ಸುತ್ತೂರು ಜಾತ್ರಾ ಮಹೋತ್ಸವಕ್ಕೆ ವರ್ಣರಂಜಿತ ಚಾಲನೆ

| Published : Feb 07 2024, 01:46 AM IST

ಸಾರಾಂಶ

ಮನರಂಜನೆಯ ಜೊತೆಯಲ್ಲಿಯೇ ಜನರಲ್ಲಿ ಅರಿವು ಮೂಡಿಸುವ ಕಾರ್ಯಕ್ರಮಗಳು ಜಾತ್ರೆಯ ಭಾಗವಾಗಿ ಇರಲಿದ್ದು, ಕೃಷಿಯಲ್ಲಿ ಆಗಿರುವ ಆಧುನಿಕ ತಂತ್ರಜ್ಞಾನ, ಆರೋಗ್ಯ ಕ್ಷೇತ್ರದಲ್ಲಿ ಆಗಿರುವ ಆವಿಷ್ಕಾರಗಳು, ಹೊಸ ಸಂಶೋಧನೆಗಳ ಮಾಹಿತಿಯನ್ನು ವಸ್ತುಪ್ರದರ್ಶನದ ಮೂಲಕ ಜನರಿಗೆ ಅರಿವು ಮೂಡಿಸುವುದು ಜಾತ್ರೆಯ ವಿಶೇಷಗಳಲ್ಲಿ ಒಂದಾಗಿದೆ. ಎಲ್ಲ ವರ್ಗದ ಜನರನ್ನು ಬೆಸೆಯುವಂತ ಕ್ರೀಡೆ ಚಟುವಟಿಕೆಗಳು ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳ ಸ್ಪರ್ಧೆಗಳು, ಜಾನಪದ, ಸೋಬಾನೆ, ದೇಶಿ ಆಟಗಳು, ಜಾನುವಾರು ಪರಿಷೆ, ದೇಶೀ ತಳಿಗಳ ಉತ್ತೇಜನ, ಸಾಮೂಹಿಕ ವಿವಾಹ, ಆರೋಗ್ಯ ತಪಾಸಣೆ ಎಂತಹ ಸಮಾಜಮುಖಿ ಚಟುವಟಿಕೆಗಳು ಜಾತ್ರೆಯೊಂದಿಗೆ ಬೆಸೆದುಕೊಂಡಿರುವುದು ಸುತ್ತೂರು ಜಾತ್ರೆ ಅರಿವಿನ ಜಾತ್ರೆ ಎಂಬುದನ್ನು ಸಾಕ್ಷಿಕರಿಸಲಿದೆ.

ಕನ್ನಡಪ್ರಭ ವಾರ್ತೆ ನಂಜನಗೂಡು

ಸುತ್ತೂರು ಶ್ರೀ ಕ್ಷೇತ್ರದಲ್ಲಿ ಆದಿ ಜಗದ್ಗುರು ಶ್ರೀ ಶಿವರಾತ್ರಿ ಶಿವಯೋಗಿಗಳವರ ಜಾತ್ರಾ ಮಹೋತ್ಸವಕ್ಕೆ ಮಂಗಳವಾರ ವೈಭವಯುತವಾಗಿ ಸಂಭ್ರಮದಿಂದ ಕೂಡಿದ ವರ್ಣರಂಚಿತ ಚಾಲನೆ ದೊರೆಯಿತು.

ನಾಡಿನ ವಿವಿಧ ಭಾಗಗಳಿಂದ ಆಗಮಿಸಿದ್ದ ಸಹಸ್ರಾರು ಜನಸ್ತೋಮದ ಉತ್ಸಾಹ, ವೈವಿಧ್ಯಮಯ ಚಟುವಟಿಕೆಗಳ ನಡುವೆ ಆರು ದಿನಗಳ ಆದಿ ಜಗದ್ಗುರು ಶ್ರೀ ಶಿವರಾತ್ರಿ ಶಿವಯೋಗಿಗಳವರ ಜಾತ್ರಾ ಮಹೋತ್ಸವ ಅನಾವರಣಗೊಂಡಿತು.

