ಕಡೂರಲ್ಲಿ ಶೇ.91ರಷ್ಟು ಮನೆಗಳ ಸಮೀಕ್ಷೆ ಶ್ಲಾಘನೀಯ: ಜಿ.ಎನ್. ಶ್ರೀಕಂಠಯ್ಯ

| Published : Oct 07 2025, 01:02 AM IST

ಸಾರಾಂಶ

ಕಡೂರು, ಹಿಂದುಳಿದ ವರ್ಗಗಳ ಆಯೋಗದಿಂದ ನಡೆಸುತ್ತಿರುವ ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯಡಿ ತಾಲೂಕಿನಲ್ಲಿ ಇದುವರೆಗೂ ಶೇ.91ರಷ್ಟು ಮನೆಗಳ ಸಮೀಕ್ಷೆ ಕಾರ್ಯ ನಡೆಸಿರುವುದು ಶ್ಲಾಘನೀಯ ಎಂದು ಹಿಂದುಳಿದ ವರ್ಗಗಳ ಆಯೋಗದ ಸದಸ್ಯ ಜಿ.ಎನ್. ಶ್ರೀಕಂಠಯ್ಯ ತಿಳಿಸಿದರು.

ತಾಲೂಕು ಕಚೇರಿಗೆ ಭೇಟಿ । ಸಮೀಕ್ಷೆ ಕಾರ್ಯ ಪ್ರಗತಿ ಕುರಿತು ತಾಲೂಕು ಅಧಿಕಾರಿಗಳ ಅಂಕಿ ಅಂಶಗಳ ಮಾಹಿತಿ

