ಸಮೀಕ್ಷೆ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶೇ.63.41 ಪ್ರಗತಿ

| Published : Oct 07 2025, 01:03 AM IST

ಸಾರಾಂಶ

ಶಾಲಾ ಶಿಕ್ಷಣ ಸಚಿವ ಎಸ್.ಮಧು ಬಂಗಾರಪ್ಪ ಅಧ್ಯಕ್ಷತೆಯಲ್ಲಿ ಸೋಮವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಾಮಾಜಿಕ ಶೈಕ್ಷಣಿಕ ಸಮೀಕ್ಷೆ ಪ್ರಗತಿ ಪರಿಶೀಲನೆ ಸಭೆ ನಡೆಯಿತು.

ಮಂಗಳೂರು: ರಾಜ್ಯದಲ್ಲಿ ನಡೆಯುತ್ತಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸೋಮವಾರ ಮಧ್ಯಾಹ್ನ 1 ಗಂಟೆವರೆಗೆ ಶೇ.63.41 ಮನೆಗಳ ಸಮೀಕ್ಷೆ ಪೂರ್ಣಗೊಂಡಿದೆ.ಶಾಲಾ ಶಿಕ್ಷಣ ಸಚಿವ ಎಸ್.ಮಧು ಬಂಗಾರಪ್ಪ ಅಧ್ಯಕ್ಷತೆಯಲ್ಲಿ ಸೋಮವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಾಮಾಜಿಕ ಶೈಕ್ಷಣಿಕ ಸಮೀಕ್ಷೆ ಪ್ರಗತಿ ಪರಿಶೀಲನೆ ಸಭೆ ನಡೆಯಿತು.ಸಭೆಗೆ ಮಾಹಿತಿ ನೀಡಿದ ಜಿಲ್ಲಾಧಿಕಾರಿ ದರ್ಶನ್ ಎಚ್.ವಿ., ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 5,86,134 ಮನೆಗಳ ಸಮೀಕ್ಷೆ ನಿಗದಿಪಡಿಸಲಾಗಿದೆ. ಈ ಪೈಕಿ 3,71,694 ಮನೆಗಳ ಸಮೀಕ್ಷೆ ಸೋಮವಾರ ಮಧ್ಯಾಹ್ನದವರೆಗೆ ಪೂರ್ಣಗೊಂಡಿದೆ. ಸಮೀಕ್ಷೆಗೆ ಅ.7ರವರೆಗೆ ಸಮಯಾವಕಾಶವಿದ್ದು, ಜಿಲ್ಲೆಯಲ್ಲಿ ಇನ್ನಷ್ಟು ಪ್ರಗತಿ ಸಾಧಿಸುವ ವಿಶ್ವಾಸವಿದೆ ಎಂದು ಹೇಳಿದರು.

ಸುಳ್ಯದಲ್ಲಿ ಶೇ.100 ಪ್ರಗತಿ:

ಸುಳ್ಯ ತಾಲೂಕಿನಲ್ಲಿ ಶೇ.100ರಷ್ಟು ಸಮೀಕ್ಷೆ ಕಾರ್ಯ ಮುಗಿದಿದೆ. ಮಂಗಳೂರು ಮಹಾನಗರ ವ್ಯಾಪ್ತಿಯಲ್ಲಿ 1,09,151 ಮನೆಗಳ ಸಮೀಕ್ಷೆ ಮುಗಿದಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.ಶಾಲಾ ಶಿಕ್ಷಣ ಸಚಿವ ಎಸ್.ಮಧು ಬಂಗಾರಪ್ಪ ಮಾತನಾಡಿ, ಶಿಕ್ಷಕರು ಸಮೀಕ್ಷೆ ಕಾರ್ಯದಲ್ಲಿ ಬಹಳಷ್ಟು ಸಹಕರಿಸಿದ್ದಾರೆ. ದಸರಾ ಸಮಯದಲ್ಲಿಯೂ ಕಾರ್ಯ ನಿರ್ವಹಿಸುವ ಮೂಲಕ ಶ್ಲಾಘನೀಯ ಸೇವೆ ಮಾಡಿದ್ದಾರೆ. ಈ ಸಮೀಕ್ಷೆಯು ಸರ್ವರನ್ನೂ ಒಳಗೊಂಡಿರಬೇಕು ಎಂಬುದು ಮುಖ್ಯಮಂತ್ರಿಗಳ ಆಶಯ ಎಂದರು.

