ಇಲ್ಲಿನ ಯಕ್ಷಗಾನ ಕಲಾರಂಗ 2012ರಲ್ಲಿ ವಿದ್ಯಾಪೋಷಕ್ ಯೋಜನೆಯ ಫಲಾನುಭವಿ ವಿದ್ಯಾರ್ಥಿನಿ ಪಲ್ಲವಿ ಮತ್ತು ಆಕೆಯ ತಂದೆ ಯಕ್ಷಗಾನ ಹಾಸ್ಯ ಕಲಾವಿದ ಭೋಜ ಮರಕಾಲ ಅವರ ಕುಟುಂಬಕ್ಕೆ ಮನೆಯನ್ನು ನಿರ್ಮಿಸಿಕೊಟ್ಟಿತು.

ಉಡುಪಿ: ಇಲ್ಲಿನ ಯಕ್ಷಗಾನ ಕಲಾರಂಗ 2012ರಲ್ಲಿ ವಿದ್ಯಾಪೋಷಕ್ ಯೋಜನೆಯ ಫಲಾನುಭವಿ ವಿದ್ಯಾರ್ಥಿನಿ ಪಲ್ಲವಿ ಮತ್ತು ಆಕೆಯ ತಂದೆ ಯಕ್ಷಗಾನ ಹಾಸ್ಯ ಕಲಾವಿದ ಭೋಜ ಮರಕಾಲ ಅವರ ಕುಟುಂಬಕ್ಕೆ ಮನೆಯನ್ನು ನಿರ್ಮಿಸಿಕೊಟ್ಟಿತು. ಸಂಸ್ಥೆಯು ಪ್ರತಿಭಾವಂತ ಬಡ ವಿದ್ಯಾರ್ಥಿಗಳಿಗೆ ಮತ್ತು ಯಕ್ಷಗಾನ ಕಲಾವಿದರಿಗೆ 100 ಮನೆಗಳನ್ನು ಕಟ್ಟಿಕೊಟ್ಟಿದ್ದು, ಈ ಹಿನ್ನೆಲೆಯಲ್ಲಿ ‘ಸೂರು ನೂರರ ಸಡಗರ’ ಎಂಬ ಕಾರ್ಯಕ್ರಮ ಆಯೋಜಿಸಿತ್ತು. ಕಾರ್ಯಕ್ರಮವನ್ನು ಸೋದೆ ಮಠದ ಶ್ರೀ ವಿಶ್ವವಲ್ಲಭತೀರ್ಥ ಶ್ರೀಪಾದರು ಉದ್ಘಾಟಿಸಿದರು. ಯಕ್ಷಗಾನ ಕಲಾರಂಗ ಸಮರ್ಪಣಾ ಭಾವದಿಂದ ಮಾಡಿದ ಕೆಲಸ ಲೋಕಕ್ಕೆ ಮಾದರಿಯಾಗಿದೆ. ದಾನಿಗಳು ಈ ಮಾನವೀಯ ಕಾರ್ಯಕ್ರಮಕ್ಕೆ ಹೃದಯ ತುಂಬಿ ಸ್ಪಂದಿಸಿದ್ದಾರೆ. ಇದಕ್ಕೆ ಕಲಾ ರಂಗದ ನಾಯಕತ್ವ ಮತ್ತು ಕಾರ್ಯಕರ್ತರ ಶ್ರದ್ಧೆಯ ದುಡಿಮೆಗೆ ಸಂದ ಉಡುಗೊರೆಯಾಗಿದೆ ಎಂದು ಅವರು ಹೇಳಿದರು. ಮಾಹೆ ಸಹಕುಲಾಧಿಪತಿ ಡಾ. ಎಚ್.ಎಸ್. ಬಲ್ಲಾಳ್‌ ಅಧ್ಯಕ್ಷತೆ ವಹಿಸಿದ್ದು, ಮಾಹೆಯ ಅಧ್ಯಕ್ಷ ಡಾ. ರಂಜನ್ ಪೈ ಅವರು 10 ಮನೆಗಳನ್ನು ನಿರ್ಮಿಸಿಕೊಡುವ ಭರವಸೆ ನೀಡಿರುವುದನ್ನು ಉಲ್ಲೇಖಿಸಿದರು. ಕರ್ಣಾಟಕ ಬ್ಯಾಂಕ್‍ನ ಕಾರ್ಯನಿರ್ವಾಹಕ ನಿರ್ದೇಶಕ ಎಂ. ರಾಘವೇಂದ್ರ ಭಟ್ ಸೂರು ನೂರು ಸಂಚಿಕೆ ಬಿಡುಗಡೆ ಮಾಡಿ, ತಮ್ಮ ಬ್ಯಾಂಕ್ ಎರಡು ಮನೆಗಳ ಪ್ರಾಯೋಜಕತ್ವ ವಹಿಸಿಕೊಳ್ಳಲಿದೆ ಎಂದರು.

