ಸಾರಾಂಶ
ಹೆಲ್ಪಿಂಗ್ ಫ್ರೆಂಡ್ಸ್ ಇಸ್ರೇಲ್‌ನ ಸಂಸ್ಥಾಪಕ ಸುನೀಲ್ ಮೆಂಡೋನ್ಸಾ ನೇತೃತ್ವದಲ್ಲಿ ಹಲವಾರು ದಾನಿಗಳ ಸಹಕಾರದೊಂದಿಗೆ ತಾಕೊಡೆಯ ಅಸಹಾಯಕ ದಂಪತಿ ಲಾರೆನ್ಸ್-ಫೆಬಿಲೋಲಾ ಅವರಿಗೆ ಹೊಸಬೆಟ್ಟಿನಲ್ಲಿ ನಿರ್ಮಿಸಿರುವ ನೂತನ ಮನೆ ‘ಬೆಥೆಲ್’ನ ಹಸ್ತಾಂತರ ಕಾರ್ಯಕ್ರಮ ಗುರುವಾರ ನಡೆಯಿತು.
ಕನ್ನಡಪ್ರಭ ವಾರ್ತೆ ಮೂಡುಬಿದಿರೆ
ಹೆಲ್ಪಿಂಗ್ ಫ್ರೆಂಡ್ಸ್ ಇಸ್ರೇಲ್‌ನ ಸಂಸ್ಥಾಪಕ ಸುನೀಲ್ ಮೆಂಡೋನ್ಸಾ ನೇತೃತ್ವದಲ್ಲಿ ಹಲವಾರು ದಾನಿಗಳ ಸಹಕಾರದೊಂದಿಗೆ ತಾಕೊಡೆಯ ಅಸಹಾಯಕ ದಂಪತಿ ಲಾರೆನ್ಸ್-ಫೆಬಿಲೋಲಾ ಅವರಿಗೆ ಹೊಸಬೆಟ್ಟಿನಲ್ಲಿ ನಿರ್ಮಿಸಿರುವ ನೂತನ ಮನೆ ‘ಬೆಥೆಲ್’ನ ಹಸ್ತಾಂತರ ಕಾರ್ಯಕ್ರಮ ಗುರುವಾರ ನಡೆಯಿತು.ಹೊಸಬೆಟ್ಟು ಚರ್ಚಿನ ಧರ್ಮಗುರು ಗ್ರೆಗರಿ ಡಿಸೋಜ ಮತ್ತು ರೋಹನ್ ಲೋಬೋ ಗೃಹಪ್ರವೇಶದ ಪೂಜಾ ವಿಧಿವಿಧಾನಗಳನ್ನು ಪೂರೈಸಿದರು.
103ರ ಹರೆಯದ ಎಲ್ವೀನ್ ಗೋವಿಯಸ್, ಮನೆಯನ್ನು ಉದ್ಘಾಟಿಸಿದರು.ಸನ್ಮಾನ: ಮನೆಯ ಕಾಮಗಾರಿ ನಿರ್ವಹಿಸಿರುವ ಸಂತೋಷ್ ಸುವರ್ಣ ಅವರನ್ನು ಸನ್ಮಾನಿಸಲಾಯಿತು.
ಹ್ಯೂಮಾನಿಟಿ ಟ್ರಸ್ಟಿನ ರೋಶನ್ ಬೆಳ್ಮಣ್, ಸ್ಫೂರ್ತಿ ವಿಶೇಷ ಮಕ್ಕಳ ಶಾಲೆಯ ಸ್ಥಾಪಕ ಪ್ರಕಾಶ್ ಜೆ. ಶೆಟ್ಟಿಗಾರ್, ಕೆಥೋಲಿಕ್ ಸಭಾದ ಅಧ್ಯಕ್ಷ ಆಲ್ವೀನ್ ರೊಡ್ರಿಗಸ್, ಬರಹಗಾರ ಲಾಯ್ಡ್ ರೇಗೋ ತಾಕೊಡೆ, ವಕೀಲ ನಾಗೇಶ್ ಶೆಟ್ಟಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಹೆಲ್ಪಿಂಗ್ ಫ್ರೆಂಡ್ಸ್ ಇಸ್ರೇಲ್‌ನ ಸಂಸ್ಥಾಪಕ ಸುನಿಲ್ ಮೆಂಡೋನ್ಸಾ ಉಪಸ್ಥಿತರಿದ್ದರು.ಕಳೆದ 28 ವರ್ಷಗಳಿಂದ ಬಾಡಿಗೆ ಮನೆಯಲ್ಲಿ ಅಸಹಾಯಕ ಪರಿಸ್ಥಿತಿಯಲ್ಲಿ ವಾಸಿಸುತ್ತಿದ್ದ ಲಾರೆನ್ಸ್ ಮೆಂಡೋನ್ಸಾ ಕುಟುಂಬಕ್ಕೆ ಹೆಲ್ಪಿಂಗ್ ಫ್ರೆಂಡ್ಸ್ ಇಸ್ರೇಲ್ ಸೂರನ್ನು ನಿರ್ಮಿಸುವ ಮೂಲಕ ಮಾನವೀಯತೆ ತೋರಿದೆ.
ಮನುಷ್ಯತ್ವಕ್ಕೆ ಮಾನವೀಯ ಧರ್ಮ ಎಂಬ ಧ್ಯೇಯ ವಾಕ್ಯವನ್ನು ಹೊಂದಿರುವ ಈ ಸಂಸ್ಥೆಯು ಕಳೆದ ಎಂಟು ವರ್ಷಗಳಿಂದ 1 ಕೋಟಿಗೂ ಅಧಿಕ ಹಣವನ್ನು ಸಂಗ್ರಹಿಸಿ ಹಿಂದುಳಿದ ವರ್ಗದ ಮಕ್ಕಳಿಗೆ ವಿದ್ಯಾಭ್ಯಾಸ, ಚಿಕಿತ್ಸೆಗೆ ಸಹಾಯಧನವನ್ನು ನೀಡುತ್ತಾ ಬರುತ್ತಿರುವುದು ಶ್ಲಾಘನೀಯ.