ಸಾರಾಂಶ
ಓರ್ವೆಲ್ ಫರ್ನಾಂಡೀಸ್
ಹಳಿಯಾಳ: ಪಟ್ಟಣ ಸೇರಿದಂತೆ ತಾಲೂಕಿನಲ್ಲಿ ಆಶ್ರಯ ಮನೆಗಳ ದುರ್ಬಳಕೆ ಮಾಡಿದವರನ್ನು ಗುರುತಿಸಲು ಸಮೀಕ್ಷಾ ಕಾರ್ಯ ಪುರಸಭೆ ವತಿಯಿಂದ ಆರಂಭವಾಗಿದ್ದು, ಮಾರಾಟ ಮಾಡಿದ ಹಾಗೂ ಬಾಡಿಗೆ ನೀಡಿದ ಆಶ್ರಯ ಮನೆಗಳನ್ನು ಕಬ್ಜಾ ಮಾಡಿಕೊಳ್ಳುವ ಪ್ರಕ್ರಿಯೆ ಶೀಘ್ರದಲ್ಲಿಯೇ ಆರಂಭಗೊಳ್ಳಲಿದೆ.ಈ ಸಮೀಕ್ಷಾ ಕಾರ್ಯವು ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ, ಕ್ಷೇತ್ರದ ಶಾಸಕ ಆರ್.ವಿ. ದೇಶಪಾಂಡೆ ಅವರ ಕಟ್ಟುನಿಟ್ಟಿನ ಆದೇಶದ ಮೇರೆಗೆ ಆರಂಭವಾಗಿದೆ.
ಪಟ್ಟಣದಲ್ಲಿ ಜೂ. 27ರಂದು ಶಾಸಕ ಆರ್.ವಿ. ದೇಶಪಾಂಡೆ ಅವರು ಜನಸ್ಪಂದನ ಸಭೆ ನಡೆಸಿದ್ದರು. ಆಗ ಸಾರ್ವಜನಿಕರು ಪಟ್ಟಣದಲ್ಲಿ ಆಶ್ರಯ ಯೋಜನೆಯ ದುರ್ಬಳಕೆ, ಮಾರಾಟ, ಬಾಡಿಗೆ ಹಾಗೂ ಲೀಜ್ ನೀಡಲಾಗುತ್ತಿರುವ ಬಗ್ಗೆ ಶಾಸಕ ದೇಶಪಾಂಡೆ ಅವರ ಗಮನಕ್ಕೆ ತಂದು ದುರ್ಬಳಕೆ ತಡೆಯಲು ಆಗ್ರಹಿಸಿದ್ದರು. ಅದಕ್ಕೆ ಸ್ಪಂದಿಸಿದ ದೇಶಪಾಂಡೆ ಅವರು ಆಶ್ರಯ ಮನೆಗಳ ಸಮೀಕ್ಷೆ ನಡೆಸಲು ಸೂಚಿಸಿದ್ದರು. ಅಲ್ಲದೇ ಮಾರಾಟ ಮಾಡಿದ ಮತ್ತು ಬಾಡಿಗೆ ನೀಡಿದ ಮನೆಗಳ ವಶಕ್ಕೆ ಪಡೆಯಲು ಪುರಸಭೆಯವರಿಗೆ ಆದೇಶಿಸಿದ್ದರು.ಸಾವಿರಾರು ಆಶ್ರಯ ಮನೆಗಳು: ಪಟ್ಟಣದಲ್ಲಿ ವಿವಿಧ ಯೋಜನೆಯಲ್ಲಿ ಮೂರೂವರೆ ಸಾವಿರಕ್ಕಿಂತ ಹೆಚ್ಚು ಆಶ್ರಯ ಮನೆಗಳ ನಿರ್ಮಾಣವಾಗಿವೆ. ಚಿಬ್ಬಲಗೇರಿ ಮಾರ್ಗದಲ್ಲಿ ಆಶ್ರಯ ಬಡಾವಣೆ ತಲೆಯೆತ್ತಿದೆ. ಅದನ್ನು ದೇಶಪಾಂಡೆ ಆಶ್ರಯ ನಗರವೆಂದೇ ಕರೆಯುತ್ತಾರೆ. ಅಲ್ಲಿ ಅಂದಾಜು 800 ಮನೆಗಳಿವೆ. ಚವ್ಹಾಣ ಆಶ್ರಯ ಪ್ಲಾಟ್ ಹಾಗೂ ಚರ್ಚ್ ಬಳಿಯ ಪ್ಲಾಟ್‌ನಲ್ಲಿ ಅಂದಾಜು 150ಕ್ಕೂ ಹೆಚ್ಚು ಆಶ್ರಯ ಮನೆಗಳಿವೆ. ಹೊಸೂರು ಗಲ್ಲಿಯಲ್ಲಿ ಅಂದಾಜು 180 ಮನೆಗಳಿವೆ. ಇನ್ನುಳಿದ ಮನೆಗಳು ಪಟ್ಟಣದ ವಿವಿಧ ವಾರ್ಡ್‌ಗಳಲ್ಲಿವೆ.