ಗೀತಾನಂದ ಫೌಂಡೇಶನ್‌ನ ಪ್ರವರ್ತಕ ಆನಂದ ಸಿ. ಕುಂದರ್ ಶುಭಾಶಂಸನೆಗೈದರು. ಶಾಸಕ ಯಶ್‍ಪಾಲ್ ಸುವರ್ಣ, ಗುರ್ಮೆ ಸುರೇಶ್ ಶೆಟ್ಟಿ, ಕಿರಣ್ ಕುಮಾರ್ ಕೊಡ್ಗಿ ಹಾಗೂ ಗುರುರಾಜ ಗಂಟಿಹೊಳೆ ಅವರು ಸಂಸ್ಥೆಯನ್ನು ಅಭಿನಂದಿಸಿದರು. ಸಂಸ್ಥೆಯ ಹಿಂದಿನ ಅಧ್ಯಕ್ಷರಾದ ಡಾ. ತಲ್ಲೂರು ಶಿವರಾಮ ಶೆಟ್ಟಿ, ಕೆ. ಗಣೇಶ್ ರಾವ್ ಉಪಸ್ಥಿತರಿದ್ದರು.

ಮನೆಗಳ ಪ್ರಾಯೋಜಕತ್ವ ವಹಿಸಿದ ಎಲ್ಲ ದಾನಿಗಳನ್ನು ಗೌರವಿಸಲಾಯಿತು. ಸಭಾ ಕಾರ್ಯಕ್ರಮಕ್ಕೂ ಮೊದಲು ಮನೆ ನಿರ್ಮಾಣದ ಕುರಿತ ಸಾಕ್ಷ್ಯಚಿತ್ರವನ್ನು ಪ್ರದರ್ಶಿಸಲಾಯಿತು. ನಿವೃತ್ತ ಪ್ರಾಂಶುಪಾಲ ಎ. ರಘುಪತಿ ಭಟ್ ಪ್ರದರ್ಶನಕ್ಕೆ ವ್ಯವಸ್ಥೆಗೊಳಿಸಿದ ಸೂರು ನೂರರ ಚಿತ್ರ ಸಂಪುಟವನ್ನು ಅನಾವರಣಗೊಳಿಸಿದರು.

ಸಂಸ್ಥೆಯ ಅಧ್ಯಕ್ಷ ಎಂ. ಗಂಗಾಧರ ರಾವ್ ಸ್ವಾಗತಿಸಿದರು. ನಾರಾಯಣ ಎಂ. ಹೆಗಡೆ ವಂದಿಸಿದರು. ಹೃದಯಸ್ಪರ್ಶಿ, ಸ್ಮರಣೀಯ ಕಾರ್ಯಕ್ರಮದಲ್ಲಿ ಕಾರ್ಯದರ್ಶಿ ಮುರಲಿ ಕಡೆಕಾರ್ ಸೂರು ನೂರು ಸಾಗಿ ಬಂದ ವಿವರಗಳೊಂದಿಗೆ ನಿರೂಪಿಸಿದರು. ವಿದ್ಯಾಪ್ರಸಾದ್ ಸಹಕರಿಸಿದರು.