ನ. 5ರವರೆಗೆ ದೇವದಾಸಿಯರ ಸಮೀಕ್ಷೆ: ಎಚ್. ಆಂಜನೇಯ

| Published : Sep 17 2025, 01:06 AM IST / Updated: Sep 17 2025, 01:07 AM IST

ಸಾರಾಂಶ

ದೇವದಾಸಿಯರ ಮರು ಸಮೀಕ್ಷೆ ಸೆ.15ರಿಂದ ಆರಂಭವಾಗಿದ್ದು, ನವೆಂಬರ್ 5ರವರೆಗೆ ನಡೆಯಲಿದ್ದು, ಸಾಲ, ಸೌಲಭ್ಯ ಕೊಡಿಸುವುದಾಗಿ ಮಧ್ಯವರ್ತಿಗಳು ಹುಟ್ಟಿಕೊಂಡಿದ್ದಾರೆ.

ಕನ್ನಡಪ್ರಭ ವಾರ್ತೆ ಹೊಸಪೇಟೆ

ದೇವದಾಸಿಯರ ಮರು ಸಮೀಕ್ಷೆ ಸೆ.15ರಿಂದ ಆರಂಭವಾಗಿದ್ದು, ನವೆಂಬರ್ 5ರವರೆಗೆ ನಡೆಯಲಿದ್ದು, ಸಾಲ, ಸೌಲಭ್ಯ ಕೊಡಿಸುವುದಾಗಿ ಮಧ್ಯವರ್ತಿಗಳು ಹುಟ್ಟಿಕೊಂಡಿದ್ದಾರೆ. ಈ ಕುರಿತು ಜಿಲ್ಲಾಡಳಿತ ನಿಗಾ ವಹಿಸಬೇಕು ಮತ್ತು ದೇವದಾಸಿ ಮಹಿಳೆಯರು ಜಾಗ್ರತೆ ವಹಿಸಬೇಕು. ಸಮೀಕ್ಷೆ ಕೂಡ ಪಾರದರ್ಶಕವಾಗಿ ನಡೆಯಬೇಕು ಎಂದು ಮಾಜಿ ಸಚಿವ ಎಚ್.ಆಂಜನೇಯ ತಿಳಿಸಿದರು.

ನಗರದ ಪತ್ರಿಕಾಭವನದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ತಲತಲಾಂತರದಿಂದ ಶೋಷಿತ ಅಸ್ಪೃಶ್ಯ ಸಮುದಾಯಗಳನ್ನು ಮೂಢನಂಬಿಕೆ ಹೆಸರಿನಲ್ಲಿ ಶೋಷಣೆ ಮಾಡಿಕೊಂಡು ಬರಲಾಗಿತ್ತು. ತಿಳಿವಳಿಕೆ ಕೊರತೆ, ಅನಕ್ಷರತೆ ಮತ್ತು ದೊಡ್ಡ ಸಮುದಾಯದ ದಬ್ಬಾಳಿಕೆಯಿಂದ ನಡೆದಿದೆ. ನಿಷೇಧ ಕಾಯಿದೆ ಜಾರಿಗೆ ಬಂದ ಬಳಿಕ 1993-94 ಮತ್ತು 2007-08ರಲ್ಲಿ ಸಮೀಕ್ಷೆ ಮಾಡಲಾಗಿತ್ತು. ಈ ಸಮೀಕ್ಷೆಗಳಿಂದ ಹೊರಗುಳಿದವರನ್ನು ಸೇರಿಸಲು ಮರು ಸಮೀಕ್ಷೆ ಆರಂಭಿಸಲಾಗಿದೆ. ಇದರಲ್ಲಿ ಮೂರು ಪೀಳಿಗೆ ಹೆಸರು ನೋಂದಾಯಿಸಬಹುದು. ಯಾರೂ ಇದರಿಂದ ವಂಚಿತರಾಗಬಾರದು ಎಂದರು.

