ಕೊಪ್ಪಳ: ಜನರ ಆರೋಗ್ಯದ ಮೇಲೆ ಕಾರ್ಖಾನೆಯಿಂದಾಗುವ ದುಷ್ಪರಿಣಾಮ, ಆರೋಗ್ಯ ಮತ್ತು ಪರಿಸರ ಹಾನಿಯ ಸಮೀಕ್ಷೆ ಆಗಬೇಕು ಎಂಬ ಕೂಗು ನಗರದ ನಗರಸಭೆ ಆವರಣದಲ್ಲಿ 191ನೇ ದಿನದಲ್ಲಿ ಬಲ್ಡೋಟ ತೊಲಗಿಸಿ ಕೊಪ್ಪಳ ಉಳಿಸಿ ಧರಣಿಯಲ್ಲಿ ಕೇಳಿಬಂದಿತು.

ಬಲ್ಡೋಟ ಕಾರ್ಖಾನೆ ತೊಲಗಿಸಿ ಕೊಪ್ಪಳ, ಭಾಗ್ಯನಗರದ 1.5 ಲಕ್ಷ ಜನರ ಜೀವ, ಆರೋಗ್ಯ ಉಳಿಸಬೇಕು. ಜಿಲ್ಲಾ ಕೇಂದ್ರದ ಸಮೀಪ ಬಲ್ಡೋಟ ಎಂಎಸ್‌ಪಿಎಲ್‌ ಪೆಲ್ಲೆಟ್ ಘಟಕ 2011ರಿಂದ ಮಾಲಿನ್ಯ ಮಾಡುತ್ತಿದ್ದು, ನಗರದ ಅರ್ಧ ವಾರ್ಡ್‌ಗಳಲ್ಲಿ ಧೂಳು ಹರಡುವುದರಿಂದ ಇಲ್ಲಿನ ಜನರ ಆರೋಗ್ಯದ ಮೇಲೆ ದುಷ್ಪರಿಣಾಮವನ್ನುಂಟು ಮಾಡುತ್ತದೆ. ಈ ಪೆಲ್ಲೆಟ್ ಘಟಕ ಬಂದ್ ಮಾಡಿ ನಗರದ ಜನರ ಆರೋಗ್ಯ ಖಚಿತಪಡಿಸಬೇಕು. ಬಲ್ಡೋಟ ಕಾರ್ಖಾನೆ ಬಸಾಪುರ ಕೆರೆಯನ್ನು ಅನಧಿಕೃತವಾಗಿ ವಶದಲ್ಲಿಟ್ಟುಕೊಂಡಿದ್ದು ಜನ, ಜಾನುವಾರು ನೀರು ಕುಡಿಯಲು ಕಾಂಪೌಂಡ್ ತೆರವು ಮಾಡಬೇಕು. ತುಂಗಭದ್ರಾ ಜಲಾಶಯ ವಿಷಗೊಳಿಸುವ ಎಲ್ಲ ಮಾಲಿನ್ಯಕಾರಿ ಕಾರ್ಖಾನೆಗಳನ್ನು ಬಂದ್ ಮಾಡಬೇಕು. ಹಿರೇಬಗನಾಳ, ಅಲ್ಲಾನಗರ ಸುತ್ತಲಿನ ಸ್ಪಾಂಜ್ ಐರನ್ ಮುಂತಾದ ಘಟಕಗಳನ್ನು ಕೇಂದ್ರ ಪರಿಸರ ಇಲಾಖೆ ತಜ್ಞರ ಶಿಫಾರಸಿನಂತೆ ನಿರ್ಜನ ಪ್ರದೇಶಕ್ಕೆ ಸ್ಥಳಾಂತರ ಮಾಡಬೇಕು. ಕಾರ್ಖಾನೆ ಬಾಧಿತ 22 ಹಳ್ಳಿಗಳ ಪುನರುಜ್ಜೀವನ ಮಾಡಲು ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕು. ಎಐಐಎಂಎಸ್ ಮತ್ತು ಐಐಎಸ್‌ಸಿ ಸಂಸ್ಥೆಗಳಿಂದ ಜನರ ಆರೋಗ್ಯ ಮತ್ತು ಪರಿಸರ ಹಾನಿಯ ಸಮೀಕ್ಷೆ ಮಾಡಿಸಬೇಕು ಎಂದು ಜಿಲ್ಲಾ ಬಚಾವೋ ಆಂದೋಲನ ಹಾಗೂ ಪರಿಸರ ಹಿತರಕ್ಷಣಾ ವೇದಿಕೆ ಇದರ ಜಂಟಿ ಕ್ರಿಯಾ ವೇದಿಕೆಯ ಮುಖಾಂತರ ಹೋರಾಟಗಾರರು ಎಚ್ಚರಿಸಿದರು.

ಪ್ರಧಾನ ಸಂಚಾಲಕ ಅಲ್ಲಮಪ್ರಭು ಬೆಟ್ಟದೂರು, ಸಂಚಾಲಕ ಮಲ್ಲಿಕಾರ್ಜುನ ಬಿ. ಗೋನಾಳ, ಮಂಜುನಾಥ ಜಿ. ಗೊಂಡಬಾಳ, ಹನುಮೇಶ ಕಲ್ಮಂಗಿ, ಗಾಳೆಪ್ಪ ಕಡೇಮನಿ, ಮಖಬುಲ್ ರಾಯಚೂರು, ರಾಜಶೇಖರ ಏಳುಬಾವಿ, ಶಿವಾನಂದಯ್ಯ ಬೀಳಗಿಮಠ, ಮಹಾದೇವಪ್ಪ ಮಾವಿನಮಡು, ನಾಗರಾಜ ಕುಷ್ಟಗಿ ಲಾಚನಕೇರಿ, ಪಂಪಣ್ಣ ಚಿಂತಪಲ್ಲಿ, ವಿಜಯಮಹಾಂತೇಶ ಹಟ್ಟಿ, ಶಿವಪ್ಪ ಜಲ್ಲಿ, ಚಾಂದಪಾಷಾ ಕೋಳೂರು, ಸೋಮಪ್ಪ ಹಾಲವರ್ತಿ, ಭೀಮಪ್ಪ ಯಲಬುರ್ಗಾ, ಗವಿಸಿದ್ದಪ್ಪ ಚಿಕ್ಕೇನಕೊಪ್ಪ, ರಾಮಲಿಂಗಯ್ಯ ಶಾಸ್ತ್ರಿ, ಸಂಜಯದಾಸ್ ಕೌಜಗೇರಿ ಇತರರಿದ್ದರು.