ಸುರಪುರ: ಎಸ್ಸೆಸ್ಸೆಲ್ಸಿ ಪರೀಕ್ಷೆ ನಕಲಿಗೆ ಸಹಕಾರ ಇಬ್ಬರು ಅಮಾನತು

| Published : Mar 26 2024, 01:08 AM IST

ಸುರಪುರ: ಎಸ್ಸೆಸ್ಸೆಲ್ಸಿ ಪರೀಕ್ಷೆ ನಕಲಿಗೆ ಸಹಕಾರ ಇಬ್ಬರು ಅಮಾನತು
Share this Article
  • FB
  • TW
  • Linkdin
  • Email

ಸಾರಾಂಶ

ಸುರಪುರ ನಗರದ ಸರಕಾರಿ ಬಾಲಕರ ಪದವಿ ಪೂರ್ವ ಕಾಲೇಜಿಗೆ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯಲು ಆಗಮಿಸಿದ ವಿದ್ಯಾರ್ಥಿಗಳು.

ಕನ್ನಡಪ್ರಭ ವಾರ್ತೆ ಸುರಪುರ

2024-25 ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯ ಪ್ರಥಮ ಭಾಷೆ ಕನ್ನಡ ಪರೀಕ್ಷೆಗೆ 5513 ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ದು, 5311ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಿದರೆ 202 ವಿದ್ಯಾರ್ಥಿಗಳು ಗೈರಾಗಿದ್ದಾರೆ ಎಂದು ಬಿಇಓ ಯಲ್ಲಪ್ಪ ಕಾಡ್ಲೂರ ತಿಳಿಸಿದರು.

17 ಕೇಂದ್ರಗಳಲ್ಲಿ ಪರೀಕ್ಷೆ ಸುಸೂತ್ರವಾಗಿ ನಡೆದಿದ್ದು, ಶಿಕ್ಷಕರು ಎಲ್ಲ ಪರೀಕ್ಷಾ ಕೇಂದ್ರಗಳಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿದ್ದಾರೆ ಎಂದರು.

ನಕಲಿಗೆ ಸಹಕಾರ ಇಬ್ಬರು ಅಮಾನತು:

ಸೋಮವಾರದಂದು ನಡೆದ ಎಸ್ಸೆಸ್ಸೆಲ್ಸಿ ಪರೀಕ್ಷಾ ಕೇಂದ್ರದ ಸರಕಾರಿ ಪದವಿ ಪೂರ್ವ ಕಾಲೇಜಿನ ಸುರಪುರ ಮತ್ತು ಸರಕಾರಿ ಪದವಿ ಪೂರ್ವ ಕಾಲೇಜು ಬಾಲಕ ಪ್ರೌಢಶಾಲೆಯಲ್ಲಿ ನಕಲು ಮಾಡಲು ಸಹಕರಿಸಿದ ಇಬ್ಬರು ಶಿಕ್ಷಕರ ಮೇಲೆ ಜಿಪಂ ಸಿಇಓ ನೀಡಿದ ವರದಿ ಆಧಾರದಲ್ಲಿ ಜಿಲ್ಲಾ ಉಪನಿರ್ದೇಶಕರ ಕಾರ್ಯಾಲಯ ಶಾಲಾ ಶಿಕ್ಷಣ ಇಲಾಖೆ ಅಧಿಕಾರಿಗಳು ಅಮಾನತು ಆದೇಶ ಹೊರಡಿಸಿದ್ದಾರೆ.

ವೆಬ್‌ಕಾಸ್ಟಿಂಗ್ ಸಿಸಿ ಕ್ಯಾಮೆರಾ ವೀಕ್ಷಣೆ ಮಾಡಿದಾಗ ಕೊಠಡಿ ಮೇಲ್ವಿಚಾರಕರಾಗಿ ಕಾರ್ಯನಿರ್ವಹಿಸಿದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಝಂಡದಕೇರಿಯ ಹಣಮಂತ್ರಾಯ ಹಾಗೂ ಹುಣಸಗಿ ಪದವಿ ಪೂರ್ವ ಬಾಲಕರ ಪ್ರೌಢಶಾಲೆಯಲ್ಲಿ ಕೊಠಡಿ ಮೇಲ್ವಿಚಾರಕರಾಗಿ ಕೆಲಸ ಮಾಡಿದ ಏವೂರಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಸಹ ಶಿಕ್ಷಕ ಸಾಹೇಬಗೌಡ ಉಕ್ಕಾಲಿ ಅವರನ್ನು ಪರೀಕ್ಷಾ ಪಾವಿತ್ರ್ಯತೆ ಕಾಪಾಡುವಲ್ಲಿ ವಿಫಲರಾಗಿದ್ದಾರೆ. ಬೇಜವಾಬ್ದಾರಿತನ ಮೇಲ್ನೋಟಕ್ಕೆ ಕಂಡುಬಂದಿದ್ದು, ಕರ್ತವ್ಯ ಲೋಪ ಎಸಗಿರುವುದು ನಡೆದಿದೆ. ಕರ್ನಾಟಕ ನಾಗರಿಕ ಸೇವಾ ( ವರ್ಗೀಕರಣ ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಗಳು 1957 ನಿಯಮ 10(1)ರನ್ವಯ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಡಿಡಿಪಿಐ ಮಂಜುನಾಥ ಎಚ್.ಟಿ. ಅವರು ಇಲಾಖೆಯ ವಿಚಾರಣೆಯನ್ನು ಕಾಯ್ದಿರಿಸಿ ತಕ್ಷಣದಿಂದ ಅಮಾನತು ಆದೇಶ ಜಾರಿಗೊಳಿಸಿದ್ದಾರೆ. ಜೀವನಾಂಶ ಭತ್ಯೆಯನ್ನು ಪಡೆಯಲು ಅರ್ಹರಿದ್ದು, ಸಕ್ಷಮ ಪ್ರಾಧಿಕಾರಿ ಲಿಖಿತ ಅನುಮತಿ ಇಲ್ಲದೆ ಕೇಂದ್ರ ಸ್ಥಾನ ಬಿಡುವಂತಿಲ್ಲ ಎಂದು ತಿಳಿಸಿದ್ದಾರೆ.