ ಶಾಸಕರ ಸಾವಿಗೆ ಮರುಗುತ್ತಿದೆ. ಆದ್ದರಿಂದ ಪುತ್ರ ವೇಣುಗೋಪಾಲ ಉಪಚುನಾವಣೆಗೆ ಧುಮುಕಿದ್ದು, ಅನುಕಂಪ ಅವರ ಕೈ ಹಿಡಿಯಲಿದೆ. ರಾಜ್ಯ ಸರಕಾರವೂ ಚುನಾವಣೆಯಲ್ಲಿ ಕೊಟ್ಟಂತ ಗ್ಯಾರಂಟಿಗಳನ್ನು ಅನುಷ್ಠಾನಗೊಳಿಸಿದೆ. ಇದರಿಂದ ಕ್ಷೇತ್ರದಲ್ಲಿ ಅನುಕಂಪದ ಅಲೆಯಿದೆ. ಇದನ್ನು ಯೋಜಿಸಿಕೊಂಡು ಮತಯಾಚಿಸುತ್ತಿದ್ದಾರೆ.
ಮೋದಿ ಅಲೆ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇಡೀ ವಿಶ್ವವೇ ಬೆರಗುಗೊಳಿಸುವಂತೆ ಆಡಳಿತ ನೀಡಿದ್ದಾರೆ. ಕೇಂದ್ರ ಸರಕಾರದ ಹಲವಾರು ಅಭಿವೃದ್ಧಿ ಯೋಜನೆಗಳು, ಹಿಂದಿನ ರಾಜ್ಯ ಬಿಜೆಪಿ ಮಾಡಿರುವ ಅಭಿವೃದ್ಧಿ ಕಾರ್ಯಗಳು, ತಮ್ಮ ಆಡಳಿತ ಅವಧಿಯಲ್ಲಿ ರಾಜೂಗೌಡ ತಂದ ಅನುದಾನ, ಅಭಿವೃದ್ಧಿ ಕಾಮಗಾರಿಗಳು ಜನರ ಮನಸ್ಸಿನಲ್ಲಿವೆ. ಅಲ್ಲದೆ ರಾಜ್ಯ ಮತ್ತು ಜಿಲ್ಲೆ ಹಾಗೂ ತಾಲೂಕಿನಲ್ಲಿ ಮೋದಿ ಅಲೆಯಿದೆ. ಇದನ್ನು ಬಳಸಿಕೊಂಡು ಮತದಾರರ ಮನವೊಲಿಸುತ್ತಿದ್ದಾರೆ.ಕುಂದಿದ ವಾಹನಗಳ ಅಬ್ಬರ: ಪ್ರತಿ ಚುನಾವಣೆಯಲ್ಲಿ ವಾಹನಗಳ ಅಬ್ಬರ ಜೋರಾಗಿತ್ತು. ಆದರೆ, ಈ ಬಾರಿಯ ಉಪ ಚುನಾವಣೆಯಲ್ಲಿ ವಾಹನಗಳ ಅಬ್ಬರವೂ ಕಾಣುತ್ತಿಲ್ಲ. ಅಭ್ಯರ್ಥಿಗಳು ಎಲ್ಲಿ ಹೋದರೂ ಒಬ್ಬೊಬ್ಬರೇ ಗ್ರಾಮಗಳಿಗೆ ಹೋಗಿ ಅಬ್ಬರದ ಪ್ರಚಾರ ಮಾಡುತ್ತಿದ್ದಾರೆ.