ಕನ್ನಡಪ್ರಭ ವಾರ್ತೆ, ಕಡೂರು

ಹಿಂದುಳಿದ ವರ್ಗಗಳ ಆಯೋಗದಿಂದ ನಡೆಸುತ್ತಿರುವ ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯಡಿ ತಾಲೂಕಿನಲ್ಲಿ ಇದುವರೆಗೂ ಶೇ.91ರಷ್ಟು ಮನೆಗಳ ಸಮೀಕ್ಷೆ ಕಾರ್ಯ ನಡೆಸಿರುವುದು ಶ್ಲಾಘನೀಯ ಎಂದು ಹಿಂದುಳಿದ ವರ್ಗಗಳ ಆಯೋಗದ ಸದಸ್ಯ ಜಿ.ಎನ್. ಶ್ರೀಕಂಠಯ್ಯ ತಿಳಿಸಿದರು. ಪಟ್ಟಣದ ತಾಲೂಕು ಕಚೇರಿಗೆ ಸೋಮವಾರ ಭೇಟಿ ನೀಡಿ ಸಮೀಕ್ಷೆ ಕಾರ್ಯದ ಪ್ರಗತಿ ಕುರಿತ ತಾಲೂಕು ಅಧಿಕಾರಿಗಳಿಂದ ಅಂಕಿ ಅಂಶಗಳ ಮಾಹಿತಿ ಪಡೆದು ಬಳಿಕ ಕನ್ನಡಪ್ರಭದೊಂದಿಗೆ ಮಾತನಾಡಿ, ಈಗಾಗಲೇ ಸಮೀಕ್ಷೆ ಕಾರ್ಯ ರಾಜ್ಯಾದ್ಯಂತ ಉತ್ತಮವಾಗಿ ನಡೆಸಲಾಗುತ್ತಿದೆ. ಈ ನಿಟ್ಟಿನಲ್ಲಿ ಕಡೂರು ತಾಲೂಕಿನಲ್ಲಿಯೂ ನಿಗಧಿಪಡಿಸಿದ 80161 ಮನೆಗಳ ಪೈಕಿ 72028 ಮನೆಗಳ ಸಮೀಕ್ಷೆ ಕಾರ್ಯವನ್ನು ಗಣತಿದಾರರು ಪೂರ್ಣಗೊಳಿಸಿದ್ದಾರೆ. ಬಾಕಿ 8133 ಮನೆಗಳಷ್ಟು ಮಾತ್ರ ಸಮೀಕ್ಷೆಗೆ ಉಳಿದು ಕೊಂಡಿದೆ. ನಿಗಧಿತ ದಿನದೊಳಗೆ ಸಮೀಕ್ಷೆದಾರರು ಪೂರ್ಣಗೊಳಿಸುವ ವಿಶ್ವಾಸವಿದೆ. ತಾಲೂಕಿನ ಅಧಿಕಾರಿಗಳ ತಂಡ, ಗಣತಿದಾರರು ಉತ್ತಮ ತಂಡವಾಗಿ ಕಾರ್ಯನಿರ್ವಹಿಸಿರುವುದು ಹಾಗೂ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಹರೀಶ್ ಅಗ್ನಿ ಎಂಬುವವರು 213 ಮನೆಗಳ ಸಮೀಕ್ಷೆ ಕಾರ್ಯ ನಡೆಸಿ ಆಯೋಗದ ಪ್ರಶಂಸೆಗೆ ಪಾತ್ರರಾಗಿದ್ದಾರೆ ಎಂದರು. ಸಮೀಕ್ಷೆಯಿಂದ ಹೊರ ಉಳಿದಿರುವ ಮನೆಗಳನ್ನು ಅಂತಿಮ ಪಟ್ಟಿ ತಯಾರಿಸಿ ಮತ್ತೊಮ್ಮೆ ಸಮೀಕ್ಷೆಗೆ ಒಳಪಡಿಸಲು ಅವಕಾಶ ನೀಡಲಾಗುತ್ತದೆ. ಆದರೂ ಸಮೀಕ್ಷೆಯಲ್ಲಿ ಮಾಹಿತಿ ನಿರಾಕರಿಸಿದ ಮನೆಗಳನ್ನು ಕೈಬಿಡಲಾಗುತ್ತದೆ. ಒಂದು ವೇಳೆ ಸಮೀಕ್ಷೆಯಲ್ಲಿ ಆಕಸ್ಮಿಕ ತಪ್ಪು ಮಾಹಿತಿ ನಮೂದಾಗಿದ್ದರೂ ಆಪ್‌ ನಲ್ಲಿ ಸರಿಪಡಿಸಲು ಅವಕಾಶವಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಈ ಸಂದರ್ಭದಲ್ಲಿ ಬಿಸಿಎಂ ಜಿಲ್ಲಾಧಿಕಾರಿ ಮಂಜುನಾಥ್, ತಹಸೀಲ್ದಾರ್ ಸಿ.ಎಸ್.ಪೂರ್ಣಿಮಾ, ಇಒ ಸಿ.ಆರ್. ಪ್ರವೀಣ್, ಬಿಸಿಎಂ ತಾಲೂಕು ಅಧಿಕಾರಿ ಎಸ್.ಎಸ್. ದೇವರಾಜ್, ಕಡೂರು ಬೀರೂರು ಬಿಇಒಗಳಾದ ತಿಮ್ಮಯ್ಯ, ಬಿ.ಚೋಪ್ತಾರ್, ಹರೀಶ್ ಅಗ್ನಿ ಮತ್ತಿತರಿದ್ದರು.6ಕೆಡಿಆರ್ 2ಕಡೂರು ಪಟ್ಟಣದ ತಾಲೂಕು ಕಚೇರಿಗೆ ಹಿಂದುಳಿದ ವರ್ಗಗಳ ಆಯೋಗದ ಸದಸ್ಯ ಜಿ.ಎನ್. ಶ್ರೀಕಂಠಯ್ಯ ಭೇಟಿ ನೀಡಿದರು. ಮಂಜುನಾಥ್, ಸಿ.ಎಸ್.ಪೂರ್ಣಿಮಾ, ಸಿ.ಆರ್. ಪ್ರವೀಣ್, ಎಸ್.ಎಸ್. ದೇವರಾಜ್, ತಿಮ್ಮಯ್ಯ, ಬಿ.ಚೋಪ್ತಾರ್, ಹರೀಶ್ ಅಗ್ನಿ ಇದ್ದರು.