ಮನರಂಜನೆಯ ಜೊತೆಯಲ್ಲಿಯೇ ಜನರಲ್ಲಿ ಅರಿವು ಮೂಡಿಸುವ ಕಾರ್ಯಕ್ರಮಗಳು ಜಾತ್ರೆಯ ಭಾಗವಾಗಿ ಇರಲಿದ್ದು, ಕೃಷಿಯಲ್ಲಿ ಆಗಿರುವ ಆಧುನಿಕ ತಂತ್ರಜ್ಞಾನ, ಆರೋಗ್ಯ ಕ್ಷೇತ್ರದಲ್ಲಿ ಆಗಿರುವ ಆವಿಷ್ಕಾರಗಳು, ಹೊಸ ಸಂಶೋಧನೆಗಳ ಮಾಹಿತಿಯನ್ನು ವಸ್ತುಪ್ರದರ್ಶನದ ಮೂಲಕ ಜನರಿಗೆ ಅರಿವು ಮೂಡಿಸುವುದು ಜಾತ್ರೆಯ ವಿಶೇಷಗಳಲ್ಲಿ ಒಂದಾಗಿದೆ. ಎಲ್ಲ ವರ್ಗದ ಜನರನ್ನು ಬೆಸೆಯುವಂತ ಕ್ರೀಡೆ ಚಟುವಟಿಕೆಗಳು ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳ ಸ್ಪರ್ಧೆಗಳು, ಜಾನಪದ, ಸೋಬಾನೆ, ದೇಶಿ ಆಟಗಳು, ಜಾನುವಾರು ಪರಿಷೆ, ದೇಶೀ ತಳಿಗಳ ಉತ್ತೇಜನ, ಸಾಮೂಹಿಕ ವಿವಾಹ, ಆರೋಗ್ಯ ತಪಾಸಣೆ ಎಂತಹ ಸಮಾಜಮುಖಿ ಚಟುವಟಿಕೆಗಳು ಜಾತ್ರೆಯೊಂದಿಗೆ ಬೆಸೆದುಕೊಂಡಿರುವುದು ಸುತ್ತೂರು ಜಾತ್ರೆ ಅರಿವಿನ ಜಾತ್ರೆ ಎಂಬುದನ್ನು ಸಾಕ್ಷಿಕರಿಸಲಿದೆ.

ಸುತ್ತೂರು ಶ್ರೀ ಶಿವರಾತ್ರಿ ದೇಶೀಕೇಂದ್ರ ಸ್ವಾಮಿಗಳ ಸಾನ್ನಿಧ್ಯದಲ್ಲಿ ನಡೆಯುತ್ತಿರುವ ಜಾತ್ರಾ ಮಹೋತ್ಸವದಲ್ಲಿ ಕನ್ಹೇರಿ ಸಿದ್ದಗಂಗಾ ಸಂಸ್ಥಾನ ಮಠದ ಜಗದ್ಗುರು ಶ್ರೀ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ, ನಿಂಬಾಳ ಮಠದ ಜಡೆಯ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಕೃಷಿ ಮೇಳ, ಆರೋಗ್ಯ ತಪಾಸಣಾ ಶಿಬಿರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್, ವಸ್ತುಪ್ರದರ್ಶನವನ್ನು ಮಾಜಿ ಶಾಸಕಿ ರೂಪಾಲಿ ನಾಯಕ್ ಉದ್ಘಾಟಿಸಿದರು. ಸಾಂಸ್ಕೃತಿಕ ಮೇಳವನ್ನು ಶಿಕ್ಷಣ ಸಚಿವ ಮಧು ಬಂಗಾರಪ್ಪ, ದೋಣಿ ವಿವಾರವನ್ನು ಗುಂಡ್ಲುಪೇಟೆ ಶಾಸಕ ಎಚ್.ಎಂ. ಗಣೇಶ್ ಪ್ರಸಾದ್ ಉದ್ಘಾಟಿಸಿದರು,

