ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ

ಕೆಆರ್‌ಎಸ್ ಅಣೆಕಟ್ಟೆಯಿಂದ ರಾಜ್ಯ ಸರ್ಕಾರ ಕದ್ದು ಮುಚ್ಚಿ ಕಾವೇರಿ ನದಿ ಮೂಲಕ ತಮಿಳುನಾಡಿಗೆ ನೀರು ಹರಿಸುತ್ತಿರುವುದನ್ನು ಖಂಡಿಸಿ ಭೂಮಿ ತಾಯಿ ಹೋರಾಟ ಸಮಿತಿ ಸದಸ್ಯರು ಕಾವೇರಿ ನದಿಗಿಳಿದು ಪ್ರತಿಭಟನೆ ನಡೆಸಿದರು.

ಪಟ್ಟಣದ ಸ್ನಾನಘಟ್ಟದ ಬಳಿ ಸಮಿತಿ ಹಿರಿಯ ಮುಖಂಡ ಕೆಎಸ್.ನಂಜುಂಡೇಗೌಡ ಹಾಗೂ ಅಧ್ಯಕ್ಷ ಬಲ್ಲೇನಹಳ್ಳಿ ಕೃಷ್ಣೇಗೌಡ ನೇತೃತ್ವದಲ್ಲಿ ರೈತ ಕಾರ್ಯಕರ್ತರು ಕಾವೇರಿ ನದಿಗಿಳಿದು ಪ್ರಾಧಿಕಾರಗಳು ಹಾಗೂ ರಾಜ್ಯ ಸರ್ಕಾರ, ಜಲಸಂಪನ್ಮೂಲ ಸಚಿವ ಎನ್.ಚಲುವರಾಯಸ್ವಾಮಿ ಸೇರಿದಂತೆ ಜಿಲ್ಲೆಯ ಶಾಸಕರ ವಿರುದ್ಧ ಘೋಷಣೆ ಕೂಗಿದರು.

ಈ ವೇಳೆ ನಂಜುಂಡೇಗೌಡ ಮಾತನಾಡಿ, ರಾಜ್ಯ ಸರ್ಕಾರ ರಾತ್ರೋರಾತ್ರಿ ಅಣೆಕಟ್ಟೆಯ 10 ಗೇಟ್‌ಗಳ ಮೂಲಕ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿ ಬಿಟ್ಟಿರುವುದು ದುರಂತ. ಆದರೆ, ಸರ್ಕಾರ ಜಿಲ್ಲಾಧಿಕಾರಿಗಳ ಮೂಲಕ ನೀರು ಬಿಟ್ಟಿಲ್ಲ ಎಂದು ಹೇಳಿಸುತ್ತಿದ್ದಾರೆ. ಇಷ್ಟರ ಮಟ್ಟಿಗೆ ಸುಳ್ಳು ಹೇಳುತ್ತಿರುವ ಸರ್ಕಾರ ನಮ್ಮನ್ನು ಹೇಗೆ ರಕ್ಷಣೆ ಮಾಡಲು ಸಾಧ್ಯ ಎಂದು ಪ್ರಶ್ನಿಸಿದರು.

ತಮಿಳುನಾಡಿನಲ್ಲಿ ಬೆಳೆ ಸಂರಕ್ಷಣೆಗೆ ಬಹಳಷ್ಟು ನೀರಿದ್ದು, ಜೊತೆಗೆ ಅವರಿಗೆ ವರ್ಷದಲ್ಲಿ ಮೂರು ಮಳೆಗಾಲವಿದೆ. ಇನ್ನೂ ಎರಡು ಮಳೆಗಾಲವಿದೆ ಎಂಬುದನ್ನು ಪ್ರಾಧಿಕಾರಗಳು ಅಥವಾ ಸುಪ್ರೀಂ ಕೋರ್ಟ್‌ಗೆ ಮನದಟ್ಟು ಮಾಡಿಕೊಡುವಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ದೂರಿದರು.


ಕಾವೇರಿ ನದಿ ಮೂಲಕ ತಮಿಳುನಾಡಿಗೆ ನೀರು ಹರಿಸಿ ಈಗ ನೀರು ಬಿಟ್ಟಿಲ್ಲ ಎಂದು ಹೇಳುವ ಕೆಟ್ಟ ಕೆಲಸವನ್ನು ಸರ್ಕಾರ ಮಾಡುತ್ತಿದೆ. ತಕ್ಷಣ ನೀರು ನಿಲ್ಲಿಸಿ ರಾಜ್ಯದ ಪರ ನಿಲ್ಲದಿದ್ದರೆ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಸಿದರು.

ಸಮಿತಿ ಅಧ್ಯಕ್ಷ ಬಲ್ಲೇನಹಳ್ಳಿ ಬಿ.ಸಿ ಕೃಷ್ಣೇಗೌಡ ಮಾತನಾಡಿ, ನೀರು ಬಿಡಲ್ಲ ಎಂದು ನಾಟಕವಾಡಿ ಇದೀಗ ಕದ್ದುಮುಚ್ಚಿ ರಾತ್ರಿ 8 ಗಂಟೆ ಸಮಯದಲ್ಲಿ ಅಣೆಕಟ್ಟೆಯ ಸುಮರು10 ಗೇಟ್‌ಗಳ ಮೂಲಕ ತಮಿಳುನಾಡಿಗೆ ನೀರು ಹರಿಸುತ್ತಿದ್ದಾರೆ. ಇದರಿಂದ ಕೊಟ್ಟ ಮಾತಿನಂತೆ ನಡೆದುಕೊಳ್ಳದ ಸಿಎಂ ಹಾಗೂ ಜಲಸಂಪನ್ಮೂಲ ಸಚಿವರು ತಲೆತಗ್ಗಿಸಿದಂತಾಗಿದೆ ಎಂದು ಕಿಡಿಕಾರಿದರು.

ಪ್ರತಿಭಟನೆಯಲ್ಲಿ ಸಮಿತಿ ಮುಖಂಡರಾದ ಜಯರಾಮೇಗೌಡ, ಪುಟ್ಟಮಾದು, ಮಹಾಲಿಂಗು, ರವಿಲಕ್ಷ್ಮಣ, ಡಿ. ಮಂಜುನಾಥ್, ಸುರೇಶ್, ನಾಗಣ್ಣ, ಕೆಂಪೇಗೌಡ, ಶಿವರಾಜು, ಸಿದ್ದೇಗೌಡ, ವಿಷಕಂಠು, ಮಹೇಶ, ಬಾಲು, ಬಾಬು, ಮಹದೇವು, ರಾಮಕೃಷ್ಣ, ಕೃಷ್ಣ, ನಾಗರಾಜು, ಲಕ್ಷ್ಮೀಶ, ಸ್ವಾಮಿ, ಶಿವಣ್ಣ, ಸ್ವಾಮಿ, ಪುಟ್ಟಣ್ಣ, ಅಶ್ವಥ್ ಸೇರಿದಂತೆ ಇತರ ಮುಖಂಡರು ಇದ್ದರು.