ಕೊಡವ ಹಾಗೂ ಕೊಡವ ಭಾಷಿಕರ ಸಂಘಟಿತವಾದ ನಡೆಯಿಂದ ಕೊಡವಾಮೆ ಉಳಿಸಲು ಸಾಧ್ಯ ಎಂದು ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಅಜ್ಜಿನಿಕಂಡ ಸಿ. ಮಹೇಶ್ ನಾಚಯ್ಯ ಹೇಳಿದರು.
ಕನ್ನಡಪ್ರಭ ವಾರ್ತೆ ಮಡಿಕೇರಿ
ಕೊಡವ ಹಾಗೂ ಕೊಡವ ಭಾಷಿಕರ ಸಂಘಟಿತವಾದ ನಡೆಯಿಂದ ಕೊಡವಾಮೆ ಉಳಿಸಲು ಸಾಧ್ಯ ಎಂದು ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಅಜ್ಜಿನಿಕಂಡ ಸಿ. ಮಹೇಶ್ ನಾಚಯ್ಯ ಹೇಳಿದರು.ಬೈರಂಬಾಡದ ಹಾಲುಗುಂದ ಫಾರ್ಮರ್ಸ್ ಫ್ಯಾಮಿಲಿ ಕ್ಲಬ್‌ನಲ್ಲಿ ನಡೆದ 13ನೇ ಕೊಡವ ಪುಸ್ತಕ ಪತ್ತಾಯ ಅನಾವರಣ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಾಗತಿಕ ಬದಲಾವಣೆಯ ಇಂದಿನ ದಿನದಲ್ಲಿ ಕೊಡವ ಭಾಷೆ, ಸಾಹಿತ್ಯ, ಸಂಸ್ಕೃತಿ, ಜಾನಪದ ಕಲೆಗಳ ಪರಂಪರೆಯನ್ನು ಮುಂದಿನ ಪೀಳಿಗೆಗೆ ಹಸ್ತಾಂತರಿಸುವ ಕಾರ್ಯವು ಪ್ರತಿಯೊಬ್ಬರ ಜವಾಬ್ದಾರಿಯಾಗಿದ್ದು, ಸಂಘಟಿತರಾಗಿ ಮುನ್ನಡೆಯಬೇಕು ಎಂದರು.
ಕ್ಲಬ್ ಸಂಸ್ಕೃತಿಯಿಂದ ಪುಸ್ತಕ ಸಂಸ್ಕೃತಿಯೆಡೆಗೆ ಪ್ರತಿಯೊಬ್ಬರೂ ಮುಖ ಮಾಡಿದಾಗ ಮಾತ್ರ ಅನಾದಿ ಕಾಲದಿಂದ ಬಳುವಳಿಯಾಗಿ ಬಂದಿರುವ ಬಾಳೋಪಾಟ್, ಪುತ್ತರಿಪಾಟ್, ಮಂಗಲಪಾಟ್‌ನಂತಹ ಜನಪದ ಹಾಡುಗಳಿಗೆ ಮತ್ತಷ್ಟು ಜೀವ ತುಂಬಿದಂತಾಗುವುದು ಎಂದರು.ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಫಾರ್ಮರ್ಸ್ ಕ್ಲಬ್ ಅಧ್ಯಕ್ಷ ಪಂದಿಕಂಡ ದಿನೇಶ್ ಕುಶ, ಹಾಲುಗುಂದ ಗ್ರಾಮವು ಶಾಂತಿ-ಸೌಹಾರ್ದತೆಗೆ ಹೆಸರುವಾಸಿಯಾಗಿದ್ದು, ಇಲ್ಲಿ ಹಲವು ಕೊಡವ ಭಾಷಿಕರು ಅನ್ಯೋನ್ಯತೆಯಿಂದ ಜೀವಿಸುತ್ತಿದ್ದು, ಎಲ್ಲರ ಅನುಕೂಲ ಹಾಗೂ ಕಷ್ಟ-ಸುಖದಲ್ಲಿ ಪಾಲ್ಗೊಳ್ಳುವಂತಾಗಲು ಫ್ಯಾಮಿಲಿ ಕ್ಲಬ್ ಸ್ಥಾಪಿಸಲಾಗಿದ್ದು, ಸುಮಾರು 90 ಸಂಸಾರಗಳು ಕ್ಲಬ್‌ನ ಸದಸ್ಯರಾಗಿದ್ದಾರೆ. ಕ್ಲಬ್ ಕೊಡವ ಸಂಸ್ಕೃತಿಯ ಏಳಿಗೆಗೆ ದುಡಿಯುತ್ತಿದ್ದು, ಕೊಡವ ಸಾಹಿತ್ಯ ಅಕಾಡೆಮಿಯ ನೂತನ ಯೋಜನೆಯಾದ ಪುಸ್ತಕ ಪತ್ತಾಯವನ್ನು ಸ್ಥಾಪಿಸುವುದು ಸಂಸ್ಥೆಯ ಪಾಲಿಗೆ ಹೆಮ್ಮೆಯೆನಿಸಿದೆ ಎಂದರು.
