ಸಾರಾಂಶ
ಮೆಂದಾರೆ ಹಾಡಿಯ ಕುಟುಂಬಗಳಿಗೆ ಪುನರ್ವಸತಿ ಕಲ್ಪಿಸುವ ಸದುದ್ದೇಶದಿಂದ ವಿವಿಧ ಇಲಾಖೆಯ ಅಧಿಕಾರಿಗಳ ತಂಡದಿಂದ ಸರ್ವೇ ಕಾರ್ಯ ಪ್ರಾರಂಭವಾಗಿದೆ.
ಕನ್ನಡಪ್ರಭ ವಾರ್ತೆ ಹನೂರು
ಮೆಂದಾರೆ ಹಾಡಿಯ ಕುಟುಂಬಗಳಿಗೆ ಪುನರ್ವಸತಿ ಕಲ್ಪಿಸುವ ಸದುದ್ದೇಶದಿಂದ ವಿವಿಧ ಇಲಾಖೆಯ ಅಧಿಕಾರಿಗಳ ತಂಡದಿಂದ ಸರ್ವೇ ಕಾರ್ಯ ಪ್ರಾರಂಭವಾಗಿದೆ.ತಾಲೂಕಿನ ಮಲೆ ಮಹದೇಶ್ವರ ಬೆಟ್ಟ ಗ್ರಾಪಂ ವ್ಯಾಪ್ತಿಯ ಮೆಂದಾರೆ ಬುಡಕಟ್ಟು ಸೋಲಿಗ ಸಮುದಾಯದ ಒತ್ತಾಯದ ಮೇರೆಗೆ ಚಾಮರಾಜನಗರ ಜಿಲ್ಲಾಧಿಕಾರಿ ಶಿಲ್ಪಾನಾಗ್ ಆದೇಶದ ಮೇರೆಗೆ ವಿವಿಧ ಇಲಾಖೆಯ ಅಧಿಕಾರಿಗಳ ತಂಡ ಗ್ರಾಮದಲ್ಲಿ ಸೋಮವಾರ ಮನೆ ಮನೆಗೆ ಭೇಟಿ ನೀಡಿ ಸಮಗ್ರ ಮಾಹಿತಿಯೊಂದಿಗೆ ಸಮೀಕ್ಷೆ ನಡೆಸಲು ಸರ್ವೇ ಕಾರ್ಯ ಅಧಿಕಾರಿ ಸಿಬ್ಬಂದಿಯಿಂದ ನಡೆಯುತ್ತಿದೆ. ಏನಿದು ಪ್ರಕರಣ: ಏ.26ರಂದು ಇಂಡಿಗನತ್ತ ಗ್ರಾಮದಲ್ಲಿ ಮತಗಟ್ಟೆ ಧ್ವಂಸ ಪ್ರಕರಣ ಹಾಗೂ ಮೆಂದಾರೆ ನಿವಾಸಿಗಳ ಮೇಲೆ ಹಲ್ಲೆ ನಡೆಸಿರುವ ಘಟನೆಯಿಂದ ಭಯಭೀತರಾಗಿ ಸಮುದಾಯ ಸೇರಿದಂತೆ ಗ್ರಾಮದ ಮುಖಂಡರೆಲ್ಲ ಸೇರಿ ತೀರ್ಮಾನಿಸಿ ಒತ್ತಾಯದ ಮೇರೆಗೆ ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ಕೊಳ್ಳೇಗಾಲ ಉಪ ವಿಭಾಗಾಧಿಕಾರಿಗಳ ಅಧ್ಯಕ್ಷತೆಯಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳ ಸಮಿತಿ ರಚನೆ ಮಾಡಲಾಗಿದೆ.