ಮುಖ್ಯಅಥಿತಿಗಳಾಗಿ ಎಂಎಲ್‌.ಸಿ ಮಂಜೇಗೌಡ, ಹೈಕೋರ್ಟ್‌ ನ ನಿವೃತ್ತ ನ್ಯಾಯಮೂರ್ತಿ ಎ.ಎಸ್. ಪಚ್ಚೆಪುರೆ, ಊಟಿಯ ಶಾಸಕ ಆರ್. ಗಣೇಶ್, ಪದ್ಮ ಪ್ರಶಸ್ತಿ ಪುರಸ್ಕೃತರಾದ ಪೆರಿ ಸಿಲ್ವೆನ್ ಫಿಲಿಯೋಜಾಟ್ ಮತ್ತು ವಸುಂಧರಾ ಫೊಲಿಯೋ ಜಾಟ್ ಭಾಗಿಯಾಗಿದ್ದರು.

ಗದ್ದುಗೆ ಆವರಣದಲ್ಲಿ ನಾದಸ್ವರ, ಜಾನಪದ ಸಂಗೀತ ದಂತಹ ಸಾಂಸ್ಕೃತಿಕ ಚಟುವಟಿಕೆಗಳು ಹಾಗೂ ದ್ವಾದಶ ಜ್ಯೋತಿಲಿಂಗ ನೃತ್ಯ ರೂಪಕ, ಸುಗಮ ಸಂಗೀತ, ತಾಲೂಕಿನ ಹಲ್ಲರೆ ಗ್ರಾಮದ ಶ್ರೀ ರಾಮೇಶ್ವರ ಕೃಪಾಪೋಷಿತ ಯಕ್ಷಗಾನ ಸೂತ್ರದ ಬೊಂಬೆ ಮೇದವರು ನಡೆಸಿಕೊಟ್ಟ, ಯಕ್ಷಗಾನ ಬೊಂಬೆಯಾಟ, ಜೊತೆಗೆ ಭರತನಾಟ್ಯ, ಜಗಜ್ಯೋತಿ ಬಸವೇಶ್ವರ ಮತ್ತು ದಕ್ಷಯಜ್ಞ ನಾಟಕಗಳು ಜಾತ್ರೆಯಲ್ಲಿ ನೆರದಿದ್ದ ಜನರಿಗೆ ಮುದ ನೀಡಿದವು.

ಇದಕ್ಕೂ ಮೊದಲು ಕರ್ತೃ ಗದ್ದಿಗೆಯಲ್ಲಿ ಪ್ರಾತಃಕಾಲ 4ಕ್ಕೆ ಅನುಜ್ಞ, ಮಹಾ ಸಂಕಲ್ಪ ಪೂರ್ವಕ ಮಹಾ ರುದ್ರಾಭಿಷೇಕ, ಬೆಳಗ್ಗೆ 6.30 ಗ್ರಾಮದ ದೇವಸ್ಥಾನದಲ್ಲಿ ವಿಶೇಷಪೂಜೆ, ಸಣ್ಣ ಮಲ್ಲಿಪುರ ಸ್ನೇಹ ಸೌಹಾರ್ಧ ಶಾಂತಿ ಪ್ರಾರ್ಥನಾ ಪಥಸಂಚಲನ ನೆರವೇರಿತು.