ಪುಸ್ತಕ ಪತ್ತಾಯನ್ನು ಅನಾವರಣಗೊಳಿಸಿ ಮಾತನಾಡಿದ ಊರು ತಕ್ಕರು ಹಾಗೂ ಹಿರಿಯರಾದ ಮೇಕೇರಿರ ರಘು ನಾಣಯ್ಯ ಅವರು, ಹಾಲುಗುಂದ ಗ್ರಾಮದಲ್ಲಿ ಕೊಡವ ಸಾಹಿತ್ಯ ಅಕಾಡೆಮಿ ವತಿಯಿಂದ ಪುಸ್ತಕ ಪತ್ತಾಯ ತೆರೆದಿರುವುದು ಅತ್ಯಂತ ಹೆಮ್ಮೆಯ ವಿಚಾರವಾಗಿದೆ ಎಂದರು.ಅಕಾಡೆಮಿ ಸದಸ್ಯ ನಾಪಂಡ ಸಿ. ಗಣೇಶ್ ಮಾತನಾಡಿ, ಜಿಲ್ಲೆಯ ವಿವಿದೆಡೆಗಳಲ್ಲಿ ನಡೆದ ಹಲವು ಕಾರ್ಯಕ್ರಮಗಳನ್ನು ಮುಂದಿನ ದಿನಗಳಲ್ಲಿ ಸ್ಮರಿಸಿಕೊಳ್ಳುವಂತಿದೆ ಎಂದರು.
ಅಧ್ಯಕ್ಷ ಮಹೇಶ್ ನಾಚಯ್ಯ ಫ್ಯಾಮಿಲಿ ಕ್ಲಬ್ ಅಧ್ಯಕ್ಷ ದಿನೇಶ್ ಕುಶರಿಗೆ ಅಕಾಡೆಮಿ ವತಿಯಿಂದ ಪುಸ್ತಕ ಪತ್ತಾಯದ ನೋಂದಣಿ ಪತ್ರ ಹಸ್ತಾಂತರಿಸಿದರು. ಈ ಪ್ರಯುಕ್ತ ಕ್ಲಬ್ ವತಿಯಿಂದ ಪುಸ್ತಕ ಪತ್ತಾಯ ನೋಂದಣಿ ಶುಲ್ಕವಾಗಿ 10 ಸಾವಿರ ರು. ಚೆಕ್‌ನ್ನು ಅಕಾಡೆಮಿ ಹೆಸರಿಗೆ ನೀಡಿದರು.ಪಂದಿಕಂಡ ಪ್ರಿಯಾ ಸೋಮಣ್ಣ ಪ್ರಾರ್ಥಿಸಿದರು. ಅಕಾಡೆಮಿ ಸದಸ್ಯ ನಾಪಂಡ ಸಿ. ಗಣೇಶ ಸ್ವಾಗತಿಸಿದರು. ಮಚ್ಚೇಟಿರ ಅರುಣ್ ನಿರೂಪಿಸಿದರು. ಅಕಾಡೆಮಿ ಸದಸ್ಯರಾದ ಪಾನಿಕುಟ್ಟಿರ ಕೆ. ಕುಟ್ಟಪ್ಪ, ಕಂಬೆಯಂಡ ಡೀನ ಬೋಜಣ್ಣ, ನಾಯಂದಿರ ಆರ್. ಶಿವಾಜಿ, ಚೊಟ್ಟೆಯಂಡ ಸಂಜು ಕಾವೇರಪ್ಪ, ಪೊನ್ನಿರ ಯು. ಗಗನ್ ಹಾಗೂ ಫ್ಯಾಮಿಲಿ ಕ್ಲಬ್ ಕಾರ್ಯಾಧ್ಯಕ್ಷ ಚೆಯ್ಯಂಡ ಭರತ್, ಉಪಾಧ್ಯಕ್ಷ ಅಪ್ಪಾರಂಡ ಸುಧೀರ್, ಕಾರ್ಯದರ್ಶಿ ಪೊಟ್ಟಂಡ ನಾಣಯ್ಯ ಹಾಗೂ ನಿರ್ದೇಶಕರು, ಸದಸ್ಯರು ಪಾಲ್ಗೊಂಡಿದ್ದರು.
