ರೋವರ್ಸ್‌ ಯಂತ್ರದಿಂದ ಸರ್ವೇ: ಶಾಸಕ ವಿನಯ ಕುಲಕರ್ಣಿ

| Published : Feb 28 2024, 02:30 AM IST

ಸಾರಾಂಶ

ಮಧ್ಯವರ್ತಿಗಳ ಹಾವಳಿ, ಖಾಸಗಿಯವರ ಹೆಚ್ಚು ಹಣದ ಬೇಡಿಕೆ ತಪ್ಪಿಸಿ, ಇಲಾಖೆಯಿಂದಲೇ ತ್ವರಿತವಾಗಿ ಸರ್ವೇ ಕಾರ್ಯ ಕೈಗೊಳ್ಳಲು ಈ ಆಧುನಿಕ ಉಪಕರಣ ರೋವರ್ಸ್ ನೀಡಲಾಗಿದೆ ಎಂದು ಶಾಸಕ ವಿನಯ ಕುಲಕರ್ಣಿ ಹೇಳಿದರು.

ಕನ್ನಡಪ್ರಭ ವಾರ್ತೆ ಧಾರವಾಡ

ಕರಾರುವಾಕ್ಕಾಗಿ, ತ್ವರಿತವಾಗಿ ಹೊಲಗಳ ಸರ್ವೇ ಮಾಡುವ ಐದು ರೋವರ್ಸ್ ಯಂತ್ರಗಳನ್ನು ಸರ್ಕಾರ ಧಾರವಾಡ ಜಿಲ್ಲೆಗೆ ನೀಡಿದ್ದು, ಶಾಸಕ ವಿನಯ ಕುಲಕರ್ಣಿ ಧಾರವಾಡ ಭೂದಾಖಲೆಗಳ ಇಲಾಖೆಯ ಉಪನಿರ್ದೇಶಕ ಮೋಹನ ಶಿವಣ್ಣವರ ಅವರಿಗೆ ಭಾನುವಾರ ಕಿತ್ತೂರು ಸರ್ಕಾರಿ ಪ್ರವಾಸಿ ಮಂದಿರದಲ್ಲಿ ವಿತರಿಸಿದರು.

ರೈತರು ತಮ್ಮ ಜಮೀನುಗಳ ಸರ್ವೆ ಮಾಡಿಸಲು ಭೂದಾಖಲೆಗಳ ಇಲಾಖೆಯಲ್ಲಿನ ಸಿಬ್ಬಂದಿ ಕೊರತೆ, ಅವರಿಗೆ ಅತಿಯಾದ ಕಾರ್ಯಬಾಹುಳ್ಯದಿಂದ ಸರ್ವೇ ತುಂಬಾ ತಡವಾಗುತ್ತಿದೆ. ಇದರಿಂದ ರೈತರಿಗೆ ತುಂಬಾ ತೊಂದರೆ ಆಗಿದೆ. ಸರ್ಕಾರ ಆಧುನಿಕ ಉಪಕರಣಗಳನ್ನು ಪೂರೈಸಿ, ಸಮಸ್ಯೆ ಬಗೆಹರಿಸಿಬೇಕು ಎಂದು ಬೆಳಗಾವಿಯಲ್ಲಿ ಜರುಗಿದ ಚಳಿಗಾಲ ಅಧಿವೇಶನದಲ್ಲಿ ಚುಕ್ಕೆ ಗುರುತಿನ ಪ್ರಶ್ನೆ ಕೇಳಿ ಸರ್ಕಾರದ ಗಮನ ಸಳೆದಿದ್ದರು.

ಈ ಕುರಿತು ಮಾತನಾಡಿದ ಶಾಸಕ ‍ವಿನಯ ಕುಲಕರ್ಣಿ, ರೈತರು ತಮ್ಮ ಜಮೀನು ಸರ್ವೆ, ಹಿಸ್ಸಾ ಎಂಟ್ರಿ, ಹದ್ದಬಸ್ತು ಮಾಡಿಸುವುದು ಮುಂತಾದವುಗಳಿಗಾಗಿ ಅರ್ಜಿ ಸಲ್ಲಿಸಿ, ವರ್ಷಾನುಗಟ್ಟಲೇ ಕಾಯಬೇಕಾದ ಸ್ಥಿತಿ ಇದೆ. ಯಂತ್ರದಿಂದ ಸರ್ವೇ ಮಾಡಲು ಖಾಸಗಿ ಅವರು ವಿಪರೀತ ಹಣ ಪಡೆಯುತ್ತಾರೆ. ಇದರಿಂದ ರೈತರ ಶೋಷಣೆ ಆಗುತ್ತಿದೆ. ಮಧ್ಯವರ್ತಿಗಳ ಹಾವಳಿ, ಖಾಸಗಿಯವರ ಹೆಚ್ಚು ಹಣದ ಬೇಡಿಕೆ ತಪ್ಪಿಸಿ, ಇಲಾಖೆಯಿಂದಲೇ ತ್ವರಿತವಾಗಿ ಸರ್ವೇ ಕಾರ್ಯ ಕೈಗೊಳ್ಳಲು ಈ ಆಧುನಿಕ ಉಪಕರಣ ರೋವರ್ಸ್ ನೀಡಲಾಗಿದೆ ಎಂದ ಅವರು, ಸರ್ವೇ ಮಾಡಿಸಲು ಸಾವಿರಾರು ಅರ್ಜಿಗಳು ಬಾಕಿ ಇವೆ ಎಂದು ರೈತರು ದೂರುತ್ತಿದ್ದಾರೆ. ಇಲಾಖೆ ಅಧಿಕಾರಿಗಳು ಧಾರವಾಡ ಸೇರಿದಂತೆ ಬೇಡಿಕೆ ಹೆಚ್ಚಿರುವ ತಾಲೂಕುಗಳಲ್ಲಿ ಈ ರೋವರ್ಸ್ ಯಂತ್ರ ಬಳಿಸಿ, ಸರ್ವೇ ಕಾರ್ಯವನ್ನು ತ್ವರಿತವಾಗಿ ಮುಗಿಸಬೇಕೆಂದು ಸೂಚಿಸಿದರು.