ಸಮೀಕ್ಷೆಗೆ ಶಾಲಾ ಶಿಕ್ಷಣ ಇಲಾಖೆಯು ಅತ್ಯಧಿಕ ಮಾನವ ಸಂಪನ್ಮೂಲವನ್ನು ಒದಗಿಸಿದೆ. ಸಮೀಕ್ಷೆ ನಡೆಸುವಾಗ ಕ್ಷೇತ್ರ ಮಟ್ಟದಲ್ಲಿ ಹಲವು ಸಮಸ್ಯೆಗಳಿದ್ದರೂ ಶಿಕ್ಷಕರು ಉತ್ತಮವಾಗಿ ಕಾರ್ಯ ನಿರ್ವಹಿಸಿದ್ದಾರೆ. ಕೆಲವೊಂದು ಸಮಸ್ಯೆಗಳ ಬಗ್ಗೆ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಗಮನಕ್ಕೆ ತಂದು ಮಾರ್ಗದರ್ಶನ ಪಡೆದು ಪರಿಹರಿಸುವಂತೆ ಅವರು ಸೂಚಿಸಿದರು.ವಿಧಾನ ಪರಿಷತ್ ಸದಸ್ಯರಾದ ಐವನ್ ಡಿಸೋಜ ಮತ್ತು ಮಂಜುನಾಥ ಭಂಡಾರಿ, ರಾಜ್ಯ ಹಿಂದುಳಿದ ವರ್ಗ ಆಯೋಗದ ಸದಸ್ಯೆ ಪ್ರತಿಭಾ ಕುಳಾಯಿ, ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ನರ್ವಾಡೆ ವಿನಾಯಕ್ ಕಾರ್ಬಾರಿ, ಉಪವಿಭಾಗಾಧಿಕಾರಿ ಮೀನಾಕ್ಷಿ ಆರ್ಯ, ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಶಶಿಧರ್ ಮತ್ತಿತರರು ಇದ್ದರು.ಡಿಸಿಯನ್ನು ತರಾಟೆಗೆ ತೆಗೆದುಕೊಂಡ ಪ್ರತಿಭಾ ಕುಳಾಯಿ

ಸಭೆಯಲ್ಲಿ ರಾಜ್ಯ ಹಿಂದುಳಿದ ವರ್ಗ ಆಯೋಗದ ಸದಸ್ಯೆ ಪ್ರತಿಭಾ ಕುಳಾಯಿ ಅವರು ಜಿಲ್ಲಾಧಿಕಾರಿಯನ್ನು ತರಾಟೆಗೆ ತೆಗೆದುಕೊಂಡ ಪ್ರಸಂಗ ನಡೆಯಿತು. 2 ದಿನ ಹಿಂದೆ ತಾನು ಬಂದಿದ್ದಾಗ ಜಿಲ್ಲಾಧಿಕಾರಿಗೆ 5 ನಿಮಿಷ ಮಾತನಾಡಲೂ ಸಮಯ ಇರಲಿಲ್ಲ. ದಾಖಲೆಗಾಗಿ ಫೋಟೊ ಕೇಳಿದ್ದರೂ ತಿರಸ್ಕರಿಸಿದ್ದೀರಿ. ಈ ಹಿಂದೆ ಹಲವು ಜಿಲ್ಲೆಗಳಿಗೆ ತಾನು ಭೇಟಿ ನೀಡಿದ್ದಾಗ ಅಲ್ಲಿಯವರ ಸಹಕಾರವನ್ನು ನೋಡಿದ್ದೇನೆ. ಆದರೆ ಇಲ್ಲಿ ನೀವು ಕೊಡುವ ಗೌರವ ಇದೇ ಏನು ಎಂದು ಪ್ರಶ್ನಿಸಿದರು. ಸಭೆಯಲ್ಲಿ ವೇದಿಕೆಗೆ ಕರೆಯದ ಬಗ್ಗೆಯೂ ಆಕ್ಷೇಪಿಸಿ, ಇದು ನನ್ನ ಇಲಾಖೆಗೆ ಸಂಬಂಧಿಸಿದ ಸಭೆ, ಇಲ್ಲಿ ನಾವು ಬಂದಿರೋದು ಕೆಲಸದ ಉದ್ದೇಶಕ್ಕೆ ಮಾತ್ರ ಎಂದರು. ಕೊನೆಗೆ ಮಂಜುನಾಥ ಭಂಡಾರಿ ಅವರು ಪ್ರತಿಭಾ ಕುಳಾಯಿ ಅವರನ್ನು ವೇದಿಕೆಗೆ ಕರೆತಂದರು.