ಕ್ಷೀಣಿಸಿದ ಮುಖಂಡರ ದಂಡು: ಪ್ರಸಕ್ತ ಸಾಲಿನ ಉಪಚುನಾವಣೆಯಲ್ಲಿ ಮುಖಂಡರ ದಂಡು ತುಂಬ ಕಡಿಮೆಯಾಗಿದೆ. ಗ್ರಾಮಗಳಿಗೆ ಹೋದರೆ ಮುಖಂಡರುಗಳೇ ತುಂಬಿರುತ್ತಿದ್ದರು. ಈಗ ಅಭ್ಯರ್ಥಿಗಳು ಹೊರತುಪಡಿಸಿದರೆ ಬೆರಳಣಿಕೆಯಷ್ಟು ಮುಖಂಡರು ಮಾತ್ರ ಇರುತ್ತಾರೆ. ಆಯಾ ಗ್ರಾಮದ ಮುಖಂಡರೇ ಇರುತ್ತಾರೆ. ಇದನ್ನೆಲ್ಲ ನೋಡಿದರೆ ಮುಖಂಡರ ದಂಡಿಗೆ ನಾಯಕರು ಕಡಿವಾಣ ಹಾಕಿದಂತಿದೆ.ಬಿಸಿಲಿನ ಧಗೆ: ಪ್ರಸಕ್ತ ಸಾಲಿನಲ್ಲಿ ಬಿಸಿಲಿನ ಧಗೆ ವಿಪರೀತವಾಗಿದ್ದು, ಗರಿಷ್ಠ 45.04 ಡಿಗ್ರಿ ಸೆಲ್ಸಿಯಸ್‌ಗೆ ತಲುಪಿದೆ. ಬೆ.9 ರಿಂದಲೇ ರಣಬಿಸಿಲು ಆರಂಭವಾಗುತ್ತದೆ. 12 ಗಂಟೆ ಆದಮೇಲೆ ಅಂತು ಮೈಮೇಲೆ ಕೆಂಡ ಬಿದ್ದಾಗುತ್ತದೆ. ಸುಡು ಬಿಸಿಲಿನನ್ನು ಲೆಕ್ಕಿಸಿದೆ ಅಭ್ಯರ್ಥಿಗಳು ಭರಪೂರ ಪ್ರಚಾರ ಮಾಡುತ್ತಿದ್ದಾರೆ.
ಸುರಪುರ ಮತಕ್ಷೇತ್ರದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳ ನಡುವೆ ಸಮಬಲದ ಹೋರಾಟ ನಡೆಯುತ್ತಿದೆ. ಎಲ್ಲೆಡೆ ಅಭ್ಯರ್ಥಿಗಳು ಮತ ಪ್ರಚಾರ ಮಾಡುತ್ತಿದ್ದಾರೆ. ಅಭಿವೃದ್ಧಿ ಮತ್ತು ಮುಂಬರುವ ಕನಸುಗಳ ಬುತ್ತಿಯನ್ನು ಜನರ ಮುಂದಿಟ್ಟು ಮತಯಾಚಿಸುತ್ತಿದ್ದಾರೆ. ಮೋದಿ ಅಲೆ ಮತ್ತು ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳು, ಅನುಕಂಪ ಅಲೆಗಳು ಜನರ ಬಾಯಿಯಲ್ಲಿ ಹರಿದಾಡುತ್ತಿವೆ. ಬಿಜೆಪಿ ಅಭ್ಯರ್ಥಿ ನರಸಿಂಹ ನಾಯಕ ಸಾಂಕೇತಿಕವಾಗಿ ಏ.12ರಂದು ನಾಮಪತ್ರ ಸಲ್ಲಿಸಿದ್ದಾರೆ. ಏ.18ರಂದು ಕಾರ್ಯಕರ್ತರು ಮತ್ತು ಬೆಂಬಲಿಗರೊಂದಿಗೆ ಮತ್ತೊಮ್ಮೆ ಉಮೇದುವಾರಿಕೆ ನೀಡಲಿದ್ದಾರೆ. ಏ.16ರಂದು ಕಾಂಗ್ರೆಸ್ ಅಭ್ಯರ್ಥಿ ರಾಜಾ ವೇಣುಗೋಪಾಲ ನಾಯಕ ಸಾಂಕೇತಿಕವಾಗಿ ನಾಮಪತ್ರ ಸಲ್ಲಿಸಲಿದ್ದಾರೆ. ಏ.19ರಂದು ಕಾರ್ಯಕರ್ತರು, ಬೆಂಬಲಿಗರು, ಮುಖಂಡರೊಂದಿಗೆ ಎರಡನೇ ಬಾರಿ ನಾಮಪತ್ರ ಸಲ್ಲಿಸಲಿದ್ದಾರೆ ಎಂಬುದಾಗಿ ಮೂಲಗಳು ತಿಳಿಸಿವೆ.