ಕಡಿಮೆ ಸಮಯ

ಸರಿಸುಮಾರು ಒಂದು ಗಂಟೆಯಲ್ಲಿ ಕರಾರುವಕ್ಕಾಗಿ ಒಂದು ಜಮೀನು ಸರ್ವೆ ಮಾಡಬಹುದಾದ ಆಧುನಿಕ ಉಪಕರಣ ರೋವರ್ಸ್ ಯಂತ್ರವನ್ನು ರೈತರ ಜಮೀನುಗಳ ಸರ್ವೆ ಕೆಲಸಕ್ಕಾಗಿ ಪ್ರಥಮವಾಗಿ ಧಾರವಾಡ ಜಿಲ್ಲೆಗೆ ಸರ್ಕಾರ ನೀಡಿದೆ. ಇದನ್ನು ಬಳಸಿಕೊಂಡು ಬಾಕಿ ಅರ್ಜಿಗಳನ್ನು ಪರಿಶೀಲಿಸಿ, ಶೀಘ್ರವಾಗಿ ಅಧಿಕಾರಿಗಳು ವಿಲೇವಾರಿ ಮಾಡಬೇಕು. ಈ ಹಿಂದೆ ರೈತರ ಜಮೀನುಗಳ ಅಳತೆ ಮಾಡುವ ಸಂದರ್ಭದಲ್ಲಿ ಎತ್ತರವಾದ ಬೆಳೆಗಳು ಇದ್ದಾಗ ಹಾಗೂ ಮಳೆ ಬಂದ ಸಂದರ್ಭದಲ್ಲಿ ಭೂ ಮಾಪಕರು ಜಮೀನುಗಳಲ್ಲಿ ಹೋಗಿ ಅಳತೆ ಮಾಡಲು ಸಾಧ್ಯವಾಗದ ಸಂದರ್ಭ, ಸರ್ಕಾರಿ ಕೆರೆಗಳನ್ನು ಮತ್ತು ಅರಣ್ಯ ಜಮೀನುಗಳನ್ನು ಅಳತೆ ಮಾಡುವ ಸಂದರ್ಭದಲ್ಲಿ ಈ ಹಿಂದಿನ ಸಾಂಪ್ರದಾಯಿಕ ಅಳತೆ ಉಪಕರಣಗಳಾದ ಚೈನ್ ಮತ್ತು ಪ್ಲೈನ್ ಟೇಬಲ್ ನಿಂದ ಅಳತೆ ಕೆಲಸ ಕೈಗೊಳ್ಳುವುದು ತುಂಬಾ ಕಷ್ಟಕರವಾಗಿತ್ತು. ಈಗ ರೋವರ್ಸ್ ಉಪಕರಣಗಳಿಂದ ಅಳತೆ ಕೆಲಸವನ್ನು ಸುಗಮವಾಗಿ ಮತ್ತು ನಿಖರವಾಗಿ ಕೈಗೊಳ್ಳಬಹುದೆಂದರು.

ಜಿಲ್ಲೆಯಲ್ಲಿ ಸುಮಾರು 423 ಗ್ರಾಮಗಳಿದ್ದು, ಲಕ್ಷಾಂತರ ರೈತರ ಜಮೀನುಗಳ ಸರ್ವೇ ನಂಬರಗಳಿವೆ. ಅಧಿಕಾರಿಗಳಿಗೆ ಕೆಲಸದ ಒತ್ತಡ ಕಡಿಮೆ‌ ಮಾಡಲು ಮತ್ತು ಸರ್ವೇ ಕಾರ್ಯ ನಿಖರವಾಗಿ ಮಾಡಲು ರೋವರ್ಸ್ ಸಹಾಯ ಮಾಡುತ್ತದೆ. ರೈತರು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕು. ಅಧಿಕಾರಿಗಳು ಈ ಯಂತ್ರ ಬಳಿಸಿ, ರೈತರಿಗೆ ತಕ್ಷಣ ಸರ್ವೆ ಕಾರ್ಯ ಮುಗಿಸಿ, ನೇರವಾಗುವ ಮೂಲಕ ರಾಜ್ಯದ ರೈತರಿಗೆ ಮಾದರಿ ಆಗಬೇಕು ಎಂದರು.

ಭೂ ದಾಖಲೆಗಳ ಅಧಿಕಾರಿ ರಾಜಶೇಖರ ಹಳ್ಳೂರ, ಜಿಲ್ಲಾ ನೌಕರರ ಸಂಘದ ಅಧ್ಯಕ್ಷ ಎಸ್. ಎಫ್. ಸಿದ್ದನಗೌಡರ, ರೈತ ಮುಖಂಡರಾದ ಪ್ರಕಾಶ ಘಾಟಗೆ, ಅರವಿಂದ ಏಗನಗೌಡರ, ಸಂಜೀವ ಲಕ್ಕಮನಹಳ್ಳಿ, ಆರ್.ಸಿ.ದೇಸಾಯಿ, ಭೂಮಾಪಕರಾದ ಮಹಾಂತೇಶ ಬಾಗಿ ಇದ್ದರು.