ಭೂಮಾಪಕ ಲೋಕಾ ಬಲೆಗೆ

| Published : May 22 2025, 12:47 AM IST

ಸಾರಾಂಶ

ಕಾರಟಗಿಯ ಭೂ ದಾಖಲೆಗಳ ಪರವಾನಗಿ ಸರ್ವೆಯರ್‌ ವಿಜಯ ಚೌವ್ಹಾಣ ತತ್ಕಾಲ್ ಫೋಡಿ ಮಾಡುವುದಕ್ಕಾಗಿ ₹ 50 ಸಾವಿರ ಬೇಡಿಕೆ ಇಟ್ಟಿದ್ದ. ಈ ಪೈಕಿ ₹ 30 ಸಾವಿರ ಪಡೆಯುವಾಗಲೇ ಕ್ಯಾಂಪಿನಲ್ಲಿಯೇ ಬಲೆಗೆ ಬಿದ್ದಿದ್ದಾನೆ.

ಕಾರಟಗಿ:

ತಾಲೂಕಿನ ಸಿದ್ದಾಪುರ ಸಮೀಪದ ಅರುಣೋದಯ ಕ್ಯಾಂಪ್‌ನಲ್ಲಿ ಭೂಮಾಪಕ‌ ವಿಜಯ್ ಚೌವ್ಹಾಣ್‌ ಲಂಚ ಸ್ವೀಕರಿಸುವ ವೇಳೆ ಸೋಮವಾರ ತಡರಾತ್ರಿ ಲೋಕಾಯುಕ್ತ ಬಲೆಗೆ ಬಿದ್ದಿದ್ದಾನೆ.

ಈ ನಡುವೆ ದಾಳಿ ವೇಳೆ ಕ್ಯಾಂಪಿನ 50 ಜನರು ಅಡ್ಡಿಪಡಿಸಿದ್ದರಿಂದ ಅವರ ವಿರುದ್ಧ ಲೋಕಾಯುಕ್ತರು ಕಾರಟಗಿ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಸದ್ಯ ಬಂಧನಕ್ಕೊಳಗಾಗಿರುವ ವಿಜಯ್ ಮೇ 26ರ ವರೆಗೆ ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ. ‌

ಸುಮಾರು 6 ಎಕರೆ ಜಮೀನನ್ನು ತತ್ಕಾಲ ಪೋಡಿ ಮಾಡಿಕೊಳ್ಳಲು ಭೂಮಾಪಕ ವಿಜಯ್ ₹ 50 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎಂದು ಜಿಲ್ಲಾ ಲೋಕಾಯುಕ್ತ ಠಾಣೆಗೆ ರೈತ ಸಂತೋಷ ದೂರು ನೀಡಿದ್ದರು. ಅಲ್ಲದೇ, ಮುಂಗಡವಾಗಿ ₹ 30 ಸಾವಿರ ಲಂಚದ ಹಣವನ್ನು ಅರುಣೋದಯ ಕ್ಯಾಂಪ್‌ನಲ್ಲಿ ಪಡೆಯುವ ವೇಳೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದಾರೆ. ಈ ವೇಳೆ ಭೂಮಾಪಕ ಹೈಡ್ರಾಮ ನಡೆಸಿದ್ದಾನೆ. ಊರಿನ ಗ್ರಾಮಸ್ಥರು ವಿಜಯ್ ಬಂಧನಕ್ಕೆ ತಡೆಯೊಡ್ಡಿದ್ದರು. ಸೋಮವಾರ ತಡರಾತ್ರಿ ಭೂಮಾಪಕ ವಿಜಯ ಬಂಧನ ವೇಳೆ ಲೋಕಾಯುಕ್ತ ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿಪಡಿಸಿ ಗಲಾಟೆ ಮಾಡಿದ್ದರು. ಈ ಸಂಬಂಧ ಕಾರಟಗಿ ಠಾಣೆಯಲ್ಲಿ 50 ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.