ಬೆಳಗ್ಗೆ 7.30ಕ್ಕೆ ಕಸುವಿನಹಳ್ಳಿ ಗ್ರಾಮದ ಶ್ರೀ ಮೊರಂಬಾಳು ಗಂಗಾಧರೇಶ್ವರ ಪಟ್ಟದ ಮಠದ ಶಿವಕುಮಾರ ಸ್ವಾಮೀಜಿ ಅವರಿಂದ ಶಟ್ ಸ್ಥಲ ಧ್ವಜಾರೋಹಣ ನೆರವೇರಿಸಿದರು. ಅಲ್ಲದೆ ವಿಜಯಪುರ ಜಿಲ್ಲೆಯ ಅಥರ್ಗಾ ಗುರುದೇವಾಶ್ರಮದ ಶ್ರೀ ಈಶಪ್ರಸಾದ ಸ್ವಾಮೀಜಿ ಅವರು ಧರ್ಮ ಸಂದೇಶ ನೀಡಿದರು. ನಂತರ ಬೆಳಗ್ಗೆ 8ಕ್ಕೆ ಆದಿ ಜಗದ್ಗುರು ಶ್ರೀ ಶಿವರಾತ್ರಿಶ್ವರ ಶಿವಯೋಗಿಗಳವರ ಉತ್ಸವಮೂರ್ತಿಗೆ ಅಭಿಷೇಕ ಮತ್ತು ಮಹಾ ಮಂಗಳಾರತಿಯನ್ನು ನೆರವೇರಿತು.

ನಂತರ ಭಕ್ತರ ದರ್ಶನಕ್ಕೆ ಅನುವು ಮಾಡಿಕೊಡಲಾಯಿತು. ಸಂಜೆ 4:30ಕ್ಕೆ ಕಪಿಲಾ ನದಿಯಿಂದ ಹಸು ಕರುವಿನೊಂದಿಗೆ ಅಗ್ರೋದಕವನ್ನು ತಂದು ಮೂಲ ಮಠದಿಂದ ಶಿವರಾತ್ರಿಶ್ವರ ಶಿವಯೋಗಿಗಳವರ ಉತ್ಸವ ಮೂರ್ತಿಯನ್ನು ಶ್ರೀಮಠದಿಂದ ಕರ್ತೃ ಗದ್ದಿಗೆ ವರೆಗೆ ಛತ್ರಿ ಚಾಮರಗಳೊಂದಿಗೆ ಮೆರವಣಿಗೆ ಮೂಲಕ ತರಲಾಯಿತು.

ಶಿವ ಗದ್ದುಗೆಯಲ್ಲಿ ಉತ್ಸವ ಮೂರ್ತಿಯನ್ನು ಮೂರು ಪ್ರದಕ್ಷಿಣೆ ಹಾಕಿಸಿದ ನಂತರ ಕರ್ತೃ ಗದ್ದುಗೆಯಲ್ಲಿ ಬಿಜಯಂಗೈಸಲಾಯಿತು. ಮೆರವಣಿಗೆಯಲ್ಲಿ ವಿವಿಧ ಜಾನಪದ ಕಲಾ ತಂಡಗಳು ಮೆರವಣಿಗೆಗೆ ಮೆರಗು ನೀಡಿದವು.

ಸಂಜೆ 6ಕ್ಕೆ ವೀರಭದ್ರೇಶ್ವರಸ್ವಾಮಿ ಕೊಂಡೋತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ಜರಗಿತು. ರಾತ್ರಿ 7ಕ್ಕೆ ಕರ್ತೃ ಗದ್ದಿಗೆಯಲ್ಲಿ ಪುಣ್ಯಹ, ನಾಂದಿ, ಕಲಶ ಸ್ಥಾಪನೆ ನೆರವೇರಿತು.

ಜಾತ್ರೆಯ ಮೊದಲ ದಿನವೇ ಸುತ್ತೂರು ಶ್ರೀಕ್ಷೇತ್ರದಲ್ಲಿ ಸಾವಿರಾರು ಜನರಿಗೆ ಮಹಾ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು. ಜನರು ಅತ್ಯಂತ ಉತ್ಸಾಹದಿಂದ ಜಾತ್ರಾ ಮಹೋತ್ಸವದಲ್ಲಿ ಭಾಗಿಯಾಗಿದ್ದು ವಿಶೇಷವಾಗಿತ್ತು. ನಾಳೆಯಿಂದ ಭಕ್ತಾದಿಗಳ ಸಂಖ್ಯೆಯಲ್ಲಿಯೂ ಹೆಚ್ಚಾಗುವ ನಿರೀಕ್ಷೆಯನ್ನು ಹೊಂದಲಾಗಿದೆ.

-------------------