ಬಾಡಿಗೆ ಮನೆಗಳು ಸಿಗುತ್ತಿಲ್ಲ: ಪಟ್ಟಣದಲ್ಲಿ ಇರುವ ಸಕ್ಕರೆ ಕಾರ್ಖಾನೆಯಲ್ಲಿ ಕೆಲಸ ಮಾಡಲು ಹೊರರಾಜ್ಯ ಜಿಲ್ಲೆಯಿಂದ ಬರುವ ಕಾರ್ಮಿಕರಾಗಲಿ, ಇತರ ದಿನಗೂಲಿಗಳು ಕಡಿಮೆ ಬಾಡಿಗೆ ಮನೆಗಳನ್ನು ಆಶ್ರಯಿಸುತ್ತಿದ್ದಾರೆ. ಹೀಗಾಗಿ ಬಾಡಿಗೆ ಮನೆಗಳಿಗೆ ಎಲ್ಲಿಲ್ಲದ ಬೇಡಿಕೆ ಇದೆ. ಈ ನಡುವೆ ಹಲವೆಡೆ ಆಶ್ರಯ ಮನೆ ಇರುವವರು ಅವುಗಳನ್ನು ಬಾಡಿಗೆ, ಮಾರಾಟ ಮಾಡಿ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂಬ ದೂರು ವ್ಯಾಪಕವಾಗಿ ಕೇಳಿಬರುತ್ತಿವೆ. ಹೀಗಾಗಿ ಆಶ್ರಯ ಮನೆಗಳ ಸಮೀಕ್ಷೆಗೆ ಶಾಸಕರು ಸೂಚಿಸಿದ್ದಾರೆ.ಸಮೀಕ್ಷೆಗೆ ಸೂಚನೆ: ಆಶ್ರಯ ಮನೆಗಳ ದುರ್ಬಳಕೆ ತಡೆಯಲೇ ಬೇಕು. ಅದಕ್ಕಾಗಿ ಆಶ್ರಯ ಮನೆಗಳ ಸಮೀಕ್ಷೆಯನ್ನು ಮಾಡಲು ಸೂಚಿಸಲಾಗಿದೆ. ಮಾರಾಟ ಮಾಡಿದ ಆಶ್ರಯ ಮನೆಗಳನ್ನು ಹಾಗೂ ಬಾಡಿಗೆ ನೀಡಿದ ಆಶ್ರಯ ಮನೆಗಳನ್ನು ಪುರಸಭೆಯವರು ತಾಬಾ ವಹಿಸಿಕೊಳ್ಳಬೇಕು. ಅದೇ ಪ್ರಕಾರ ಗ್ರಾಮೀಣ ಭಾಗದಲ್ಲಿ ಆಶ್ರಯ ಮನೆಗಳ ಸಮೀಕ್ಷೆಯನ್ನು ತಾಲೂಕು ಪಂಚಾಯಿತಿ ನಡೆಸಲಿ ಎಂದು ಶಾಸಕ ಆರ್.ವಿ. ದೇಶಪಾಂಡೆ ತಿಳಿಸಿದ್ದಾರೆ.ಸಮಗ್ರ ಪರಿಶೀಲನೆ: ಶಾಸಕರ ಆದೇಶದ ಪ್ರಕಾರ ಪುರಸಭೆಯ ಸಿಬ್ಬಂದಿ ಪಟ್ಟಣದಲ್ಲಿನ ಆಶ್ರಯ ಮನೆಗಳ ಸಮೀಕ್ಷೆಯನ್ನು ಆರಂಭಿಸಿದ್ದಾರೆ. ಆಶ್ರಯ ಯೋಜನೆಗಳ ದುರ್ಬಳಕೆ, ಆಶ್ರಯ ಮನೆ ಮಾರಾಟ, ಬಾಡಿಗೆಗೆ ನೀಡಿರುವ ಬಗ್ಗೆ ಸಮಗ್ರವಾಗಿ ಪರಿಶೀಲಿಸಲಾಗುತ್ತಿದೆ ಎಂದು ಪುರಸಭಾ ಮುಖ್ಯಾಧಿಕಾರಿ ಅಶೋಕ ಸಾಳೆಣ್ಣನವರ ತಿಳಿಸಿದರು.