ಸುರಪುರ: 9 ತಿಂಗಳಲ್ಲಿ 5 ಸಾವಿರ ಮತದಾರರ ಹೆಚ್ಚಳ!

| Published : Mar 08 2024, 01:50 AM IST

ಸಾರಾಂಶ

ಸುರಪುರ ತಾಲೂಕಿನ ಸಮೀಪದ ತಳವಾರಗೇರಾ ಸರಕಾರಿ ಪ್ರೌಢಶಾಲೆ ಮತಗಟ್ಟೆಗೆ ಜಿಲ್ಲಾಧಿಕಾರಿ ಡಾ. ಬಿ. ಸುಶೀಲಾ ಭೇಟಿ ನೀಡಿ ಪರಿಶೀಲಿಸಿದರು.

ನಾಗರಾಜ್ ನ್ಯಾಮತಿ

ಕನ್ನಡಪ್ರಭ ವಾರ್ತೆ ಸುರಪುರ

ಲೋಕಸಭಾ ಚುನಾವಣೆ ಜೊತೆಗೇ, ಸುರಪುರ ಮತಕ್ಷೇತ್ರದ ಉಪ ಚುನಾವಣೆ ನಡೆವ ಸಾಧ್ಯತೆ ಬೆನ್ನಲ್ಲೇ, ಕಳೆದ 9 ತಿಂಗಳ ಅವಧಿಯಲ್ಲಿ ಸುಮಾರು 5 ಸಾವಿರ ಮತದಾರರು ಸೇರ್ಪಡೆಯಾಗಿರುವುದು ವಿಶೇಷವಾಗಿ ಕಂಡು ಬಂದಿದೆ.

ಸುರಪುರ ಕ್ಷೇತ್ರದಲ್ಲಿ ತಾಲೂಕಿನಲ್ಲಿ 23 ಗ್ರಾಪಂ 104 ಗ್ರಾಮಗಳು, ಹುಣಸಗಿ ತಾಲೂಕಿಗೆ 18 ಗ್ರಾಮ ಪಂಚಾಯಿತಿಗಳಿದ್ದು, 82 ಗ್ರಾಮಗಳು ಒಳಪಡುತ್ತಿವೆ. 2011ರ ಜನಗಣತಿಯನ್ನು ಆಧರಿಸಿ 2023ರ ಅಂದಾಜಿನ ಜನಗಣಿತಿಯ ಪ್ರಕಾರ 4.04ಲಕ್ಷ ಜನಸಂಖ್ಯೆ ಇದೆ. 2023ರ ವಿಧಾನಸಭಾ ಚುನಾವಣೆಯಲ್ಲಿ 2,75,419 ಮತದಾರರಿದ್ದರು. ಈಗ 2024ರ ಫೆಬ್ರವರಿ ಮಾಹಿತಿ ಪ್ರಕಾರ ಪುರುಷ-1,41,481, ಮಹಿಳೆ-1,39,607, ತೃತೀಯ ಲಿಂಗ-28 ಒಟ್ಟು 2,81,116 ಮತದಾರರಿದ್ದಾರೆ. 9 ತಿಂಗಳ ಅಂತರದಲ್ಲಿ 5,697 ಮತದಾರರು ಹೆಚ್ಚಾಗಿದ್ದಾರೆ.

ಸುರಪುರ ಮತಕ್ಷೇತ್ರದ ಹಾಲಿ ಶಾಸಕರಾಗಿದ್ದ ರಾಜಾ ವೆಂಕಟಪ್ಪ ನಾಯಕ ಅವರ ಹಠಾತ್ ನಿಧನದಿಂದ ತೆರವಾದ ವಿಧಾನಸಭಾ ಕ್ಷೇತ್ರಕ್ಕೆ ಲೋಕಸಭೆ ಚುನಾವಣೆ ಜೊತೆಗೇ ಉಪ ಚುನಾವಣೆ ಜರುಗುವುದು ಬಹುತೇಕ ಸ್ಪಷ್ಟವಾದಂತಿದೆ.

317 ಮತಗಟ್ಟೆಗಳು:

ಸುರಪುರ ಮತಕ್ಷೇತ್ರದಲ್ಲಿ 317 ಮತಗಟ್ಟೆ ಗುರುತಿಸಲಾಗಿದೆ. 102 ಪೋಲಿಂಗ್ ಬೂತ್‌ಗಳಲ್ಲಿ 1000ಕ್ಕಿಂತ ಹೆಚ್ಚಿರುವ ಮತದಾರರಿದ್ದಾರೆ. 215 ಮತಗಟ್ಟೆಗಳಲ್ಲಿ ಸಾವಿರಕ್ಕಿಂತ ಕಡಿಮೆ ಮತದಾರರಿದ್ದಾರೆ.