ಕಂದಾಯ ಇಲಾಖೆಯ ರಾಜ್ಯಸ್ವ ನಿರೀಕ್ಷಕ ಶಿವಕುಮಾರ್ ಗ್ರಾಮ ಲೆಕ್ಕಿಗ ವಿನೋದ್ ಕುಮಾರ್ ಅರಣ್ಯ ಇಲಾಖೆ ಉಪವಲಯ ಅರಣ್ಯ ಅಧಿಕಾರಿ ಶಿವರಾಜ ಹಾಗೂ ಅರಣ್ಯ ರಕ್ಷಕ ಸಂಗಪ್ಪ ಗ್ರಾಮೀಣ ಅಭಿವೃದ್ಧಿ ಪಂಚಾಯತ್ ರಾಜ್ ಇಲಾಖೆ ಗ್ರಾಮ ಅಭಿವೃದ್ಧಿ ಅಧಿಕಾರಿ ಕಿರಣ್ ಕುಮಾರ್ ದ್ವಿತೀಯ ದರ್ಜೆ ಸಹಾಯಕ ಸತೀಶ್ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಸರ್ಕಾರಿ ಬುಡಕಟ್ಟು ಆಶ್ರಮ ಶಾಲೆ ಶಿಕ್ಷಕ ಚೆಲುವರಾಜ್ ಹೊರಗುತ್ತಿಗೆ ಶಿಕ್ಷಕ ಸುಧಾಕರ ಭೂಮಾಪನ ಇಲಾಖೆಯ ಭೂಮಾಪಕ ಶ್ರೀನಿವಾಸ್ ಮೂರ್ತಿ ವೀರೇಶ್ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಂಗನವಾಡಿ ಕಾರ್ಯಕರ್ತೆ ಮಾದೇವಿ ಮೆಂದಾರೆ ಗ್ರಾಮದ ಸಮಗ್ರ ಮಾಹಿತಿ ಒಳಗೊಂಡಂತೆ ಸರ್ವೇ ನಡೆಸಲು ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ.ಮನೆ ಮನೆಗೆ ಭೇಟಿ: ಅಧಿಕಾರಿಗಳ ತಂಡ ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಮನೆ ಮನೆಗೆ ಭೇಟಿ ನೀಡಿ ಅವಶ್ಯವಿರುವ ಮಾಹಿತಿ ವಿಸ್ತೃತವಾದ ವರದಿ ತಯಾರಿಸಲು ಹಾಡಿಯ ಮನೆಯ ಯಜಮಾನನಿಂದ ಮಾಹಿತಿ ಪಡೆದು ವಾಸ್ತವಂಶಗಳನ್ನು ದಾಖಲಿಸಿ ಸಮೀಕ್ಷೆ ನಡೆಸಿದ್ದಾರೆ. ಸಿಬ್ಬಂದಿ ಮನೆಯ ಮುಖ್ಯಸ್ಥನಿಂದ ಸಹಿ ಪಡೆಯುವುದು, ಸಮೀಕ್ಷೆಯಲ್ಲಿ ಸಂಗ್ರಹಿಸಲಾಗಿರುವ ಮಾಹಿತಿಯನ್ನು ಮರು ಮೌಲ್ಯಮಾಪನ ಮಾಹಿತಿ ಸಂಗ್ರಹಿಸಿ ಸಮಗ್ರ ದಾಖಲಾತಿ ಸಂಗ್ರಹಿಸಬೇಕು. ಭೂ ದಾಖಲೆಗಳು, ಆಧಾರ್ ಕಾರ್ಡ್ ಪ್ರತಿ ಜಮೀನಿನ ದಾಖಲಾತಿ ಸಂಗ್ರಹಿಸುವುದು. ಸಮೀಕ್ಷೆಗೆ ನಿಯೋಜನೆಗೊಂಡಿರುವ ಅಧಿಕಾರಿ ಸಿಬ್ಬಂದಿ ಗೈರು ಆಗದೆ ಸೂಕ್ತ ಕ್ರಮ ವಹಿಸಬೇಕು. ಫೋಟೋ ಮತ್ತು ಸಮಗ್ರ ಮಾಹಿತಿಗಳನ್ನು ಕಚೇರಿಗೆ ವರದಿ ಸಲ್ಲಿಸತಕ್ಕದ್ದು ಒಟ್ಟಾರೆ ಗ್ರಾಮದಲ್ಲಿ ಜನಸಂಖ್ಯೆ ಮನೆಗಳ ಎಣಿಕೆ ಉಳಿದ ದಾಖಲಾತಿಗಳು ಸರ್ವೇ ಕಾರ್ಯಕ್ಕೆ ನೇಮಕಗೊಂಡಿರುವ ಅಧಿಕಾರಿ ಸಿಬ್ಬಂದಿ ವರ್ಗದವರು ಸೋಮವಾರ ಮೆಂದಾರೆ ಗ್ರಾಮದಲ್ಲಿ ಸರ್ವೇ ಕಾರ್ಯದಲ್ಲಿ ಭಾಗವಹಿಸಿದ್ದಾರೆ.ಪುನರ್ವಸತಿ ಭಾಗ್ಯ ಕಲ್ಪಿಸುವುದೇ ಸರ್ಕಾರ?:
ಬುಡಕಟ್ಟು ಆದಿವಾಸಿ ಸೋಲಿಗ ಸಮುದಾಯದ ಜನಾಂಗದ ಒತ್ತಾಯದ ಮೇರೆಗೆ ಮೆಂದಾರೆ ಗ್ರಾಮವನ್ನು ಸ್ಥಳಾಂತರಿಸಲು ಸರ್ಕಾರ ಮುಂದಾಗಿರುವುದು ಸುಲಲಿತವಾಗಿ ಎಲ್ಲಾ ಕಾರ್ಯಗಳು ಮುಗಿದು ಹಾಡಿಯ ಕಾಡಿನ ಮಕ್ಕಳಿಗೆ ಸಿಗುವುದೇ ಪುನರ್ವಸತಿ ಭಾಗ್ಯ ಕಾದು ನೋಡಬೇಕಿದೆ. ಜತೆಗೆ ಮಲೆ ಮಹದೇಶ್ವರ ಬೆಟ್ಟದ ಗ್ರಾಪಂ ವ್ಯಾಪ್ತಿಯ ವಿವಿಧ ಗ್ರಾಮಗಳಿಗೂ ಸಿಗುವುದೇ ಮೂಲ ಸೌಲಭ್ಯದ ಭಾಗ್ಯ ಎನ್ನುತ್ತಾರೆ ಪ್ರಜ್ಞಾವಂತ ನಾಗರಿಕರು.