ಈ ಪದ್ದತಿ ಇನ್ನೂ ಜೀವಂತವಿದೆ. ಇನ್ನೂ ಅದರಲ್ಲೇ ಹೋಗುತ್ತಿರುವವರನ್ನು ಬಿಡುಗಡೆ ಮಾಡಬೇಕು. ಸಾಮಾಜಿಕ ನ್ಯಾಯ ಒದಗಿಸಲು ಅವರಿಗೆ ನೆರವಾಗಿರಲು, ಆರ್ಥಿಕ, ಸಾಮಾಜಿಕವಾಗಿ ಸದೃಢಗೊಳಿಸಿ ಸಮಾಜದ ಮುಖ್ಯವಾಹಿನಿಗೆ ತರಲು ನಮ್ಮ ಸರ್ಕಾರ ಕೆಲಸ ಮಾಡುತ್ತಿದೆ. ಅವಕಾಶ ವಂಚಿತರಿಗೆ ಸರ್ಕಾರ ಸಮೀಕ್ಷೆ ನಡೆಸುತ್ತಿದೆ. ಜಿಲ್ಲೆಯ ಎಲ್ಲ ತಾಲೂಕು ಕೇಂದ್ರದ ಸಿಡಿಪಿಒ ಕಚೇರಿಗಳಲ್ಲಿ ಸಮೀಕ್ಷೆ ವರದಿ ಬಂದ ಮೇಲೆ ಮೂರು ಪೀಳಿಗೆಗೆ ಅನುಕೂಲವಾಗಲಿದೆ. ಮೂರು ತಲೆಮಾರು ಸೌಲಭ್ಯ ಒದಗಿಸಲು ನಿರ್ಧರಿಸಿ ಸರ್ಕಾರ ಸಮೀಕ್ಷೆ ನಡೆಸುತ್ತಿದೆ ಎಂದರು.

ಒಡೆದಾಳುವ ನೀತಿ:

ಬಿಜೆಪಿ ಪಕ್ಷದ್ದು ಒಡೆದಾಳುವ ನೀತಿ, ನಮ್ಮದು ಒಗ್ಗೂಡಿಸುವ ನೀತಿ, ಯಾವುದೇ ಧರ್ಮ ಒಡೆಯಲು ಸಾಧ್ಯವಿಲ್ಲ. ನಾಸ್ತಿಕ ಕಾಲಂನಲ್ಲಿ ದೇವರಿಲ್ಲ ಎನ್ನುವವನು ಬರೆಸಲಿ. ಎಲ್ಲರಿಗೂ ಸ್ವತಂತ್ರ‍್ಯ ಇದೆ. ಧರ್ಮದ ಅಫೀಮಿನಲ್ಲಿ ಇರುವವರೇ ಹೆಚ್ಚಿದ್ದಾರೆ. ಅವರು ಅವರ ಧರ್ಮ ಬರೆಸೇ ಬರೆಸುತ್ತಾರೆ ಎಂದರು.

ಸೆ.22ರಿಂದ ನಡೆಯಲಿರುವ ಸಮೀಕ್ಷೆಯಲ್ಲಿ ಮಾದಿಗರಲ್ಲಿ ಗೊಂದಲ ಬೇಡ, ಮುಚ್ಚು ಮರೆಯಿಲ್ಲದೆ ಮಾದಿಗರು ಅಂತ ಬರೆಸಬೇಕು ಎಂದರು.

ಹುಡಾ ಅಧ್ಯಕ್ಷ ಇಮಾಮ್ ನಿಯಾಜಿ, ಅಂಬಣ್ಣ ಅರೋಲಿಕ್, ದಾನಪ್ಪ ನಿಲೋಗಲ್, ಚಂದುಲಿಂಗ ಕಲಾಬಂಡಿ, ಕೊಟಗಿನಹಾಳ್ ಮಲ್ಲಿಕಾರ್ಜುನ, ಕೆ.ಲಕ್ಷ್ಮಣ, ಎಚ್.ಶೇಷು, ಸಣ್ಣ ಮಾರೆಪ್ಪ, ಮಂಜುಳಾ ಮಾಳಗಿ, ಶ್ರೀನಿವಾಸ್ ಮತ್ತಿತರರಿದ್ದರು.