2023ರ ವಿಧಾನಸಭಾ ಚುನಾವಣೆಯಲ್ಲಿ 2,75,419 ರಲ್ಲಿ ಶೇ. 75.16ರಷ್ಟು ಮತದಾನವಾಗಿತ್ತು. ಪ್ರಸ್ತುತ 5 ಸಾವಿರ ಮತದಾರರು ಹೆಚ್ಚಾಗಿದ್ದು, ಮತದಾನ ಹೆಚ್ಚಳಕ್ಕೆ ಜಿಲ್ಲಾ ಮತ್ತು ತಾಲೂಕಾಡಳಿತ ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಸುರಪುರ ಮತಕ್ಷೇತಕ್ಕೆ ಎರಡು ತಾಲೂಕು ಒಳಪಡುವುದರಿಂದ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಮತಗಟ್ಟೆ ಕೇಂದ್ರಗಳಿಗೆ ಭೇಟಿ ನೀಡಿ ಮೂಲಸೌಲಭ್ಯ ಪರಿಶೀಲಿಸಿ ಸಮಸ್ಯೆಯಿದ್ದರೆ ಗಮನಕ್ಕೆ ತಂದು ಸರಿಪಡಿಸಿಕೊಳ್ಳುವಂತೆ ಸೂಚನೆ ನೀಡುತ್ತಿರುವುದು ಕಂಡು ಬರುತ್ತಿದೆ.

ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ತಹಸೀಲ್ದಾರ್, ಸೇರಿದಂತೆ ವಿವಿಧ ಅಧಿಕಾರಿಗಳು ಇತ್ತೀಚೆಗೆ ನಗರದ ಶ್ರೀ ಪ್ರಭು ಕಾಲೇಜಿನಲ್ಲಿರುವ ಭದ್ರತಾ ಕೊಠಡಿ ಪರಿಶೀಲಿಸಿದ್ದಾರೆ.

ಸುರಪುರ ವಿವಿಧ ಮತಗಟ್ಟೆಗಳಿಗೆ ಡಿಸಿ ಭೇಟಿ

ಚುನಾವಣೆಗಳು ಸಮೀಪಿಸುತ್ತಿರುವ ಹಿನ್ನೆಲೆ ಜಿಲ್ಲಾಧಿಕಾರಿ ಡಾ. ಸುಶೀಲಾ ಅವರು ವಿವಿಧ ಮತಗಟ್ಟೆಗಳಿಗೆ ತೆರಳಿ ಮೂಲಸೌಕರ್ಯ ಪರಿಶೀಲನೆ ನಡೆಸಿದರು. ತಾಲೂಕಿನ ಪೇಠಾ ಅಮ್ಮಾಪುರ, ಸುರಪುರ ನಗರದ ಆನಂದ ಮಹಾವಿದ್ಯಾಲಯ, ಕಬಾಡಗೇರಾ ಸೇರಿ ವಿವಿಧ ಮತಗಟ್ಟೆಗಳಿಗೆ ಭೇಟಿ ನೀಡಿ ಮೂಲಸೌಲಭ್ಯ ಪರಿಶೀಲಿಸಿದರು.

ತಾಲೂಕಿನ ಸಮೀಪದ ತಳವಾರಗೇರಾ ಸರಕಾರಿ ಪೌಢಶಾಲೆಯ ಮತಗಟ್ಟೆಗೆ ಚುನಾವಣಾಧಿಕಾರಿಯೂ ಆಗಿರುವ ಡಾ. ಬಿ. ಸುಶೀಲಾ ಭೇಟಿ ನೀಡಿ ಮತದಾರರಿಗೆ ತೊಂದರೆ ಆಗದಂತೆ ಸಕಲ ವ್ಯವಸ್ಥೆ ಮಾಡಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು.

ತಹಸೀಲ್ದಾರ್ ವಿಜಯಕುಮಾರ, ಗ್ರಾಮ ಲೆಕ್ಕಿಗ ಪ್ರದೀಪ, ಗಿರೀಶ, ವಿಜಯಸಿಂಗ್, ಬಸವರಾಜ ಬಿರಾದಾರ, ಮತಗಟ್ಟೆ ಅಧಿಕಾರಿ ಸೇರಿದಂತೆ ಇತರರಿದ್ದರು.

ಮತದಾನ ನೋಂದಣಿ ಸೇರ್ಪಡೆ ಪ್ರಕ್ರಿಯೆ ನಿರಂತರವಾಗಿ ಚಾಲ್ತಿಯಲ್ಲಿರುತ್ತದೆ. 18 ವರ್ಷ ಮೇಲ್ಪಟ್ಟವರು ಒಂದು ಪೋಟೋ, ಆಧಾರ್, ವೈಯಕ್ತಿಕ ಗುರುತಿನ ಅಥವಾ ಪೋಷಕರ ಚುನಾವಣಾ ಗುರುತಿನ ಚೀಟಿ ಸೇರಿ ದಾಖಲಾತಿ ನೀಡಿ ಮತದಾರ ಪಟ್ಟಿಗೆ ಹೆಸರು ನೋಂದಾಯಿಸಿಕೊಳ್ಳಬಹುದು. 17 ವರ್ಷ ಮೇಲ್ಪಟ್ಟವರು ಮತದಾರರ ಪಟ್ಟಿಗೆ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.

ವಿಜಯಕುಮಾರ, ತಹಸೀಲ್ದಾರ್, ಸುರಪುರ.